ಸಾರಾಂಶ
ಹೊಸಪೇಟೆ: ಜಗಜ್ಯೋತಿ ಬಸವಣ್ಣನವರು ಸಮ ಸಂಸ್ಕೃತಿಯನ್ನು ಹುಟ್ಟು ಹಾಕುವ ಮೂಲಕ ಸಮಾಜದ ಅಸಮಾನತೆಗಳ ನಿರ್ಮೂಲನೆಗೆ ನಾಂದಿ ಹಾಡಿದರು ಎಂದು ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಅಮರೇಶ ನುಗಡೋಣಿ ಹೇಳಿದರು.ಬಸವ ಜಯಂತಿ ಪ್ರಯುಕ್ತ ಕನ್ನಡ ವಿಶ್ವವಿದ್ಯಾಲಯ ಸಂಗೀತ ಮತ್ತು ನೃತ್ಯ ವಿಭಾಗದಿಂದ ಬುಧವಾರ ಏರ್ಪಡಿಸಿದ್ದ ಉಪನ್ಯಾಸ ಮತ್ತು ವಚನ ಗಾಯನ ಕಾರ್ಯಕ್ರಮದಲ್ಲಿ "ಬಸವಣ್ಣ- ಪರ್ಯಾಯ ಸಂಸ್ಕೃತಿ ಜನಕ " ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.
12ನೇ ಶತಮಾನದಲ್ಲಿ ತಾಂಡವವಾಡುತ್ತಿದ್ದ ವರ್ಣ, ವರ್ಗ, ಜಾತಿ, ವೃತ್ತಿ, ಲಿಂಗ ಹಾಗೂ ಆಹಾರ ಇತರೆ ಭೇದ ತಾರತ್ಯಮಗಳನ್ನು ತೊಡೆದು ಹಾಕಲು ಬಸವಣ್ಣನವರು ಪ್ರಯತ್ನಿಸಿದರು. ಇವ ನಮ್ಮವ, ಇವ ನಮ್ಮವ ಎಂದು ಅಣ್ಣ, ಅಕ್ಕ, ಅಯ್ಯ ಎಂದು ಕರೆಯುವ ಸಂಸ್ಕೃತಿಯ ಮೂಲಕ ಕೆಳವರ್ಗಗಳಲ್ಲಿ ಆತ್ಮವಿಶ್ವಾಸ ತುಂಬಿದರು.ಪರಿಣಾಮ ಕೆಳವರ್ಗಗಳಿಂದ ಧರ್ಮದ, ಪ್ರಭುತ್ವದ ನಿರಾಕರಣೆ ಅಗ್ರಹಾರ, ಮಠ, ಮಾನ್ಯ, ದೇವಾಲಯಗಳ ನಿರಾಕರಣೆ ಚಳವಳಿ ಆರಂಭವಾಯಿತು. ಕಾಯಕ ತತ್ವದ ಪಾವಿತ್ರ್ಯವನ್ನು ತಂದ ಬಸವಣ್ಣನವರು ಸಂಪತ್ತಿನಲ್ಲಿ ಸಮಾನತೆ ತಂದರು ಎಂದರು.
