ಗಬ್ಬು ನಾರುತ್ತಿದೆ ಬಿ. ಕೋಡಿಹಳ್ಳಿ ಅಂಡರ್‌ಬ್ರಿಡ್ಜ್ ರಸ್ತೆ

| Published : Nov 19 2024, 12:51 AM IST

ಸಾರಾಂಶ

ಪಟ್ಟಣ ಸ್ವಚ್ಛವಾಗಿದ್ದರೆ ಮಾತ್ರ ಸಾರ್ವಜನಿಕರು ನೆಮ್ಮದಿಯಿಂದ ಮತ್ತು ಆರೋಗ್ಯದಿಂದ ಬದುಕಲು ಸಾಧ್ಯ, ಆದರೆ ಉಸಿರಾಟ ನಡೆಸಲು ಸಹ ಕಷ್ಟದಿಂದ ಬದುಕುತಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಬೀರೂರು ಪಟ್ಟಣದ ಪುರಿಭಟ್ಟಿ ನಿವಾಸಿಗಳ ಬದುಕು.

ಕನ್ನಡಪ್ರಭ ವಾರ್ತೆ

ಬೀರೂರು ಎನ್. ಗಿರೀಶ್ಪಟ್ಟಣ ಸ್ವಚ್ಛವಾಗಿದ್ದರೆ ಮಾತ್ರ ಸಾರ್ವಜನಿಕರು ನೆಮ್ಮದಿಯಿಂದ ಮತ್ತು ಆರೋಗ್ಯದಿಂದ ಬದುಕಲು ಸಾಧ್ಯ, ಆದರೆ ಉಸಿರಾಟ ನಡೆಸಲು ಸಹ ಕಷ್ಟದಿಂದ ಬದುಕುತಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಬೀರೂರು ಪಟ್ಟಣದ ಪುರಿಭಟ್ಟಿ ನಿವಾಸಿಗಳ ಬದುಕು.

ಇದು ಇವತ್ತಿನದಲ್ಲ. ಕಳೆದ 30 ವರ್ಷಗಳಿಂದಲೂ ಸಹ ಇಲ್ಲಿ ವಾಸಿಸುವ ನಿವಾಸಿಗಳು ಹಾಗೂ ಬಿ. ಕೋಡಿಹಳ್ಳಿ, ಬಳ್ಳಿಗನೂರು, ಮುಂಡ್ರೆ, ಮತ್ತಿತರ ಗ್ರಾಮಗಳಿಗೆ ತೆರಳುವ ವಾಹನ ಸವಾರರು ಇಲ್ಲಿ ಸಂಚರಿಸುವಾಗ ಗಬ್ಬು ನಾತದಿಂದ ಮೂಗು ಮುಚ್ಚಿಕೊಂಡು ಚಲಿಸಬೇಕು. ಜೊತೆಗೆ ಇಲ್ಲಿನ ಜನ ಇದರ ದುರ್ವಾಸನೆಯಿಂದ ಬದುಕಬೇಕಾದ ಪರಿಸ್ಥಿತಿ ಇದೆ.ಈ ಹಿಂದೆ ಬೀರೂರು ಪಟ್ಟಣದಿಂದ ಲಿಂಗದಹಳ್ಳಿಗೆ ತೆರಳಬೇಕಾದರೆ ಬಿ. ಕೋಡಿಹಳ್ಳಿ ರಸ್ತೆ ಮಾರ್ಗವಾಗಿ ಮಾರ್ಗದ ಕ್ಯಾಂಪ್ ತಲುಪಿ ತೆರಳಿ ಲಿಂಗದಹಳ್ಳಿ ರಸ್ತೆಗೆ ಸೇರಬೇಕಾಗಿತ್ತು. ರಸ್ತೆ ಸಹ ಚೆನ್ನಾಗಿತ್ತು. ಹುಬ್ಬಳ್ಳಿವರೆಗೆ ರೈಲ್ವೆ ಜೋಡಿ ಮಾರ್ಗ ಆರಂಭವಾದ ಸಂದರ್ಭದಲ್ಲಿ ರೈಲ್ವೆ ಅಧಿಕಾರಿಗಳು ಬಿ. ಕೋಡಿಹಳ್ಳಿ ಮಾರ್ಗದ ಅಗಲವಾಗಿದ್ದ ಮೇಲ್ಸೇತುವೆ ಒಡೆದು ಕಿರಿದಾಗಿಸಿದ ಪರಿಣಾಮ ಆಟೋಗಳನ್ನು ಬಿಟ್ಟರೆ ಬೇರ‍್ಯಾವ ವಾಹನ ಸಂಚಾರಕ್ಕೂ ಆಗದ ಪರಿಸ್ಥಿತಿ ಇದೆ.

