ಸಾರಾಂಶ
- ಮುಂಗಾರು- ಹಿಂಗಾರು ಹದಮಳೆಯಿಂದಾಗಿ ಅಧಿಕ ಆದಾಯ ನಿರೀಕ್ಷೆ - ತಾಲೂಕಿನಲ್ಲಿ ಈ ಬಾರಿ 6800 ಹೆಕ್ಟೇರ್ ಕಡಲೆ ಬಿತ್ತನೆ - - -
- ಚಿದಾನಂದ ಜಿ.ಎಸ್. ಹೆಮ್ಮನಬೇತೂರುಕನ್ನಡಪ್ರಭ ವಾರ್ತೆ ಜಗಳೂರು
ಮುಂಜಾನೆ ಇಬ್ಬನಿಯ ಹನಿಗಳ ಮೈದುಂಬಿಕೊಂಡು ಕಪ್ಪುನೆಲದಲ್ಲಿ ನಳನಳಿಸುವ ಕಡಲೆ ಕೃಷಿ ಗದ್ದೆ ನೋಡಿದರೆ, ಎಂಥವರಿಗೂ ರೈತನ ಶ್ರಮ ಕಣ್ಮುಂದೆ ಬಂದುಹೋಗುತ್ತದೆ. ಈ ಕಡಲೆ ರೈತರಿಗೆ ಉತ್ತಮ ಬೆಲೆ ಗ್ಯಾರಂಟಿ ಎಂದೆನಿಸುತ್ತದೆ. ಜಗಳೂರು ತಾಲೂಕು ರೈತರು ಈ ಬಾರಿ ಅಂಥ ಹೊಗಳಿಕೆ, ಗಳಿಕೆಗೆ ಪಾತ್ರರಾಗಲಿದ್ದಾರೆ.ಚಳಿಗಾಲದ ಅತಿಥಿ ಎಂದೇ ಕರೆಯಲಾಗುವ ಕಡಳೆ ಬೆಳೆ ಈ ಬಾರಿ ತಾಲೂಕಿನ ರೈತರಲ್ಲಿ ಹೆಚ್ಚು ಆದಾಯ ನಿರೀಕ್ಷೆ ಹುಟ್ಟುಹಾಕಿದೆ. ಜಗಳೂರು ತಾಲೂಕಿನಲ್ಲಿ ಈ ಬಾರಿ ಮುಂಗಾರು ಮತ್ತು ಹಿಂಗಾರಿನಲ್ಲಿ ಉತ್ತಮ ಮಳೆಯಾಗಿ, ಭೂಮಿ ತಂಪಾಗಿದೆ. ಕೆರೆ- ಕಟ್ಟೆಗಳು ಕೋಡಿಬಿದ್ದು, ರೈತರಿಗೆ ವರದಾನವಾಗಿದೆ. ಮುಂಗಾರು ಬೆಳೆ ಕಟಾವು ನಂತರ ಮೂರು ಹೋಬಳಿ ವ್ಯಾಪ್ತಿಯಲ್ಲಿ ಬಹುತೇಕ ಕಡಲೆ ಬಿತ್ತನೆಯಾಗಿದೆ. ಕಡಲೆ ಕೃಷಿ ಸಮೃದ್ಧವಾಗಿ ಬೆಳೆದುನಿಂತಿದ್ದು, ರೈತರಲ್ಲಿ ಸಹಜವಾಗಿಯೇ ಹೆಚ್ಚು ಆದಾಯದ ಕನಸು ಚಿಗುರೊಡೆದಿದೆ.
