ಸಾರಾಂಶ
ಜೇಡ ತನ್ನ ಬಲೆಯನ್ನು ನೇಯುವ ಹಾಗೆ ಒಂದು ವಸ್ತುವನ್ನು ನೋಡಿ ಕವಿಯು ಕವಿತೆಯನ್ನು ನೇಯುತ್ತಾನೆ
ಕನ್ನಡಪ್ರಭ ವಾರ್ತೆ ಮೈಸೂರು
ಸಾಹಿತ್ಯವು ಸಮಾಜದ ಪ್ರತಿಬಿಂಬವಾಗಿದ್ದು, ಜನರ ನೋವಿಗೆ ನುಡಿಯುವ ಕಾವ್ಯವನ್ನು ಮತ್ತೆ ಮತ್ತೆ ಮಾತನಾಡುತ್ತೇವೆ. ಹೀಗಾಗಿ ಜನರ ಬಗ್ಗೆಯೇ ಬರೆಯಬೇಕು ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್. ಪುಷ್ಪಾ ಹೇಳಿದರು.ನಗರದ ಜಗನ್ಮೋಹನ ಅರಮನೆಯಲ್ಲಿ ಬುಧವಾರ ದಸರಾ ಅಂಗವಾಗಿ ನಡೆದ ಸಮೃದ್ಧ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಪ್ರಖ್ಯಾತ ನಾಡಹಬ್ಬ ಮೈಸೂರು ದಸರಾಗೆ ತನ್ನದೇ ಆದ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಹಿನ್ನಲೆ ಇದೆ. ಇಂಥ ಕವಿಗೋಷ್ಠಿಗೆ 125 ಜನ ಕವಿಗಳಿಗೆ ಆಹ್ವಾನ ಸಿಕ್ಕಿದೆ. ಕವಿತೆ ಕೇಂದ್ರಬಿಂದು, ಜೇಡ ತನ್ನ ಬಲೆಯನ್ನು ನೇಯುವ ಹಾಗೆ ಒಂದು ವಸ್ತುವನ್ನು ನೋಡಿ ಕವಿಯು ಕವಿತೆಯನ್ನು ನೇಯುತ್ತಾನೆ ಎಂದರು.ಇಂತಹ ಕಾರ್ಯಕ್ರಮವು ಸಹಜವಾಗಿ ಸರ್ಕಾರದ ಆಯೋಜನೆ. ಸಾಮಾಜಿಕ ನ್ಯಾಯದ ಅಡಿಯಲ್ಲಿ ಕೆಲವೊಂದು ಬಾರಿ ಕೆಲವು ಅವಕಾಶ ಸಿಗದೇ ಇರುವುದು ಸಹಜ. ಪಂಪನ ಕಾಲದ ಸಾಹಿತ್ಯದಿಂದ ಆಧುನಿಕ ಸಾಹಿತ್ಯದವರೆಗೂ ವಿವರಿಸುತ್ತಾ ವಿಶೇಷವಾಗಿ ದಲಿತ ಕಾವ್ಯ, ಸಮಾಜವನ್ನು ಪ್ರಶ್ನಿಸುವಂಥ ಕಾವ್ಯಗಳು ಹಾಗೂ ಸಾರ್ವಕಾಲಿಕ ಕಾವ್ಯಗಳು ಇವೆ. ಇವು ನಮ್ಮ ದೈನಂದಿನ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಅವರು ಹೇಳಿದರು.ಕವಿತೆ ಓದುವಂತೆ ಮಾಡಿ ಅದನ್ನು ನಾವು ಆಲಿಸಿಕೊಳ್ಳುವುದು ಒಂದು ರೀತಿಯ ಸೊಬಗು, ಅನೇಕ ವೃದ್ಧಾಶ್ರಮ, ಜೈಲು ಖೈದಿಗಳ ಕವಿತೆ ವಾಚನವನ್ನು ನೋಡಿದ್ದೇವೆ. ಕವಿತೆಗಳು ದಾರಿತಪ್ಪಿದ ರಾಜಪ್ರಭುತ್ವ ಹಾಗೂ ಪ್ರಭುತ್ವಗಳನ್ನು ಪ್ರಶ್ನಿಸಲಿವೆ ಎಂಬುದನ್ನು ಕೇಳಿದ್ದೇವೆ. ಕಾವ್ಯ ನಮ್ಮ ಬದುಕನ್ನು ಹೇಗೆ ರೂಪಿಸುತ್ತೆ ಎಂಬುದನ್ನು ನಾವು ಕಾಣಬಹುದು ಎಂದರು.