ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ತೀಟೆ ಮಾಡೋದೆ ವಿರೋಧ ಪಕ್ಷದವರ ಕೆಲಸ. ಕಳೆದ ಎರಡೂವರೆ ವರ್ಷದಿಂದ ಸರ್ಕಾರದ ನ್ಯೂನತೆ ಎತ್ತಿ ಹಿಡಿಯುವಲ್ಲಿ ಬಿಜೆಪಿ ವಿಫಲವಾಗಿದೆ. ಅದಕ್ಕಾಗಿ ಬಿಜೆಪಿ-ಜೆಡಿಎಸ್ ಏನಾದರೊಂದು ಷಡ್ಯಂತ್ರ ರೂಪಿಸುತ್ತಿದೆ. ಆದರೆ, ಅವರ ಪ್ರಯತ್ನಕ್ಕೆ ಫಲ ಸಿಗುತ್ತಿಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆರೋಪಿಸಿದರು.ಜಾತಿ ಸಮೀಕ್ಷೆ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ ಎಂಬ ಆರ್.ಅಶೋಕ್ ಹೇಳಿಕೆಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರತಿಕ್ರಿಯಿಸಿ, ನಾವು ಈಗ ನಡೆಸುತ್ತಿರುವುದು ಜಾತಿ ಗಣತಿಯಲ್ಲ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಜಾತಿಗಣತಿಯನ್ನು ಕೇಂದ್ರ ಸರ್ಕಾರ ಮಾಡುತ್ತೆ. ನಮ್ಮ ರಾಜ್ಯಕ್ಕೆ ಸೀಮಿತವಾಗಿ ಮಾಡುತ್ತಿದ್ದೇವೆ ಎಂದರು.
ಹಿಂದುಳಿದ ವರ್ಗಗಳ ಆಯೋಗದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬೆಂಬಲಿಗರು ಯಾರೂ ಇಲ್ಲ. ಒಕ್ಕಲಿಗ ಸಂಘಟನೆ ಒಪ್ಪುವ ಒಬ್ಬರು ಆಯೋಗದಲ್ಲಿದ್ದಾರೆ. ಎಲ್ಲರನ್ನೂ ಕ್ರೋಢೀಕರಿಸಿ ಆಯೋಗ ಮಾಡಲಾಗಿದೆ. ಅಶೋಕ್ ವಿರೋಧ ಪಕ್ಷದ ನಾಯಕರ ಸ್ಥಾನದಲ್ಲಿದ್ದುಕೊಂಡು ಇಂತಹ ಮಾತುಗಳನ್ನಾಡಲೇಬೇಕಲ್ಲವೇ. ನಾವು ಸಾರ್ವಜನಿಕರ ಪರ ಕೆಲಸ ಮಾಡುತ್ತೇವೆ ಎಂದರು.ಸ್ವಾಮೀಜಿ ಬಳಿ ಅಶೋಕ್ ಬಂದಿದ್ದಾಗ ಏಕೆ ಏನೂ ಮಾತನಾಡಲಿಲ್ಲ. ಸ್ವಾಮೀಜಿ ತೀರ್ಮಾನ ಮಾಡುವುದನ್ನು ನಾವು ಒಪ್ಪುತ್ತೇವೆ ಎಂದು ಹೇಳಿದ್ದರು. ಅಶೋಕ್ ಅಲ್ಲೊಂದು ಮಾತು, ಇಲ್ಲೊಂದು ಮಾತನಾಡುವುದೇಕೆ. ಈ ವಿಚಾರದಲ್ಲಿ ಅವರು ರಾಜಕಾರಣ ಮಾಡುತ್ತಿದ್ದಾರೆ ಅಷ್ಟೇ ಎಂದು ವ್ಯಂಗ್ಯವಾಡಿದರು.
