ಒಂದು ಕುಟುಂಬದಲ್ಲಿ ಕೆಲಸ ಮಾಡುವ ಏಕೈಕ ವ್ಯಕ್ತಿಗೆ ಮಾರಣಾಂತಿಕ ಕಾಯಿಲೆ ಬಂದಾಗ ಇಡೀ ಕುಟುಂಬದ ವ್ಯವಸ್ಥೆ ಕುಸಿದು ಬೀಳುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರುವೃದ್ಧಾಪ್ಯ ಮತ್ತು ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ವಿದೇಶದ ಮಾದರಿ ಭಾರತದಲ್ಲೂ ಸಮಾಜ ಸುರಕ್ಷಾ ಸೇವೆಗಳು ಇನ್ನಷ್ಟು ಉತ್ತಮಗೊಳ್ಳಬೇಕಾಗಿದೆ ಎಂದು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕ ಶ್ರೀ ಮಧುಸೂದನ ಸಾಯಿ ವಿಷಾದಿಸಿದರು.ವಿಜಯನಗರದ ಜಗನ್ನಾಥ್‌ ಕಲ್ಟರ್‌ ಸೆಂಟರ್‌ನಲ್ಲಿ ಶನಿವಾರ ನಡೆದ ದಿವ್ಯ ಸಂಜೆ ಸಂವಾದ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಮತ್ತು ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದ ಸದ್ಗುರು, ಒಂದು ಕುಟುಂಬದಲ್ಲಿ ಕೆಲಸ ಮಾಡುವ ಏಕೈಕ ವ್ಯಕ್ತಿಗೆ ಮಾರಣಾಂತಿಕ ಕಾಯಿಲೆ ಬಂದಾಗ ಇಡೀ ಕುಟುಂಬದ ವ್ಯವಸ್ಥೆ ಕುಸಿದು ಬೀಳುತ್ತದೆ. ತಾಯಿಯೊಬ್ಬಳು ಏನೂ ಮಾಡಲು ಸಾಧ್ಯವಾಗದ ಅಸಹಾಯಕ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇಂಥ ಸಂದರ್ಭದಲ್ಲಿ ಸಮಾಜವಾಗಿ ಎಲ್ಲರೂ ಅಂಥ ಕುಟುಂಬಗಳಿಗೆ ಆಸರೆ ಆಗಬೇಕು ಎಂದು ಕರೆ ನೀಡಿದರು.ನಮ್ಮ ದೇಶದಲ್ಲಿ ಇಂಥವರಿಗೆ ಹಣಕಾಸು ಭದ್ರತೆ ಒದಗಿಸುವ ಯೋಜನೆಗಳೇ ಇಲ್ಲ. ಅಮೆರಿಕದಲ್ಲಿ ವೃದ್ಧಾಪ್ಯ ಮತ್ತು ಮಾರಣಾಂತಿಕ ಕಾಯಿಲೆಗಳಿಂದ ಬಳಸುವವರ ಚಿಕಿತ್ಸೆಗಾಗಿ ತಿಂಗಳಿಗೆ ಐದು ಸಾವಿರ ಡಾಲರ್ ಸಹಾಯಧನ ಕೊಡುವ ಯೋಜನೆಯಿದೆ. ಜಪಾನ್‌ ಮತ್ತು ಯೂರೋಪ್‌ನ ಹಲವು ದೇಶಗಳಲ್ಲಿ ಇಂಥದ್ದೇ ಯೋಜನೆಗಳಿವೆ. ನಮ್ಮ ಸರ್ಕಾರಗಳೂ ಈ ಕುರಿತು ಯೋಚಿಸಬೇಕಾದ ಸಂದರ್ಭ ಎದುರಾಗಿದೆ ಎಂದು ಅವರು ವಿಶ್ಲೇಷಿಸಿದರು.ಜೆನ್‌ ಜಿ ತಲೆಮಾರಿನ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸದ್ಗುರು, ''''''''ಈಗಿನ ತಲೆಮಾರು ವಿಕಸನವಾಗುತ್ತಿದೆ. ಪ್ರಶ್ನೆ ಕೇಳುವವರು ಮಾತ್ರವೇ ಉತ್ತಮ ವಿದ್ಯಾರ್ಥಿಗಳಾಗಲು ಸಾಧ್ಯ. ಸಮಸ್ಯೆ ಇರುವುದು ಹಿರಿಯರಲ್ಲಿ. ಈಗ ಹಿರಿಯರು ತಮ್ಮ ಜ್ಞಾನ ಹೆಚ್ಚಿಸಿಕೊಂಡು ಮಕ್ಕಳಿಗೆ ಉತ್ತರ ಹೇಳಬೇಕು'''''''' ಎಂದು ಸಲಹೆ ಮಾಡಿದರು.