ಎಲ್ಲೆಲ್ಲಿ, ಎಷ್ಟೆಷ್ಟು ಬಿತ್ತನೆ?:ಈ ಬಾರಿ ಜಗಳೂರು ತಾಲೂಕಿನಲ್ಲಿ 6800 ಹೆಕ್ಟೇರ್ ಕಡಲೆ ಬೆಳೆ ಬಿತ್ತನೆಯಾಗಿದೆ. ಕಸಬ ಹೋಬಳಿ ವ್ಯಾಪ್ತಿಯಲ್ಲಿ 4 ಸಾವಿರ ಹೆಕ್ಟೇರ್, ಸೊಕ್ಕೆ ಹೋಬಳಿಯಲ್ಲಿ 1900 ಹೆಕ್ಟೇರ್ ಹಾಗೂ ಬಿಳಿಚೋಡು ಹೋಬಳಿಯಲ್ಲಿ 900 ಹೆಕ್ಟೇರ್‌ನಲ್ಲಿ ಕಡಲೆ ಬೆಳೆ ಬಿತ್ತನೆ ಮಾಡಲಾಗಿದೆ. ಕಸಬ ಹೋಬಳಿ ವ್ಯಾಪ್ತಿಯಲ್ಲಿ ಬಹುತೇಕ ರೈತರು ಕಡಲೆ ಬಿತ್ತನೆ ಮಾಡಿದ್ದಾರೆ. ಈಗಾಗಲೇ ಹೂ ಹುದುರಿ ಕಾಯಿ ಕಟ್ಟುವ ಹಂತಗಳಲ್ಲಿದೆ. ಪಟ್ಟಣದ ಪ್ರಗತಿಪರ ರೈತ ಕ್ಯಾಂಪ್ ಪಿ.ರೇವಣ್ಣ ಎಂಬವರು ಸುಮಾರು 20 ಹೆಕ್ಟೇರ್ ಜಮೀನಿನಲ್ಲಿ ಕಡಲೆ ಬಿತ್ತನೆ ಮಾಡಿದ್ದು, ಈ ಬಾರಿ ತಾಲೂಕಿನ ರೈತರು ಉತ್ತಮ ಇಳುವರಿ ನಿರೀಕ್ಷೆ ಹೊಂದಿದ್ದಾರೆಂದು ತಿಳಿಸಿದ್ದಾರೆ.
ಅವರೇ ಹೇಳುವಂತೆ, ಪ್ರತಿವರ್ಷ ಮೆಕ್ಕೆಜೋಳ ಅಥವಾ ಈರುಳ್ಳಿ ಕಟಾವು ನಂತರ ಕಡಲೆ ಬಿತ್ತನೆ ಮಾಡುತ್ತೇವೆ. ಈ ವರ್ಷ ಸುಮಾರು 20 ಹೆಕ್ಟೇರ್ ಪ್ರದೇಶಕ್ಕೆ ಕಡಲೆ ಬಿತ್ತನೆ ಮಾಡಿದ್ದೇವೆ. ಶಿವಲೀಲ ಟ್ರೇಡರ್ಸ್‌ನ ಸಲಹೆಯೊಂದಿಗೆ ಗುಣಮಟ್ಟದ ಬೀಜ ಬಿತ್ತನೆ ಮಾಡಿದ್ದೇವೆ. ದನದ ಗೊಬ್ಬರ ಹಾಕಿದ್ದೇವೆ. ಕಡಲೆ ಗಿಡ ಹೂ ಬಿಡುವಾಗ ಆರಂಭದಲ್ಲಿ ಚಿಟ್ಟೆಗಳ ಕಾಟ ಹೆಚ್ಚಾಗಿರುತ್ತದೆ. ಕಾಲಕಾಲಕ್ಕೆ ಔಷಧಿ ಸಿಂಪಡಣೆಯಿಂದ ಹೂ ಉದುರುವುದನ್ನು ತಡೆದು, ಚಿಟ್ಟಿಗಳು ಮೊಟ್ಟೆ ಇಡದಂತೆ ತಡೆಗಟ್ಟುವ ಕ್ರಮ ಅನುಸರಿಸಲಾಗಿದೆ ಎಂದರು. ಈ ಬಾರಿ ಕಡಲೆ ಬೆಳೆ ಉತ್ತಮವಾಗಿ ಬೆಳೆದಿದೆ. ಆದರೆ, ಇದರ ಖರ್ಚು ಸಹ ಹೆಚ್ಚಿದೆ. ಕೂಲಿಕಾರರಿಗೆ ದುಬಾರಿ ಕೂಲಿ, ಯಂತ್ರೋಪಕರಣಗಳ ಬಳಕೆಯಿಂದ ಅಧಿಕ ಹಣ ವ್ಯಯ ಮಾಡಲಾಗಿದೆ. ಸರ್ಕಾರ ಉತ್ತಮ ಬೆಂಬಲ ಬೆಲೆ ನಿಗದಿ ಮಾಡಿದರೆ, ಕಡಲೆ ಬೆಳೆದ ರೈತರಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಅವರು.- - -