ಬೀರೂರು ಪಟ್ಟಣದಲ್ಲಿ ಯುಜಿಡಿ ಕಾಮಗಾರಿ ಆರಂಭವಾದಗಿನಿಂದ ಇಂದಿನವರೆಗು ರೈಲ್ವೆ ಅಧಿಕಾರಿಗಳು ಬ್ರಿಡ್ಜ್ ಕೆಳಗಡೆ ಯುಜಿಡಿ ಮಾರ್ಗ ತೆಗೆದುಕೊಂಡು ಹೋಗಲು ಅನುಮತಿ ಕೊಡದ ಪರಿಣಾಮ ಸುಮಾರು 3-4 ವಾರ್ಡಗಳ ಕೊಳಚೆ ನೀರು ಈ ರಸ್ತೆಯಲ್ಲಿ ಹರಿಯಲಾರಂಭಿಸಿದೆ. ಜನ ಅದರಲ್ಲೇ ನಿತ್ಯ ಸಂಚರಿಸಿ ರೋಗ ರುಜಿನಗಳನ್ನು ಆಹ್ವಾನಿಸುವಂತಾಗಿದೆ. ಓಟ್ಟಾರೆ ಪಟ್ಟಣ ಮತ್ತು ಮತ್ತಿತರ ಗ್ರಾಮಗಳಿಗೆ ಸಂಪರ್ಕ ಕೊಂಡಿಯಾಗಿರುವ ರಸ್ತೆಗಳು ಸುಗಮವಾಗಿ ಆರೊಗ್ಯಕರವಾಗಿರಲಿ ಮತ್ತು ಇಲ್ಲಿನ ಕೊಳಚೆ ನೀರನ್ನು ರೈಲ್ವೆ ಅಂಡರ್ ಪಾಸ್ ಮೂಲಕ ರಾಜಕಾಲುವೆಗೆ ಸೇರಿಸಿ ದುರ್ವಾಸನೆ ಮುಕ್ತ ರಸ್ತೆಯನ್ನಾಗಿಸುತ್ತಾರೋ ಪುರಸಭೆಯವರು ಎಂದು ಕಾದು ನೋಡಬೇಕಿದೆ.

ಈ ಬ್ರಿಡ್ಜ್ ಕೆಳಗೆ ಹರಿಯುತ್ತಿರುವ ಕೊಳಚೆ ನೀರಿನ ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ. ಇದನ್ನು ಸರಿಪಡಿಸಲು ಚಿಕ್ಕಮಗಳೂರಿನ ಒಳಚರಂಡಿ ಅಧಿಕಾರಿಗಳಿಗೆ ಪತ್ರ ಸಹ ಬರೆಯಲಾಗಿದೆ. ಅವರು ಬಂದ ನಂತರ ಶಾಸಕರ ಸಹಕಾರ ಪಡೆದು ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿ ಇಲ್ಲಿನ ಯುಜಿಡಿ ಕೊಳಚೆ ನೀರನ್ನು ಚರಮಡಿ ಮೂಲಕ ಸಾಗಿಸಲು ಪ್ರಯತ್ನ ನಡೆಸಲಾಗುವುದು.ವನಿತಾಮಧು ಪುರಸಭೆ ಅಧ್ಯಕ್ಷೆ.