ಮಕ್ಕಳ ಮೇಲೆ ಕೇವಲ ಅನುಕಂಪ ತೋರಿದರೆ ಸಾಲದು ಅವರಿಗೆ ಹಕ್ಕು ನೀಡಿ: ಶೇಖರಗೌಡ ರಾಮತ್ನಾಳ

| Published : Dec 08 2024, 01:15 AM IST

ಮಕ್ಕಳ ಮೇಲೆ ಕೇವಲ ಅನುಕಂಪ ತೋರಿದರೆ ಸಾಲದು ಅವರಿಗೆ ಹಕ್ಕು ನೀಡಿ: ಶೇಖರಗೌಡ ರಾಮತ್ನಾಳ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳ ಮೇಲೆ ಕೇವಲ ಅನುಕಂಪ ತೋರಿದರೆ ಸಾಲದು. ಪ್ರತಿಯೊಂದು ಮಕ್ಕಳಿಗೆ ನೀಡುವ ಹಕ್ಕುಗಳನ್ನು ಪ್ರಾಮಾಣಿಕವಾಗಿ ಮುಟ್ಟಿಸುವ ಕಾರ್ಯಕ್ಕೆ ಮುಂದಾಗಬೇಕು.

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಮಕ್ಕಳ ಮೇಲೆ ಕೇವಲ ಅನುಕಂಪ ತೋರಿದರೆ ಸಾಲದು. ಪ್ರತಿಯೊಂದು ಮಕ್ಕಳಿಗೆ ನೀಡುವ ಹಕ್ಕುಗಳನ್ನು ಪ್ರಾಮಾಣಿಕವಾಗಿ ಮುಟ್ಟಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಹೇಳಿದರು.

ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜಿಪಂ ಕೊಪ್ಪಳ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಹಾಗೂ ಹಿರೇವಂಕಲಕುಂಟಾ ಗ್ರಾಪಂ ಹಾಗೂ ಶಿಶುಭಿವೃದ್ದಿ ಇಲಾಖೆ ಸೇರಿದಂತೆ ನಾನಾ ಇಲಾಖೆಗಳ ಸಹಯೋಗದಲ್ಲಿ ನಡೆದ ಮಕ್ಕಳ ಹಕ್ಕುಗಳ ಗ್ರಾಮ ಸಭೆ ಉದ್ದೇಶಿಸಿ ಮಾತನಾಡಿದರು.

ಮಕ್ಕಳ ಹಕ್ಕು, ಕರ್ತವ್ಯಗಳಿಗೆ ಚ್ಯುತಿ ಬರದಂತೆ ರಕ್ಷಣೆ ನೀಡುವುದು ನಮ್ಮೆಲ್ಲರ ಮುಖ್ಯ ಜವಾಬ್ದಾರಿಯಾಗಿದೆ. ದೇಶದಲ್ಲಿನ ಎಲ್ಲಾ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ, ರಾಜ್ಯ ಸರ್ಕಾರಗಳು ಸಾಕಷ್ಟು ಯೋಜನೆ ನೀಡಿವೆ. ಅವುಗಳನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಜಾತಿ, ಭೇದ, ತಾರತಮ್ಯ, ನಿರ್ಲಕ್ಷ್ಯ ಮಾಡದೆ ಅವುಗಳನ್ನು ಮಕ್ಕಳಿಗೆ ನೀಡಬೇಕು. ಮಕ್ಕಳಿಗೆ ಬದುಕುವ ಹಕ್ಕು, ಅಭಿವೃದ್ಧಿ ಹೊಂದುವ ಹಕ್ಕು, ಶೋಷಣೆ ವಿರುದ್ಧ ಸಂರಕ್ಷಣೆ ಪಡೆಯುವ ಹಕ್ಕು ಹಾಗೂ ಮಾತನಾಡುವ ಹಕ್ಕು, ನಾನಾ ಸ್ಪರ್ಧೆಗಳಲ್ಲಿ ಭಾಗವಹಿಸುವ ಹಕ್ಕು ಮುಕ್ತವಾಗಿದ್ದರೂ ಇನ್ನೂ ಮಕ್ಕಳ ಮೇಲೆ ಅತಿ ಹೆಚ್ಚು ಹಲ್ಲೆ, ಜಾತಿ ವ್ಯವಸ್ಥೆ, ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರ ಘಟನೆಗಳು ನಡೆಯುತ್ತಿರುವುದು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಶಿಶು ಯೋಜನಾ ಅಭಿವೃದ್ಧಿ ಅಧಿಕಾರಿ ಬೆಟ್ಟದಪ್ಪ ಮಾಳೆಕೊಪ್ಪ ಮಾತನಾಡಿ, ಮಕ್ಕಳ ಮೇಲೆ ಹಲ್ಲೆ, ದೌರ್ಜನ್ಯ ನಡೆಸಿದರೆ ಅಂತಹ ಅಪರಾಧ ಮಾಡಿದ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ನೀಡುವ ಕಾನೂನು ಜಾರಿಯಲ್ಲಿವೆ. ಯಾವ ಮಕ್ಕಳು ಭಯಪಡುವ ಅಗತ್ಯವಿಲ್ಲ. ಮಕ್ಕಳನ್ನು ಅತ್ಯಂತ ಗೌರವದಿಂದ ಕಾಣುವ ಮನೋಭಾವ ನಮ್ಮೆಲ್ಲರಲ್ಲಿ ಬರಬೇಕು ಎಂದರು.

ಜಿಲ್ಲಾ ಮಕ್ಕಳ ರಕ್ಷಣಾ ಆಯೊಗದ ಅಧಿಕಾರಿ ಮಹಾಂತಸ್ವಾಮಿ ಮಾತನಾಡಿ, ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳನ್ನು ತಡೆಗಟ್ಟಲು ಸರ್ಕಾರ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ ೨೦೧೨(ಪೊಕ್ಸೊ), ಈ ಕಾಯ್ದೆ ಉಲ್ಲಂಘಿಸಿದವರಿಗೆ ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು ಎಂದರು.

ಬಳಿಕ ಸಂವಾದ ನಡೆಯಿತು.ಗ್ರಾಪಂ ಅಧ್ಯಕ್ಷ ಹುಲಿಗೆಮ್ಮ ಬಸವರಾಜ ತಳವಾರ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಪ್ರಕಾಶ ಕರಡದ, ತಾಲೂಕ ಅಧಿಕಾರಿಗಳಾದ ರಮೇಶ ಜಿಣಗಿ, ನಿವೇದಿತಾ ಡಿ., ಎಎಸ್‌ಐ ಮಹಾಂತೇಶ ತಮ್ಮಣ್ಣನವರು, ಪ್ರಾಂಶುಪಾಲರಾದ ಹನಮೇಶ ಕುರಿ, ಅಮರೇಶ ಹಿರೇಮಠ, ಅಂಗನವಾಡಿ ಹಿರಿಯ ಮೆಲ್ವೀಚಾರಕಿ ಲಲಿತಾ ನಾಯ್ಕರ, ಬಿಆರ್‌ಸಿ ಮಾನಪ್ಪ ಪತ್ತಾರ, ಶಿವಲೀಲಾ ವನ್ನೂರ, ರವಿಕುಮಾರ ಪವಾರ, ಪ್ರತಿಭಾ ಕಾಶಿಮಠ, ರವಿಕುಮಾರ ಬಡಿಗೇರ ಮತ್ತಿತರರು ಇದ್ದರು.