ಬ್ರಿಟಿಷರ ವಿರುದ್ಧ ಮೊದಲು ಸ್ವಾತಂತ್ರ್ಯಕ್ಕಾಗಿ ರಣಕಹಳೆ ಮೊಳಗಿಸಿದ್ದು ವೀರರಾಣಿ ಕಿತ್ತೂರ ಚೆನ್ನಮ್ಮ. ದತ್ತು ಮಕ್ಕಳ ಹಕ್ಕನ್ನು ಜಗತ್ತಿನಲ್ಲೇ ಮೊದಲ ಬಾರಿಗೆ ಪ್ರತಿಪಾದಿಸಿದ ಅಪ್ರತಿಮ ನಾಯಕಿ.
ಕನ್ನಡಪ್ರಭ ವಾರ್ತೆ ಗದಗ
ಬ್ರಿಟಿಷರ ವಿರುದ್ಧ ಮೊದಲು ಸ್ವಾತಂತ್ರ್ಯಕ್ಕಾಗಿ ರಣಕಹಳೆ ಮೊಳಗಿಸಿದ್ದು ವೀರರಾಣಿ ಕಿತ್ತೂರ ಚೆನ್ನಮ್ಮ. ದತ್ತು ಮಕ್ಕಳ ಹಕ್ಕನ್ನು ಜಗತ್ತಿನಲ್ಲೇ ಮೊದಲ ಬಾರಿಗೆ ಪ್ರತಿಪಾದಿಸಿದ ಅಪ್ರತಿಮ ನಾಯಕಿ ಎಂದು ವಿಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಹೇಳಿದರು.ಗದಗ ನಗರದ ವಿಠಲಾರೂಢ ಮಂದಿರದಲ್ಲಿ ಪಂಚಮಸಾಲಿ ಸಮಾಜದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ವೀರರಾಣಿ ಕಿತ್ತೂರು ಚೆನ್ನಮ್ಮ ಅವರ 248ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಚೆನ್ನಮ್ಮನ ಜಯಂತಿಯನ್ನು ಸರ್ಕಾರ ಹಾಗೂ ಜಿಲ್ಲಾಡಳಿತ ಪ್ರತಿ ವರ್ಷ ವಿಜೃಂಭಣೆಯಿಂದ ಆಚರಿಸುತ್ತಿವೆಯಾದರೂ, ಆಕೆಯ ನೈಜ ಇತಿಹಾಸ ಹಾಗೂ ತ್ಯಾಗದ ಆಳವನ್ನು ಅರಿತವರ ಸಂಖ್ಯೆ ಕಡಿಮೆ ಇದೆ. ಪತಿ ಮತ್ತು ಮಗ ತೀರಿಕೊಂಡ ನಂತರವೂ ಎದೆಗುಂದದೆ, ಏಕಾಂಗಿಯಾಗಿ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ರಣಕಹಳೆ ಮೊಳಗಿಸಿದ ಧೀಮಂತೆ ಆಕೆ ಎಂದರು.ಮುಖ್ಯ ಅತಿಥಿಯಾಗಿದ್ದ ಬಿಜೆಪಿ ಯುವ ಉಮೇಶಗೌಡ ಪಾಟೀಲ ಮಾತನಾಡಿ, ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಶೌರ್ಯ, ಸ್ವಾಭಿಮಾನ ಹಾಗೂ ದೇಶಪ್ರೇಮದ ಆದರ್ಶಗಳು ಇಂದಿನ ಯುವಜನತೆ ಮತ್ತು ಮಹಿಳೆಯರಿಗೆ ಸದಾ ದಾರಿದೀಪ. ಅನ್ಯಾಯ ಮತ್ತು ದಬ್ಬಾಳಿಕೆಯ ವಿರುದ್ಧ ಧ್ವನಿ ಎತ್ತುವುದನ್ನು ಕಲಿಸಿದ ಚೆನ್ನಮ್ಮನ ಜೀವನ ಪ್ರತಿಯೊಬ್ಬರಿಗೂ ಮಾದರಿ. ಎಂತಹ ವಿಷಮ ಮತ್ತು ಸಂಕಷ್ಟದ ಸಂದರ್ಭದಲ್ಲೂ ಧೈರ್ಯ ಕಳೆದುಕೊಳ್ಳದೆ ಆತ್ಮವಿಶ್ವಾಸ, ದೃಢತೆಯಿಂದ ಮುನ್ನಡೆಯುವ ಸಂದೇಶವನ್ನು ಚೆನ್ನಮ್ಮನ ಇತಿಹಾಸ ಸಾರುತ್ತದೆ ಎಂದರು.
ಸಮಾಜದ ಮುಖಂಡ ಸಿದ್ಧಣ್ಣ ಪಲ್ಲೇದ, ಸಮಿತಿಯ ಗೌರವಾಧ್ಯಕ್ಷ ವಿಜಯಕುಮಾರ ಗಡ್ಡಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ನಗರದ ಐತಿಹಾಸಿಕ ಕಿತ್ತೂರು ಚೆನ್ನಮ್ಮ ವೃತ್ತದಿಂದ ವಿಠಲಾರೂಢ ಸಭಾಭವನದವರೆಗೆ ಕಿತ್ತೂರು ಚೆನ್ನಮ್ಮ ಅವರ ಮೂರ್ತಿಯ ಭವ್ಯ ಮೆರವಣಿಗೆ ವಾದ್ಯಮೇಳಗಳೊಂದಿಗೆ ವಿಜೃಂಭಣೆಯಿಂದ ಜರುಗಿತು. ಸಮಾಜದ ನೂರಾರು ಮುಖಂಡರು ಹಾಗೂ ಮಹಿಳೆಯರು ಮೆರವಣಿಗೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.ವೇದಿಕೆಯಲ್ಲಿ ಪ್ರಮುಖರಾದ ಅಜ್ಜನಗೌಡ ಹಿರೇಮನಿ ಪಾಟೀಲ, ಮೋಹನ ಮಾಳಶೆಟ್ಟಿ, ಎಂ.ಎಸ್. ಕರೀಗೌಡರ, ವಸಂತ ಪಡಗದ, ಪ್ರಕಾಶ ಅಂಗಡಿ, ಮಹಾಂತೇಶ ಅಂಗಡಿ, ಅನಿತಾ ಗಡ್ಡಿ, ವಿಜಯಲಕ್ಷ್ಮಿ ದಿಂಡೂರು ಸೇರಿದಂತೆ ಸಮಾಜದ ಅನೇಕ ಗಣ್ಯರು, ಮುಖಂಡರು ಉಪಸ್ಥಿತರಿದ್ದರು.