ನೇಪಾಳ ದುರಂತದ ಕುರಿತು ಪ್ರಸ್ತಾಪಿಸಿದ ಸದ್ಗುರು, ಪರಿಸರವು ನಮ್ಮನ್ನು ಅಂದರೆ ಮನುಷ್ಯರನ್ನು ಪ್ರತಿಫಲಿಸುತ್ತದೆ. ನಮ್ಮ ಭೂಮಿಯೂ ಸಹ ನಿರಂತರವಾಗಿ ವಿಕಸನವಾಗುತ್ತಿದೆ ಎಂದು ಅವರು ಹೇಳಿದರು.ನನಸಾಗುತ್ತಿರುವ ಕನಸು ಮುದ್ದೇನಹಳ್ಳಿಪ್ರಾಸ್ತಾವಿಕವಾಗಿ ಮಾತನಾಡಿದ ಗೋಪಿಕಾ ಪರ್ಫ್ಯೂಮರಿ ವರ್ಕ್ಸ್‌ ನಿರ್ದೇಶಕ ಎಸ್‌.ಎಲ್. ರಾಮಚಂದ್ರ, ಮುದ್ದೇನಹಳ್ಳಿಯಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಎಲ್ಲರೂ ನೋಡಬೇಕು. ಇಡೀ ಜಗತ್ತು ಒಂದು ಕುಟುಂಬ ಆಗಲು ಸಾಧ್ಯ ಎನ್ನುವುದು ಈಗ ನನಸಾಗುತ್ತಿರುವ ಕನಸು ಎಂದು ಪ್ರತಿಪಾದಿಸಿದರು.ತನ್ನ ಬದುಕಿನ ಹಾದಿ ಹಂಚಿಕೊಂಡ ಮೈಸೂರಿನ ಶ್ರೀ ಸತ್ಯಸಾಯಿ ಅನಂತನಿಕೇತನಂ ವಿದ್ಯಾರ್ಥಿ ಕುಶಾಲ್, ನಾನು ಇಲ್ಲಿಗೆ ಸೇರುವ ಮೊದಲು ತುಂಬಾ ಕಷ್ಟಪಟ್ಟಿದ್ದೆ. ಆದರೆ ಒಮ್ಮೆ ಗುರುಕುಲಕ್ಕೆ ಬಂದ ನಂತರ ಎಲ್ಲರೂ ನನ್ನ ಸೋದರರಾದರು. ನಾನು ಮೊದಮೊದಲು ಒಂಟಿತನ ಅನುಭವಿಸುತ್ತಿದ್ದೆ. ಮನೆಗೆ ಹೋಗಬೇಕು ಅನ್ನಿಸುತ್ತಿತ್ತು. ಆಗ ಒಬ್ಬ ವಾರ್ಡನ್ ಅಣ್ಣ ನನ್ನ ಮನಸ್ಸು ಅರ್ಥ ಮಾಡಿಕೊಂಡು ಪ್ರೋತ್ಸಾಹದ ಮಾತುಗಳನ್ನು ಆಡಿದರು. ನಂತರ ನನಗೆ ಇದೇ ಮನೆಯಾಯಿತು. ಸಂಸ್ಥೆಯು ನನಗೆ ಎಲ್ಲರನ್ನೂ ಗೌರವಿಸುವುದು ಮತ್ತು ಪ್ರೇಮಿಸುವುದನ್ನು ಕಲಿಸಿದೆ. ನಾನು ದೊಡ್ಡವನಾದ ಮೇಲೆ ವೈದ್ಯನಾಗುವೆ. ಗುರುಗಳ ಆಸ್ಪತ್ರೆಯಲ್ಲಿ ಸೇವೆ ಮಾಡುವೆ ಎಂದು ಹೇಳಿದರು. ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವೇದಪಾರಾಯಣದ ಮೂಲಕ ಕಾರ್ಯಕ್ರಮ ಆರಂಭವಾಯಿತು. ರಾಘವೇಂದ್ರ ಜನ್ನು ನಿರೂಪಿಸಿದರು. ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಜೆ. ಶಶಿಧರ್ ಪ್ರಸಾದ್, ಕುಲಪತಿ ಪ್ರೊ.ಎನ್‌.ಕೆ. ಲೋಕನಾಥ್, ಮುಕ್ತ ವಿವಿ ಕುಲಪತಿ ಪ್ರೊ.ಎ.ಪಿ. ಜ್ಞಾನಪ್ರಕಾಶ್, ನಾವೆಲ್ ಟಿಶ್ಯೂಸ್ ಸಂಸ್ಥೆ ನಿರ್ದೇಶಕ ಎ ಬಿ ದೊಡ್ಡಮನಿ, ಅರವಿಂದ ಪರ್ಫ್ಯೂಮರಿ ಸಂಸ್ಥೆಯ ರಿಷಿ, ಮಂಗಳೂರು ಗಣೇಶ್ ಬೀಡಿ ಕಂಪೆನಿ ಎಂಡಿ ಜಗನ್ನಾಥ ಶೆಣೈ, ಉದ್ಯಮಿ ಮನೋಜ್ ಶೆಣೈ, ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಗಿರಿಧರ್, ಭಾರತೀಯ ಭಾಷಾ ವಿಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ. ಬಸವರಾಜ ಇದ್ದರು.