ದೇಶದ ಆಹಾರ ರಪ್ತಿಗೆ ಜಗಜೀವರಾಂ ದೂರದೃಷ್ಟಿ ಕಾರಣ

| Published : Jul 08 2025, 01:48 AM IST

ದೇಶದ ಆಹಾರ ರಪ್ತಿಗೆ ಜಗಜೀವರಾಂ ದೂರದೃಷ್ಟಿ ಕಾರಣ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಕಾಂಗ್ರೆಸ್ ಕಚೇರಿಲ್ಲಿ ನಡೆದ ಬಾಬೂ ಜಗಜೀವನರಾಂ ಪುಣ್ಯಸ್ಮರಣೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ ಫೀರ್ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಆಹಾರ ರಪ್ತು ಮಾಡುವಲ್ಲಿ ಭಾರತ ಇಂದು ಅಗ್ರಸ್ಥಾನ ಪಡೆಯಲು ಜಗಜೀವನರಾಂ ದೂರದೃಷ್ಠಿ ಕಾರಣವೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ ಫೀರ್ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾದ ಬಾಬು ಜಗಜೀವನರಾಂ 39ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಭಾರತ ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆದಾಗ 40 ಕೋಟಿ ಜನರಿದ್ದರು. ಅವರ ಹಸಿವನ್ನು ನೀಗಿಸುವುದು ಸರ್ಕಾರದ ಕೆಲಸವಾಗಿತ್ತು. ಈ ಸಮಯದಲ್ಲಿ ಅಮೇರಿಕಾದಿಂದ ಕೆಂಪು ಜೋಳ ತರಿಸಿ ಜನರಿಗೆ ನೀಡಲಾಗಿತ್ತು. ಇದನ್ನು ಕಂಡ ಅಂದಿನ ಕೃಷಿ ಸಚಿವ ಬಾಬು ಜಗಜೀವನರಾಂ ದೇಶದಲ್ಲಿಯೇ ಆಹಾರ ಉತ್ಪಾದನೆ ಮಾಡುವ ಬಗ್ಗೆ ಆಲೋಚನೆ ನಡೆಸಿ ಕೃಷಿಯಲ್ಲಿ ಹಸಿರುಕ್ರಾಂತಿ ನಡೆಸಿದರು. ರೈತರಿಗೆ ಪ್ರೋತ್ಸಾಹ ನೀಡಿದ್ದರ ಫಲವಾಗಿ ಜನತೆ ದಿನ ನಿತ್ಯ ಆಹಾರ ಸೇವನೆ ಮಾಡುತ್ತಿದ್ದಾರೆ ಎಂದರು.

ಬಾಬು ಜಗಜೀವನರಾಂ ತಮ್ಮ ಅಧಿಕಾರದ ಅವಧಿಯಲ್ಲಿ ಮಾಡಿದ ವಿವಿಧ ರೀತಿಯ ಕಾರ್ಯಕ್ರಮಗಳು ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಿಯವಾಗಿವೆ. ದೇಶ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರ ಬಾಬೂ ಮಾಡಿದ ಕಾರ್ಯ ಅನ್ಯನವಾಗಿದೆ. ಪ್ರಧಾನ ಮಂತ್ರಿಯಾಗುವ ಎಲ್ಲಾ ರೀತಿಯ ಅರ್ಹತೆಯನ್ನು ಹೊಂದಿದ್ದರೂ ರಾಜಕೀಯ ಕಾರಣದಿಂದಾಗಿ ಪ್ರಧಾನಿ ಸ್ಥಾನದಿಂದ ವಂಚಿತರಾದರು ಎಂದರು.

ದೇಶದಲ್ಲಿ ಉಂಟಾದ ಆಹಾರ ಸಮಸ್ಯೆಯನ್ನು ನಿವಾರಣೆ ಮಾಡಲು ನೀರಾವರಿ ಯೋಜನೆಗಳ ಜಾರಿ ಮಾಡಿ ಆಹಾರದಲ್ಲಿ ಹಸಿರು ಕ್ರಾಂತಿ ಮಾಡಿದರು. ಇಂದು ನಮ್ಮ ದೇಶದ 140 ಕೋಟಿ ಜನರಿಗೆ ಅನ್ನ ನೀಡುತ್ತಾ ಬೇರೆ ದೇಶಗಳಿಗೆ ರಫ್ತು ಮಾಡಲಾಗುತ್ತಿರುವುದರ ಹಿಂದೆ ಜಗಜೀನರಾಂ ಶ್ರಮ ಮತ್ತು ಕಾಳಜಿ ಇದೆ ಎಂದು ತಾಜ್ ಫೀರ್ ಹೇಳಿದರು.

ಕಾಂಗ್ರೆಸ್‍ನ ಪರಿಶಿಷ್ಟ ಜಾತಿ ಘಟಕ ಜಿಲ್ಲಾ ಅಧ್ಯಕ್ಷ ಜಯ್ಯಣ್ಣ ಮಾತನಾಡಿ, ಬಾಬು ಜಗಜೀವನರಾಂ ರವರು ತಮ್ಮ ಜೀವಿತಾವಧಿಯಲ್ಲಿ ಕಷ್ಠಗಳನ್ನು ಅನುಭವಿಸಿದ್ದರು. ಆ ಕಾರಣದಿಂದಾಗಿಯೇ ಬೇರೆಯವರು ಕಷ್ಟಗಳ ಅನುಭವಿಸಬಾರದೆಂದು ಯೋಜನೆಗಳ ರೂಪಿಸಿ ಜಾರಿ ಮಾಡಿದರು. ಅವರು ವಹಿಸಿಕೊಂಡು ಎಲ್ಲಾ ಸಚಿವ ಸ್ಥಾನಗಳಿಗೂ ನ್ಯಾಯ ಸಲ್ಲಿಸಿದರು. ಚುನಾವಣೆ ಸಮಯದಲ್ಲಿ ಚಿತ್ರದುರ್ಗಕ್ಕೆ ಭೇಟಿ ನೀಡಿದ್ದರು ಎಂದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಮೈಲಾರಪ್ಪ, ವಿವಿಧ ಘಟಕಗಳ ಪದಾಧಿಕಾರಿಗಳಾದ ಲೋಕೇಶ್, ಪೈಲ್ವಾನ್ ತಿಪ್ಪೇಸ್ವಾಮಿ, ಮುದಸಿರ್, ಪ್ರಕಾಶ ರಾಮನಾಯ್ಕ್, ಭೂತೇಶ್, ಆಶ್ವಿನಿ, ಸುದರ್ಶನ್, ಭರತ್, ಮಹಮ್ಮದ್, ಖುದ್ದುೂಸ್ ಉಪಸ್ಥಿತರಿದ್ದರು.