ಸಾರಾಂಶ
ಲಕ್ಷ್ಮೇಶ್ವರ ಪಟ್ಟಣದ ಪುರಸಭೆ ಎದುರು ಮೈ ಮೇಲೆ ಮಲ ಸುರಿದುಕೊಂಡು ಬುಧವಾರ ಬೆಳಗ್ಗೆ ಪ್ರತಿಭಟನೆ ನಡೆಸುತ್ತಿದ್ದ ವ್ಯಕ್ತಿಗೂ ಪುರಸಭೆಗೂ ಯಾವುದೇ ಸಂಬಂಧವಿಲ್ಲ. ಆತನು ಪುರಸಭೆಯಲ್ಲಿ ಪೌರ ಕಾರ್ಮಿಕನಾಗಿ ಸೇವೆ ಸಲ್ಲಿಸಿಲ್ಲ ಎಂದು ಲಕ್ಷ್ಮೇಶ್ವರ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಬಸವಣ್ಣೆಪ್ಪ ನಂದೆಣ್ಣವರ ಹೇಳಿದರು.
ಲಕ್ಷ್ಮೇಶ್ವರ: ಪಟ್ಟಣದ ಪುರಸಭೆ ಎದುರು ಮೈ ಮೇಲೆ ಮಲ ಸುರಿದುಕೊಂಡು ಬುಧವಾರ ಬೆಳಗ್ಗೆ ಪ್ರತಿಭಟನೆ ನಡೆಸುತ್ತಿದ್ದ ವ್ಯಕ್ತಿಗೂ ಪುರಸಭೆಗೂ ಯಾವುದೇ ಸಂಬಂಧವಿಲ್ಲ. ಆತನು ಪುರಸಭೆಯಲ್ಲಿ ಪೌರ ಕಾರ್ಮಿಕನಾಗಿ ಸೇವೆ ಸಲ್ಲಿಸಿಲ್ಲ ಎಂದು ಲಕ್ಷ್ಮೇಶ್ವರ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಬಸವಣ್ಣೆಪ್ಪ ನಂದೆಣ್ಣವರ ಹೇಳಿದರು.
ಗುರುವಾರ ಪಟ್ಟಣದ ಪುರಸಭೆಯ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.ಬುಧವಾರ ಪಟ್ಟಣದ ಪುರಸಭೆ ಮುಂದೆ ಮೈ ಮೇಲೆ ಮಲ ಸುರಿದು ಕೊಂಡು ಮಗನಿಗೆ ನೌಕರಿ ಕೊಡಿಸುವ ಸಲುವಾಗಿ ಪ್ರತಿಭಟನೆ ನಡೆಸಿದಾತನಿಗೂ ಪುರಸಭೆಗೂ ಯಾವುದೇ ಸಂಬಂಧವಿಲ್ಲ. ಪುರಸಭೆಯ ಪೌರ ಕಾರ್ಮಿಕರ ಮಾನ ತೆಗೆಯುವ ಸಲುವಾಗಿ ಈ ರೀತಿಯ ಕೃತ್ಯ ಮಾಡಿರುವುದು ಖಂಡನೀಯ. ಆತನು ಹೊರ ಗುತ್ತಿಗೆ ಆಧಾರದಲ್ಲಿ ಪುರಸಭೆಯಲ್ಲಿ ಸೇವೆ ಸಲ್ಲಿಸಿಲ್ಲ. ಹೀಗೆ ಏಕಾಏಕಿ ಮಲ ಸುರಿದುಕೊಂಡು ಪ್ರತಿಭಟನೆ ನಡೆಸುವಂತೆ ಯಾರೋ ಆತನಿಗೆ ಕುಮ್ಮಕ್ಕು ನೀಡಿರಬೇಕು ಎಂದು ಅನಿಸುತ್ತದೆ. ಈ ಘಟನೆ ಪೌರ ಕಾರ್ಮಿಕರ ಮರ್ಯಾದೆಗೆ ಧಕ್ಕೆ ತರುವ ಕಾರ್ಯವಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ಆತನ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ಅವರು ಹೇಳಿದರು.ಈ ವೇಳೆ ಪುರಸಭೆಯ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಸುರೇಶ ಬಸವಾನಾಯ್ಕರ್ ಎಂಬಾತನು ನಾವು ಇಲ್ಲಿ ಇಲ್ಲದ ವೇಳೆ ಪುರಸಭೆಯ ಎದುರು ಮೈ ಮೇಲೆ ಮಲ ಸುರಿದುಕೊಂಡು ಪ್ರತಿಭಟನೆ ನಡೆಸಿರುವುದು ನ್ಯಾಯ ಕೇಳುವ ಸರಿಯಾದ ಮಾರ್ಗವಲ್ಲ. ಆತನು ನಮಗೆ ಅನ್ಯಾಯವಾಗಿದೆ ಎಂದು ನಮಗೆ ಕೇಳಿದಲ್ಲಿ, ಪರಿಶೀಲನೆ ನಡೆಸಿ ಸೂಕ್ತ ನ್ಯಾಯ ಒದಗಿಸುವ ಕಾರ್ಯ ಮಾಡಬಹುದಿತ್ತು. ಆದರೆ ಹೀಗೆ ಏಕಾಏಕಿ ಪ್ರತಿಭಟನೆಗೆ ಇಳಿದಿದ್ದಾರೆ. ಅದು ತಪ್ಪು ಎಂದು ಹೇಳಿದರು.ಈ ವೇಳೆ ದೇವಣ್ಣ ನಂದೆಣ್ಣವರ, ರಾಜು ನಂದೆಣ್ಣವರ, ಮಂಜುನಾಥ ಬಸವಾ ನಾಯಕರ, ಅನೀಲ ನಂದೆಣ್ಣವರ, ಮಂಜುನಾಥ ಹಾದಿಮನಿ, ರಮೇಶ ಕೊಣ್ಣೂರ, ವಿಶ್ವನಾಥ ಹಾದಿಮನಿ, ಮಂಜುನಾಥ ಅಯ್ಯಮ್ಮನವರ, ಅಶೋಕ ನಡುವಲಕೇರಿ, ಪ್ರಕಾಶ್ ಹಿತ್ತಲಮನಿ, ಬಸಪ್ಪ ಕಟ್ಟಿಮನಿ, ಲಕ್ಷ್ಮಪ್ಪ ಗುಡಗೇರಿ, ಭೀಮಪ್ಪ ಧೂಳಮ್ಮನವರ, ಪ್ರವೀಣ ಗಡದವರ, ರವಿ ಗಾಜಿ ಸೇರಿದಂತೆ ಅನೇಕರು ಇದ್ದರು.