ಧರ್ಮಸ್ಥಳ ಸಂಘದಿಂದ ಮಹಿಳಾ ಸಬಲೀಕರಣ

| Published : Oct 10 2024, 02:18 AM IST

ಸಾರಾಂಶ

ಮಹಾತ್ಮ ಗಾಂಧೀಜಿ ಅವರು ಕಂಡ ಗ್ರಾಮಸ್ವರಾಜ್ಯ ಕನಸು ನನಸಾಗಿಸುವ ನಿಟ್ಟನಿಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹಲವು ಯೋಜನೆ ಜಾರಿಗೆ ತಂದಿದ್ದಾರೆ.

ಕಲಘಟಗಿ:

ಗ್ರಾಮೀಣ ಭಾಗದ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಸರೆಯಾಗಿದೆ ಎಂದು ಜನಜಾಗೃತಿ ವೇದಿಕೆ ಟ್ರಸ್ಟ್ ರಾಜ್ಯಾಧ್ಯಕ್ಷ ರಾಜಣ್ಣ ಕೊರವಿ ಹೇಳಿದರು.

ಅವರು ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿದ್ದ ಗಾಂಧಿಸ್ಮೃತಿ, ಬೃಹತ್ ಜಾಥಾ ಹಾಗೂ ವ್ಯಸನಮುಕ್ತ ಸಾಧಕರ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಾತ್ಮ ಗಾಂಧೀಜಿ ಅವರು ಕಂಡ ಗ್ರಾಮಸ್ವರಾಜ್ಯ ಕನಸು ನನಸಾಗಿಸುವ ನಿಟ್ಟನಿಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹಲವು ಯೋಜನೆ ಜಾರಿಗೆ ತಂದಿದ್ದಾರೆ. ರೈತರು, ಮಹಿಳಾ ಸಬಲೀಕರಣ, ವಿದ್ಯಾರ್ಥಿ ವೇತನ, ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಮುಂದಾಗಿದ್ದಾರೆ. ಮದ್ಯವರ್ಜನ ಶಿಬಿರ ನಡೆಸುವ ಮೂಲಕ ಬಡವರ ಮನೆ ಬೆಳಗಿಸಿದ್ದಾರೆ ಎಂದರು.ಅಧ್ಯಕ್ಷತೆ ವಹಿಸಿದ್ದ ಜನಜಾಗೃತಿ ವೇದಿಕೆ ಟ್ರಸ್ಟ್ ಜಿಲ್ಲಾಧ್ಯಕ್ಷ ಸಂತೋಷ ಶೆಟ್ಟಿ, ಮದ್ಯಪಾನ ಕೇವಲ ಒಬ್ಬನ ಪ್ರಾಣ ತೆಗೆಯುವುದಿಲ್ಲ, ಬದಲಿಗೆ ಇಡೀ ಕುಟುಂಬದ ಸರ್ವನಾಶಕ್ಕೆ ಕಾರಣವಾಗುತ್ತದೆ. ಪ್ರತಿಯೊಬ್ಬರು ಗಾಂಧೀಜಿಯವರ ಆಶಯದಂತೆ ಮದ್ಯಪಾನ ಮುಕ್ತ ಸಮಾಜ ನಿರ್ಮಾಣಕ್ಕೆ ಪಣತೊಡಬೇಕು ಎಂದು ಕರೆ ನೀಡಿದರು.

ಪಟ್ಟಣದ ಯುವಶಕ್ತಿ ವೃತ್ತದಲ್ಲಿ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಆಗ್ರಹಿಸಲು ಆಯೋಜಿಸಿದ್ದ ಬೃಹತ್ ಜಾಥಾಕ್ಕೆ ಹಿರಿಯ ನ್ಯಾಯಾಧೀಶ ರವೀಂದ್ರ ಹೊನೋಲೆ ಹಾಗೂ ಕಿರಿಯ ದಿವಾಣಿ ನ್ಯಾಯಾಧೀಶ ಎನ್. ಗಣೇಶ ಚಾಲನೆ ನೀಡಿದರು. ಜಾಥಾ ಬಾಲ ಮಾರುತಿ ಮಂದಿರದ ಮೂಲಕ ರಾಷ್ಟ್ರೀಯ ಹೆದ್ದಾರಿ, ಬೆಂಡಿಗೇರಿ ಓಣಿ ಮಾರ್ಗವಾಗಿ ಚೌತಮನಿ ಕಟ್ಟೆಯಿಂದ ಬಸವೇಶ್ವರ ಕಲ್ಯಾಣ ಮಂಟಪ ತಲುಪಲಿತು. ಜಾಥಾದಲ್ಲಿ ಸಿದ್ಧಿ ಬುಡಕ್ಕಟ್ಟು ಜನಾಂಗದ ಜನಪದ ಪ್ರದರ್ಶನ, ಲಂಬಾಣಿ ನೃತ್ಯ, ಯಕ್ಷಗಾನ ಸೇರಿದಂತೆ ವಿವಿಧ ಛದ್ಮವೇಷಧಾರಿ ಮಕ್ಕಳು ಗಮನ ಸೆಳೆದರು.

ಇದೇ ವೇಳೇ ತಹಸೀಲ್ದಾರ್ ವೀರೇಶ ಮುಳಗುಂದಮಠ ಉದ್ಘಾಟಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕಿ ದಯಾಶೀಲ, ಸವಿತಾ ಅಮರಶೆಟ್ಟಿ, ಜಿಲ್ಲಾ ಜನ ಜಾಗೃತಿ ವೇದಿಕೆ ಉಪಾಧ್ಯಕ್ಷ ಪ್ರಭಾಕರ ನಾಯಕ, ಜಿಲ್ಲಾ ನಿರ್ದೇಶಕ ಪ್ರದೀಪ ಶೆಟ್ಟಿ, ನಿವೃತ್ತ ಪತ್ರಾಂಕಿತ ಅಧಿಕಾರಿ ಎಂ.ಆರ್. ತೋಟಗಂಟಿ, ಬಸವೇಶ್ವರ ಕಲ್ಯಾಣ ಮಂಟಪದ ಆಡಳಿತ ಮಂಡಳಿ ಸದಸ್ಯ ಗಂಗಾಧರ ಗೌಳಿ, ತಾಲೂಕು ಯೋಜನಾಧಿಕಾರಿ ಪ್ರಶಾಂತ ನಾಯ್ಕ, ರೇಖಾ ಕಲಘಟಗಿ, ಎ.ವಿ. ಜಯರಾಮನವರ, ಎಂ.ಟಿ. ಉಪಾಧ್ಯಾಯ, ಸುರೇಶ ಮರಲಿಂಗಣ್ಣವರ, ಮಾರುತಿ ಶೆಟ್, ಧನಪಾಲ ಬೆಟದೂರು ಉಪಸ್ಥಿತರಿದ್ದರು.