ಬಾಕ್ಸ್-1 * ಎಕರೆಗೆ ₹60 ಸಾವಿರ ಆದಾಯ ಸಾಧ್ಯತೆ ಈ ವರ್ಷ ಉತ್ತಮ ಮಳೆಯಾಗಿದ್ದರಿಂದ ನೆಲದಲ್ಲಿ ತೇವಾಂಶ ಇರುವ ಕಾರಣ ಎಕರೆಗೆ 8 ರಿಂದ 10 ಕ್ವಿಂಟಲ್ ಕಡಲೆ ಬೆಳೆ ಇಳುವರಿ ಬರುವ ನಿರೀಕ್ಷೆ ಇದೆ. ಕಳೆದ ವರ್ಷ ಬೆಳೆ ಸರಿಯಾಗಿ ಬಾರದಿದ್ದರಿಂದ ಎಕರೆಗೆ 4ರಿಂದ 6 ಕ್ವಿಂಟಲ್ ಇಳುವರಿ ಬಂದಿತ್ತು. ಕಳೆದ ವರ್ಷ ಸರ್ಕಾರ ₹6200 ಬೆಂಬಲ ಬೆಲೆ ನಿಗದಿ ಮಾಡಿ, ಖರಿದಿಸಿತ್ತು. ಈ ವರ್ಷ ಹೊರಗಡೆ ಮಾರ್ಕೆಟ್ ಬೆಲೆಯೇ 6700 ಇದೆ. ಖರ್ಚು ₹15 ಸಾವಿರ ತಗುಲಿದ್ದು, ಎಕರೆಗೆ ಅಂದಾಜು ₹60 ಸಾವಿರ ಆದಾಯ ಬರುವ ನಿರೀಕ್ಷೆ ಇದೆ ಎಂಬುದು ರೈತರ ಲೆಕ್ಕಾಚಾರ.- - -
ಬಾಕ್ಸ್-2 * 10 ಕ್ವಿಂ. ಇಳುವರಿ ನಿರೀಕ್ಷೆ: ಕೃಷಿ ಇಲಾಖೆಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಶ್ವೇತಾ ಈ ಕುರಿತು ಪ್ರತಿಕ್ರಿಯಿಸಿದ್ದು, ಜಗಳೂರು ತಾಲೂಕಿನಲ್ಲಿ 6800 ಹೆಕ್ಟೇರ್ ಕಡಲೆ ಬೆಳೆ ಬಿತ್ತನೆಯಾಗಿದೆ. ಕಸಬ ಹೋಬಳಿಯಲ್ಲೇ ಅತಿ ಹೆಚ್ಚು ಬಿತ್ತನೆಯಾಗಿದೆ. ಈ ವರ್ಷ ಉತ್ತಮವಾಗಿ ಮುಂಗಾರು ಮಳೆ, ಹಿಂಗಾರು ಮಳೆ ಸುರಿದಿದೆ. ಕಡಲೆ ಬೆಳೆಗೆ ಪೂರಕ ತೇವಾಂಶ ಇರುವುದರಿಂದ ಉತ್ತಮ ಬೆಳೆ ನಿರೀಕ್ಷೆ ಹೆಚ್ಚಾಗಿದೆ. ಕಳೆದ ವರ್ಷ ಮಳೆ ಬಾರದೇ ಬರಗಾಲ ಆವರಿಸಿದ್ದರಿಂದ ಕೇವಲ 5 ಸಾವಿರ ಹೆಕ್ಟೇರ್ ಬಿತ್ತನೆಯಾಗಿತ್ತು. ರೈತರಿಗೆ ಎಕರೆಗೆ ಕೇವಲ 2 ರಿಂದ 4 ಕ್ವಿಂಟಲ್ ಮಾತ್ರ ಕಡಲೆ ಬೆಳೆ ಕೈ ಸೇರಿತ್ತು. ಈ ವರ್ಷ ಎಕೆರೆಗೆ 8 ರಿಂದ 10 ಕ್ವಿಂಟಲ್ ಕಡಲೆ ಬೆಳೆ ಇಳುವರಿ ಬರುವ ಇರೀಕ್ಷೆ ರೈತರು ಇಟ್ಟುಕೊಂಡಿದ್ದಾರೆ ಎಂದಿದ್ದಾರೆ.
- - - -30ಜೆಜಿಎಲ್2: ಪಿ.ರೇವಣ್ಣ ಅವರ ಹೊಲದಲ್ಲಿ ಹುಲುಸಾಗಿ ಬೆಳೆದಿರುವ ಕಡಲೆ ಬೆಳೆ.