ರಗಳೆಗಳ ಕವಿ ರನ್ನ 9ನೇ ಕವಿರಾಜ ಮಾರ್ಗ ಕೃತಿಗಳು ನಾಡಿನ ಹೆಮ್ಮೆ ಹಾಗೂ ಸೌಹಾರ್ದತೆ ಸಾಕ್ಷಿಯಾಗಿದೆ. ಇನ್ನು ಕುವೆಂಪು ಅವರ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಕಾವ್ಯ, ಒಂದು ದೇಶ ಒಂದು ಜನ ಒಂದು ಜಾತಿ ಒಂದು ಎಂಬ ಸಂದೇಶದ ಕಾವ್ಯ, ವಿಶೇಷವಾಗಿ ದಲಿತ ಕಾವ್ಯ, ಲೈಂಗಿಕ ಕಾವ್ಯಗಳು ಕವಿತೆಗಳು ನೈಜ್ಯ ಹಾಗೂ ಪ್ರಾಮಾಣಿಕತೆಯ ರೂಪ. ಸಿದ್ಧಲಿಂಗಯ್ಯ ಅವರ, ಯಾರಿಗೆ ಬಂತು, ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ, ಹೋರಾಟದ ಕವಿತೆ ನಮ್ಮ ಎಲುಬಿನ ಅಂದದೊಳಗೆ ಮಂದಿರ ಮಸೀದಿ ಎಂಬ ಸರ್ವಕಾಲಿಕ ಕವಿತೆಗಳು ಧರ್ಮ ಮುಖ್ಯವೋ ಮನುಷತ್ವ ಮುಖ್ಯವೋ ಎಂಬ ಸಂದೇಶದ ಕವಿತೆ ಎಂದು ಸ್ಮರಿಸಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಅಬ್ದುಲ್ ರಶೀದ್, ಒಂದೇ ವೇದಿಕೆಯಲ್ಲಿ ಎಲ್ಲಾ ರೀತಿಯ ಕವಿಗಳನ್ನು ಸೇರಿಸಿ ಕವಿತೆ ವಾಚನಗೊಳಿಸಿದ್ದು ನಿಜಕ್ಕೂ ಕವಿಗೋಷ್ಠಿ ವೇದಿಕೆಗೆ ಹೆಚ್ಚು ಮೆರಗನ್ನುಂಟು ಮಾಡಿದೆ. ಕವಿತೆಗಳು ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗದೆ ಕೇಳುಗರಿಗೆ ಹಿತ ಎನಿಸುವಂತೆ ಸಮೃದ್ದ ಕವಿಗೋಷ್ಠಿ ಯಶಸ್ವಿಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಇದೇ ವೇಳೆ ಕವಿತೆ ವಾಚಿಸಿದ ಎಲ್ಲಾ ಕವಿ ಹಾಗೂ ಕವಯತ್ರಿಯರನ್ನು ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಲಾಯಿತು.ಮುಖ್ಯ ಅತಿಥಿಯಾಗಿದ್ದ, ಮುಕ್ತ ವಿವಿ ಪ್ರಾಧ್ಯಾಪಕಿ ಡಾ. ಕವಿತಾ ರೈ ಮಾತನಾಡಿ, ಬೇಡನೊಬ್ಬ ರಾಮಾಯಣ ರಚಿಸಿದ, ಬೆಸ್ತನೊಬ್ಬ ಮಹಾಭಾರತ ರಚಿಸಿದ ಹೀಗೆ ಅವರು ಕಟ್ಟಿದ ಕಾವ್ಯಗಳ ಹಾದಿಯಲ್ಲಿ ನಾವು ಇಂದು ಸಾಗಿದ್ದೇವೆ. ಹಲವಾರು ಕವಿ ಹಾಗೂ ಕವಯತ್ರಿಯರ ಕಾವ್ಯಗಳ ಧ್ವನಿಯು ಒಂದು ಅಸ್ವಸ್ಥ ಹಾಗೂ ಅನಾರೋಗ್ಯ ಸಮಾಜದ ಉಳಿಗಾಲವಾಗಿದೆ ಎಂದರು.ಕಾವ್ಯಗಳಲ್ಲಿ ಹಲವು ಸಮುದಾಯಗಳ ಪ್ರಾತಿನಿಧ್ಯ ಕಾಣಬಹುದು. ವರ್ತಮಾನದಲ್ಲಿ ಕವಿತೆಗಳ ವಿಚಾರಧಾರೆಯು ಬಹಳ ಮುಖ್ಯ, ನಾನು ಅನೇಕ ಕವಿಗಳನ್ನು ಓದುಕೊಂಡು ಅವರನ್ನು ಅನುಸರಿಸಿಕೊಂಡಿದ್ದೇನೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.ಈ ದೇಶದಲ್ಲಿ ಮುನುವಾದ, ಮೂಲಭೂತವಾದದ ಪರಿಕಲ್ಪನೆಗೆ ಸಾಹಿತಿಗಳ ಮೂಲಕ ಸಾರ್ಥಕತೆ ಸಿಕ್ಕಿದೆ. ಆ ವಿಚಾರದಲ್ಲಿ ಇನ್ನಷ್ಟು ಸಾಹಿತಿಗಳು ಬರಬೇಕು ಎಂದು ಆಶಿಸಿದರು. ಈ ವೇಳೆ 78ರ ಹರೆಯದ ದೇಶದಲ್ಲಿ ನಮಗೊಂದು ಆಧಾರ ಸಿಕ್ಕಿದೆ ಎಂಬ ಕವನ ವಾಚಿಸಿದರು. ಕವಿಗೋಷ್ಠಿಯಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ದಸರಾದ ವಿವಿಧತೆಯಲ್ಲಿ ಒಂದಾದ ಕವಿಗೋಷ್ಠಿಯು ತನ್ನದೇ ಆದ ಪ್ರಾಮುಖ್ಯತೆ ಮತ್ತು ವೈಶಿಷ್ಟ್ಯತೆ ಒಳಗೊಂಡಿದೆ. ನಾನು ನಿಮ್ಮಲ್ಲಿ ಒಬ್ಬನಾಗಿ ಕವಿತೆ ಕೇಳಲು ಬಂದಿದ್ದೇನೆ ಎಂದು ಹೇಳಿದರು. ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಡಿಸಿಪಿ ಮುತ್ತುರಾಜ್, ದಸರಾ ಕವಿಗೋಷ್ಠಿ ಉಪ ಸಮಿತಿ ಕಾರ್ಯಾಧ್ಯಕ್ಷೆ ಎನ್.ಕೆ. ಲೋಲಾಕ್ಷಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಕಾರ್ಯದರ್ಶಿ ಸಿ. ಕೃಷ್ಣ, ಅಧಿಕಾರೇತರ ಸಮಿತಿ ಅಧ್ಯಕ್ಷೆ ಹೇಮಲತಾ, ಉಪಾಧ್ಯಕ್ಷೆ ಕಮಲಾ ಅನಂತರಾಂ, ಎಂ. ನಾಗರಾಜು, ಅಹಲ್ಯಾ, ಈರನಾಯಕ, ನಿತ್ಯಾ ಇದ್ದರು.