ಹತ್ತು ವರ್ಷದ ಕಾಂತರಾಜು ವರದಿಯನ್ನು ಬಿಜೆಪಿ-ಜೆಡಿಎಸ್ ತಿರಸ್ಕರಿಸಬೇಕಿತ್ತು. ಪುನರ್ ಪರಿಶೀಲನೆಯನ್ನೂ ಮಾಡಲಿಲ್ಲ. ಕುಮಾರಸ್ವಾಮಿ ಅವರು ನಾನು ಸ್ವೀಕರಿಸಿಲ್ಲ ಎನ್ನುತ್ತಾರೆ. ವರದಿಯಲ್ಲಿನ ನ್ಯೂನತೆ ನೋಡಿ ಕ್ಯಾಬಿನೇಟ್‌ನಲ್ಲಿ ತಿರಸ್ಕರಿಸಬೇಕಿತ್ತು. ಏಕೆ ಆ ಕೆಲಸ ಮಾಡಲಿಲ್ಲ. ಯಡಿಯೂರಪ್ಪ, ಬೊಮ್ಮಾಯಿ ಅವರೂ ಕೂಡ ವರದಿ ಪರಿಶೀಲಿಸಲಿಲ್ಲ. ಐದು ವರ್ಷ ಸರ್ಕಾರ ನಡೆಸಿದ ಮೂವರು ಮುಖ್ಯಮಂತ್ರಿಗಳ ಜವಾಬ್ದಾರಿ ಏನು ಎಂದು ಪ್ರಶ್ನಿಸಿದರು.ಆಯೋಗದಿಂದ ಬರುವ ವರದಿಯನ್ನು ಯಾರೇ ಅಧಿಕಾರದಲ್ಲಿರಲಿ ಪರಿಶೀಲಿಸಬೇಕು. ಏನೂ ಮಾಡಲಿಲ್ಲವೆಂದರೆ ಅವರು ಮಾಡಿದ್ದು ಅಪರಾಧ. ಇದರ ಹೊಣೆಯನ್ನು ಅವರೇ ಹೊರಬೇಕು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಆಯೋಗ ರಚನೆಯಾಗಿತ್ತು. ಕಾಂತರಾಜು ವರದಿ ಕ್ಯಾಬಿನೆಟ್‌ಗೆ ಬಂದ ಮೇಲ ಚರ್ಚೆ ನಡೆಸಿದಾಗ ವಿರೋಧ ವ್ಯಕ್ತವಾಯಿತು. ಅದಕ್ಕೆ ಮನ್ನಣೆ ಕೊಟ್ಟು ಹೊಸದಾಗಿ ಆಯೋಗ ರಚಿಸಿ ಸಮೀಕ್ಷೆಗೆ ಚಾಲನೆ ಕೊಟ್ಟಿದ್ದೇವೆ. ಸಮೀಕ್ಷೆ ಮುಗಿಸುವುದಕ್ಕೆ ಒಂದು ಕಾಲಮಿತಿ ನಿಗದಿಪಡಿಸಿದ್ದೇವೆ. ಅವಧಿ ಮುಂದುವರೆಯುವ ಸಾಧ್ಯತೆಯೂ ಇದೆ ಎಂದು ಸುಳಿವು ನೀಡಿದರು.
ದಸರಾ ಉದ್ಘಾಟಿಸಲಿರುವ ಬಾನು ಮುಷ್ತಾಕ್ ಹೂ, ಮಂಗಳಾರತಿ ತೆಗೆದುಕೊಳ್ಳುವುದಿಲ್ಲವೆಂದರು. ಹೈಕೋರ್ಟ್, ಸುಪ್ರೀಂ ಕೋರ್ಟ್‌ಗೆ ಹೋಗಿ ಮುಖಭಂಗಕ್ಕೊಳಗಾದರು. ಕೇಂದ್ರ ಸರ್ಕಾರ ಯಾವುದೋ ಒಂದು ಇಳಿಕೆ ಮಾಡುವುದಲ್ಲ. ಎನ್‌ಡಿಎ ಸರ್ಕಾರದ ರೀತಿ ನಾವು ಪ್ರತಿ ವರ್ಷ ತೆರಿಗೆ ಹಾಕ್ತಿಲ್ಲ. ಮಿತಿ ಮೀರಿ ಏರಿಕೆ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು.