ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಈ ಸೋಲು ನನ್ನ ಸೋಲಲ್ಲ, ಬದಲಿಗೆ ಶಿಕ್ಷಕರ ಸೋಲಾಗಿದೆ. ಈ ಬಗ್ಗೆ ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲ ಬಂದಿದೆ ಎಂದು ದಕ್ಷಿಣ ಶಿಕ್ಷಕರ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೆಗೌಡ ತಿಳಿಸಿದರು. ಈ ಚುನಾವಣೆ ನನಗೆ ಮಹತ್ವದ ಚುನಾವಣೆಯಾಗಿತ್ತು .ನಾಲ್ಕು ಬಾರಿ ನನ್ನನ್ನು ಶಿಕ್ಷಕರು ಆಯ್ಕೆ ಮಾಡಿ ವಿಧಾನ ಪರಿಷತ್ತಿಗೆ ಕಳುಹಿಸಿದ್ದರು. ಎಲ್ಲಾ ಸಂದರ್ಭದಲ್ಲೂ ನಾನು ವಿರೋಧ ಪಕ್ಷದಲ್ಲಿದ್ದೆ. ಆದರೆ, ಪ್ರಸ್ತುತ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದು, ಹಲವಾರು ಜಟಿಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ದೃಷ್ಟಿಯಿಂದ ತಮ್ಮನ್ನು ಬೆಂಬಲಿಸುವಂತೆ ಶಿಕ್ಷಕರಲ್ಲಿ ಮನವಿ ಮಾಡಿದ್ದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.ದೀರ್ಘಕಾಲದ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡುವ ಅವಕಾಶ ಈ ಬಾರಿ ಸಿಕ್ಕಿತ್ತು. ಆದರೆ ಬಹುತೇಕ ಶಿಕ್ಷಕರು ನನಗೆ ಸೋಲುಂಟು ಮಾಡಿದ್ದಾರೆ. ಆದರೂ ಸಾಕಷ್ಟು ಮಂದಿ ಮತ ಹಾಕಿದ್ದು ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ನಾನು ಸೋತಿಲ್ಲ, ನನ್ನನ್ನು ಶಿಕ್ಷಕರೇ ಸೋಲಿಸಿದ್ದಾರೆ, ಪ್ರಜಾಪ್ರಭುತ್ವದಲ್ಲಿ ಸೋಲು- ಗೆಲುವು ಅನಿವಾರ್ಯ, ಒಬ್ಬ ಸಮರ್ಥ ಅಭ್ಯರ್ಥಿಯನ್ನ ಸೋಲಿಸಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನವಾಗಿದೆ. ಶಿಕ್ಷಕರು ಏಕೆ ಈ ರೀತಿ ಚಿಂತನೆ ಮಾಡಿದರು ಎಂಬ ಪ್ರಶ್ನೆ ಈಗಲೂ ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಕಳೆದ ೨೪ ವರ್ಷಗಳಿಂದ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದು, ಯಾವುದೇ ರಾಜಕೀಯ ನಾಯಕರ ಬೆಂಬಲವಿಲ್ಲದೇ, ಅದರಲ್ಲಿಯೂ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ಬೆಂಬಲವಿಲ್ಲದೇ, ನಾಲ್ಕು ಬಾರಿ ವಿಧಾನ ಪರಿಷತ್ ಚುನಾವಣೆ ಎದುರಿಸಿ ಗೆದ್ದಿದ್ದೇನೆ, ಈ ಚುನಾವಣೆಯಲ್ಲಿ ಇವರ ಅನುಪಸ್ಥಿತಿ ಪರಿಣಾಮ ಬೀರಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಚುನಾವಣಾ ಸಂದರ್ಭಗಳಲ್ಲಿ ನನ್ನ ಸಾಧನೆಗಳ ಕಿರುಹೊತ್ತಿಗೆಯನ್ನು ಹೊರ ತಂದಿದ್ದು, ನಾನು ಮಾಡಬೇಕಿದ್ದ ಕೆಲಸಗಳ ಬಗ್ಗೆಯೂ ಉಲ್ಲೇಖಿಸಿದ್ದೆ, ಜೊತೆಗೆ ಮಾಡಿರುವ ಸಾಧನೆಗಳ ಕುರಿತಂತೆ ಬೆಳಕು ಚೆಲ್ಲಿದ್ದೆ, ಆದರೆ ಇದೊಂದು ಅಚ್ಚರಿ, ಅನಿರೀಕ್ಷಿತ ಬೆಳವಣಿಗೆಯಾಗಿದೆ, ಚಿಂತಕರು, ಸಾಹಿತಿಗಳು ಬೇರೆ ರೀತಿಯಲ್ಲಿ ಆಲೋಚನೆ ಮಾಡುತ್ತಿದ್ದಾರೆ, ಈ ಬಾರಿ ಗೆಲುವು ಸಿಗುತ್ತದೆ ಎಂಬ ಅಂಚಲ ನಂಬಿಕೆಯಿತ್ತು, ಇದು ಸುಳ್ಳಾಯಿತು. ಸೋತಿದ್ದರೂ ಹೋರಾಟ ಬಿಡುವುದಿಲ್ಲ. ಅದು ಮುಂದುವರಿಯುತ್ತದೆ ಎಂದು ಭರವಸೆ ನೀಡಿದರು.ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವು ನೆಲಕಚ್ಚಿದೆ, ಮುಂದಿನ ದಿನಗಳಲ್ಲಿ ಆ ಪಕ್ಷಕ್ಕೆ ಮರು ಜೀವ ಬರಲು ಸಾಧ್ಯವೇ ಇಲ್ಲ, ಈಗಾಗಲೇ ಆ ಪಕ್ಷದ ಬಹುತೇಕ ನಾಯಕರು ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದಾರೆ, ಅದೇನಿದ್ದರೂ ಮುಳುಗುವ ದೋಣಿ, ಕಾಂಗ್ರೆಸ್ ಗ್ಯಾರಂಟಿಗಳ ನಡುವೆ ಈ ಪಕ್ಷ ಚೇತರಿಸಿಕೊಳ್ಳುತ್ತದೆ ಎಂಬ ವಿಶ್ವಾಸವೇ ಇಲ್ಲ ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ, ಮುಖಂಡರಾದ ಜಯರಾಂ ಕೀಲಾರ, ಗುರುಮೂರ್ತಿ, ಶಿವರುದ್ರ, ಶಂಕರೇಗೌಡ ಇದ್ದರು.