ಬಿ.ರಂ.ವ್ಯವಸ್ಥಾಪನಾ ಸಮಿತಿಗೆ ಜೆ.ಶ್ರೀನಿವಾಸ್ ಅಧ್ಯಕ್ಷ

| Published : Jan 09 2025, 12:45 AM IST

ಸಾರಾಂಶ

ಯಳಂದೂರು ತಾಲೂಕಿನ ಬಿಳಿಗಿರಿ ರಂಗನಬೆಟ್ಟದ ಶ್ರೀ ಬಿಳಿಗಿರಿರಂಗನಾಥಸ್ವಾಮಿ ದೇಗುಲದ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜೆ.ಶ್ರೀನಿವಾಸ್‌ರವರಿಗೆ ಸಮಿತಿ ಸದಸ್ಯರು ಮುಖಂಡರು ಬುಧವಾರ ದೇಗುಲದ ಆವರಣದಲ್ಲಿ ಅಭಿನಂದಿಸಿದರು.

ಕನ್ನಡಪ್ರಭ ವಾರ್ತೆ ಯಳಂದೂರುತಾಲೂಕಿನ ಪ್ರಸಿದ್ಧ ಪೌರಾಣಿಕ ಕ್ಷೇತ್ರವಾಗಿರುವ ಬಿಳಿಗಿರಿ ರಂಗನಬೆಟ್ಟದಲ್ಲಿರುವ ಶ್ರೀ ಬಿಳಿಗಿರಿರಂಗನಾಥಸ್ವಾಮಿ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಜೆ.ಶ್ರೀನಿವಾಸ್‌ರನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು.ಈ ಸಂಬಂಧ ಬುಧವಾರ ಪಟ್ಟಣದ ಬಿಳಿಗಿರಿರಂಗನಾಥಸ್ವಾಮಿ ದೇಗುಲದ ಕಚೇರಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್‌ಕುಮಾರ್ ನೇತೃತ್ವದಲ್ಲಿ ನಡೆದ ಸಮಿತಿಯ ಮೊದಲ ಸಭೆಯಲ್ಲಿ ಜೆ.ಶ್ರೀನಿವಾಸ್‌ರನ್ನು ಎಲ್ಲರೂ ಒಮ್ಮತದಿಂದ ಅಧ್ಯಕ್ಷ ಗಾದಿಗೆ ಆಯ್ಕೆ ಮಾಡಿದರು. ಒಟ್ಟು ಈ ಸಮಿತಿಯಲ್ಲಿ ೯ ಮಂದಿ ಸದಸ್ಯರು ಇದ್ದಾರೆ. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜೆ.ಶ್ರೀನಿವಾಸ್ ಮಾತನಾಡಿ, ಬಿಳಿಗಿರಿರಂಗನಬೆಟ್ಟದ ದೇವಸ್ಥಾನಕ್ಕೆ ಪೌರಾಣಿಕ ಹಿನ್ನೆಲೆ ಇದೆ. ಈ ದೇಗುಲ ಅತ್ಯಂತ ಪುರಾತನ ದೇಗುಲವಾಗಿದ್ದು ಪ್ರತಿ ವರ್ಷ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಅಲ್ಲದೆ ವರ್ಷದಲ್ಲಿ ಎರಡು ಬಾರಿ ಇಲ್ಲಿ ರಥೋತ್ಸವ ನಡೆಯುತ್ತದೆ. ಅಲ್ಲದೆ ಗಂಗಾಧರೇಶ್ವರನ ದೇಗುಲದಲ್ಲೂ ತೇರು ನಡೆಯುತ್ತದೆ. ದೇಶ ವಿದೇಶಗಳಿಂದಲೂ ಇಲ್ಲಿಗೆ ಭಕ್ತರು ಬರುತ್ತಾರೆ. ಇಲ್ಲಿಗೆ ಈಚೆಗೆ ಬರುವ ಭಕ್ತರ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆ. ಭಕ್ತರಿಗೆ ಮೂಲ ಸವಲತ್ತುಗಳನ್ನು ನೀಡಲು ಇನ್ನಷ್ಟು ನೂತನ ಸವಲತ್ತುಗಳನ್ನು ನೀಡಲು ನಾನು ಪ್ರಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ದೇಗುಲದ ಅಭಿವೃದ್ಧಿಗೆ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳಿಗೂ ನಾನು ಬದ್ಧನಾಗಿ ಕರ್ತವ್ಯ ನಿರ್ವಹಿಸುತ್ತೇನೆ.

ಈ ಸಮಿತಿಯಲ್ಲಿ ೯ ಜನ ಸದಸ್ಯರಿದ್ದು ಎಲ್ಲಾ ಸದಸ್ಯರ, ಸ್ಥಳೀಯ ಶಾಸಕರ ಹಾಗೂ ಚುನಾಯಿತಿ ಜನಪ್ರತಿನಿಧಿಗಳು ಎಲ್ಲಕ್ಕಿಂತ ಹೆಚ್ಚಾಗಿ ಭಕ್ತರು ಸೇರಿದಂತೆ ಎಲ್ಲರ ಸಲಹೆ ಸೂಚನೆಗಳನ್ನು ಪಡೆದುಕೊಂಡು ದೇಗುಲವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿ, ಬರುವ ಭಕ್ತರಿಗೆ ಸಕಲ ಸೌಲಭ್ಯಗಳನ್ನು ನೀಡಲು ಪ್ರಮಾಣಿಕವಾಗಿ ಶ್ರಮಿಸುತ್ತೇನೆ. ನನ್ನನ್ನು ಈ ಸ್ಥಾನಕ್ಕೆ ಒಮ್ಮತದಿಂದ ಆಯ್ಕೆ ಮಾಡಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಯ ಅನುಷ್ಠಾನದ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಗುಂಬಳ್ಳಿ ರಾಜಣ್ಣ, ಕೇತಮ್ಮ, ಸ್ಪೂರ್ತಿ, ವೆಂಕಟರಾಮು, ಸಿದ್ದರಾಜು, ಎಂ.ಸುರೇಶ್, ವಿ. ನಾರಾಯಣಸ್ವಾಮಿ, ಅರ್ಚಕ ರವಿಕುಮಾರ್ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್‌ಕುಮಾರ್ ಪಾರುಪತ್ತೇದಾರ ರಾಜು, ಯರಿಯೂರು ನಾಗೇಂದ್ರ, ಕೃಷಿಕ ಸಮಾಜದ ಅಧ್ಯಕ್ಷ ಗೌಡಹಳ್ಳಿ ರವಿ, ಟಿಎಪಿಸಿಎಂಎಸ್ ನಿರ್ದೇಶಕ ಪುಟ್ಟರಾಜು, ವಿಜಯ್ ಇದ್ದರು.