ಕಲಿಸುವ ಹಕ್ಕನ್ನು ನಿರಾಕರಿಸುವ ಸಂದರ್ಭದಲ್ಲಿ ಬಸವಣ್ಣನವರು ಅನುಭವ ಮಂಟಪದಲ್ಲಿ ಅಕ್ಷರ ಕಲಿಸಿರಬಹುದು. ಇಂದಿನ ವಿದ್ವಾಂಸರಿಗೆ ಸವಾಲಾಗುವ ರೀತಿಯಲ್ಲಿ ವಚನ ಸಾಹಿತ್ಯ ರಚನೆ ಆಯಿತು. ಅನುಭವ ಮಂಟಪದಲ್ಲಿ ನಾಯಕನನ್ನು ಮಾಡಿಕೊಳ್ಳುವ ಅಗತ್ಯ ವಚನಕಾರರಿಗೆ ಕಾಣಲಿಲ್ಲ. ದೇವಾಲಯ ನಿರಾಕರಣೆಯ ಮೂಲಕ ಲಿಂಗದ ಪರಿಕಲ್ಪನೆ ತಂದು ಅರಿವಿನ ದಾರಿ ತೋರಿಸಿದರು. ದೇವಾಲಯ ನಿರಾಕರಣೆಯಿಂದ ಪ್ರಭುತ್ವಕ್ಕೆ ಆದಾಯದ ಹೊಡೆತ ಯಾವ ಮಟ್ಟದಲ್ಲಿ ಬಿದ್ದಿರಬಹುದೆಂದು ಊಹಿಸಲಾಗದು. ಹೀಗೆ ಬಸವಣ್ಣನವರ ಗುಂಪು ಪ್ರವಾಹದ ವಿರುದ್ಧ ಹೋದಂತೆ ಕಂಡರೂ ಪರ್ಯಾಯ ಸಂಸ್ಕೃತಿ ಕಟ್ಟುತ್ತಲಿತ್ತು. ಪಶ್ಚಿಮದ ಸ್ತ್ರೀವಾದಕ್ಕೆ ಬೇಕಾದ ಎಲ್ಲ ಮೂಲ ಆಕರಗಳು ವಚನ ಸಾಹಿತ್ಯದಲ್ಲಿದೆ ಎಂದು ಹೆಮ್ಮೆಯಿಂದ ಹೇಳಿದರು.ಕುಲಸಚಿವ ಡಾ.ವಿಜಯ ಪೂಣಚ್ಚ ತಂಬಂಡ ಮಾತನಾಡಿ, ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ವಿಶ್ವಗುರು ಎಂದು ಘೋಷಿಸಿರುವುದು ಕನ್ನಡಕ್ಕೆ ಕೊಟ್ಟ ಅತಿದೊಡ್ಡ ಗೌರವವಾಗಿದೆ. ರಾಜ್ಯ, ರಾಷ್ಟ್ರ, ಜಾಗತಿಕ ಮಟ್ಟದಲ್ಲಿ ಬಸವಣ್ಣನವರ ಕೊಡುಗೆ ಬಗ್ಗೆ ಚರ್ಚೆಯಾಗುತ್ತಿರುವ ಹೆಮ್ಮೆಯ ಸಂಗತಿ ಎಂದರು.
ವಿಭಾಗದ ಮುಖ್ಯಸ್ಥ ಡಾ.ವೀರೇಶ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು.ಆರಂಭದಲ್ಲಿ ಗಣ್ಯರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ವಚನ ನೃತ್ಯ ಮತ್ತು ಗಾಯನ ಕಾರ್ಯಕ್ರಮ ನಡೆದವು. ಮಮ್ತಾಜ್ ಭರತನಾಟ್ಯ ಪ್ರದರ್ಶಿಸಿದರು. ಸಂಗೀತ ವಿಭಾಗದ ದುರ್ಗೇಶ ಮತ್ತು ಹನುಮಂತ ಅವರು, ಎನ್ನ ಕಾಯವ ದಂಡಿಗೆಯ ಮಾಡಯ್ಯ ವಚನವನ್ನು ಜುಗಲ್ ಬಂದಿಯಲ್ಲಿ ನಡೆಸಿಕೊಟ್ಟರು. ರವಿವರ್ಮ ಮತ್ತು ಗುಂಡಿ ಭರತ್ ಕವಾಲಿಶೈಲಿಯಲ್ಲಿ ಕಳಬೇಡ ಕೊಲಬೇಡ ವಚನ ಪ್ರಸ್ತುತ ಪಡಿಸಿದರು. ಅಧ್ಯಾಪಕಿ ಜ್ಯೋತಿ, ಡಾ.ತಿಮ್ಮಣ್ಣ ಭೀಮರಾಯ, ಸಂಗೀತ ವಿದ್ಯಾರ್ಥಿಗಳು ಪ್ರಾರ್ಥಿಸಿದರು.