14ಕ್ಕೆ ರೂಪೇಶ್ ಶೆಟ್ಟಿ ನಿರ್ದೇಶನದ ಜೈ ಚಿತ್ರ ಬಿಡುಗಡೆ

| Published : Nov 12 2025, 01:45 AM IST

ಸಾರಾಂಶ

ಪೊಲಿಟಿಕಲ್ ಡ್ರಾಮಾ, ಜೊತೆಗೆ ಸೋಷಿಯಲ್ ಕಾಮಿಡಿ ಕಥಾ ಹಂದರ ಚಿತ್ರ. ಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನಿಗೆ ಇರುವ ಮಹತ್ವದ ಕುರಿತು ಸಂದೇಶ ಸಾರುವ ‘ಜೈ’ ಸಿನಿಮಾ ನ.14 ರಂದು ವಿಶ್ವದಾದ್ಯಂತ ತೆರೆಕಾಣುತ್ತಿದೆ ಎಂದು ಚಿತ್ರದ ನಿರ್ದೇಶಕ, ನಾಯಕ ರೂಪೇಶ್ ಶೆಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪೊಲಿಟಿಕಲ್ ಡ್ರಾಮಾ, ಜೊತೆಗೆ ಸೋಷಿಯಲ್ ಕಾಮಿಡಿ ಕಥಾ ಹಂದರ ಚಿತ್ರ. ಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನಿಗೆ ಇರುವ ಮಹತ್ವದ ಕುರಿತು ಸಂದೇಶ ಸಾರುವ ‘ಜೈ’ ಸಿನಿಮಾ ನ.14 ರಂದು ವಿಶ್ವದಾದ್ಯಂತ ತೆರೆಕಾಣುತ್ತಿದೆ ಎಂದು ಚಿತ್ರದ ನಿರ್ದೇಶಕ, ನಾಯಕ ರೂಪೇಶ್ ಶೆಟ್ಟಿ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನಾನೇ ನಿರ್ದೇಶಿಸಿರುವ ಜೈ ಸಿನಿಮಾದಲ್ಲಿ ನಾಯಕರಾಗಿ ನಟಿಸಿದ್ದೇನೆ. ಕನ್ನಡದ ಜೊತೆಗೆ ತುಳು ಭಾಷೆಯಲ್ಲೂ ಈ ಸಿನಿಮಾ ನಿರ್ಮಾಣವಾಗಿದ್ದು, ಎರಡು ಭಾಷೆಯಲ್ಲೂ ಭರ್ಜರಿಯಾಗಿ ತೆರೆ ಕಾಣುತ್ತಿದೆ ಎಂದರು.

ಈ ಚಿತ್ರದಲ್ಲಿ ಪೊಲಿಟಿಕಲ್ ಡ್ರಾಮಾ, ಜೊತೆಗೆ ಸೋಷಿಯಲ್ ಕಾಮಿಡಿ ಸುತ್ತ ಪ್ರೀತಿ, ಪ್ರೇಮ, ಒಂದಷ್ಟು ಭಾವನಾತ್ಮಕ ಸಂಗತಿಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ರಾಜಕಾರಣದಲ್ಲಿ ನಾವು ಒಳ್ಳೆಯ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳದಿದ್ದರೆ ಏನೆಲ್ಲಾ ಸಮಸ್ಯೆಗಳಾಗುತ್ತವೆ ಎನ್ನುವುದನ್ನು ಹೇಳುವ ಪ್ರಯತ್ನ ಜೈ ಸಿನಿಮಾ ಮೂಲಕ ಆಗಿದೆ ಎಂದರು.

ಕನ್ನಡ ಮತ್ತು ತುಳು ಭಾಷೆಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಈಗಾಗಲೇ ದುಬೈ, ಮಸ್ಕತ್, ಬಹೇರನ್ ಸೇರಿದಂತೆ ಹಲವು ಕಡೆಗಳಲ್ಲಿ ಚಿತ್ರದ ಪ್ರೀಮಿಯರ್ ಪ್ರದರ್ಶನ ಕಂಡು ಜನಮೆಚ್ಚುಗೆ ಪಡೆದಿದೆ. ನ.೧೪ರಂದು ಈ ಸಿನಿಮಾ ರಿಲೀಸ್ ಆಗಲಿದೆ.

ಈಗಾಗಲೇ ಟೀಸರ್ ಗಮನ ಸೆಳೆದಿದೆ. ಬಾಲಿವುಡ್ ಸೂಪರ್ ಸ್ಟಾರ್ ಸುನೀಲ್ ಶೆಟ್ಟಿ ಈ ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದಾರೆ, ಸುನೀಲ್ ಶೆಟ್ಟಿ ಅವರ ಜೊತೆ ಕೆಲಸ ಮಾಡಿದ್ದು ಜೀವನದ ಒಂದು ಅದ್ಭುತ ಅನುಭವ. ಅವರನ್ನು ನಿರ್ದೇಶಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ವಿಶೇಷವಾಗಿ ಇದೇ ಮೊದಲ ಬಾರಿಗೆ ತುಳು ಭಾಷೆಯ ಒಂದು ಸಿನಿಮಾ ರಾಜ್ಯಾದ್ಯಂತ ೧೫೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ ಎಂದರು.

ನಾಯಕಿ ನಟಿ ಅದ್ವಿತಿ ಶೆಟ್ಟಿ ಮಾತನಾಡಿ, ಶಿವಮೊಗ್ಗಕ್ಕೆ ಅನೇಕ ಸಲ ಬಂದಿದ್ದೇನೆ, ಇಲ್ಲಿ ಕನ್ನಡ ಸಿನಿಮಾಗಳಿಗೆ ವಿಶೇಷ ಪ್ರೋತ್ಸಾಹ ಸಿಗುತ್ತದೆ. ಅಲ್ಲದೆ ಇದೇ ಮೊದಲ ಬಾರಿಗೆ ಜೈ ಸಿನಿಮಾದ ಮೂಲಕ ತುಳು ಸಿನಿಮಾದಲ್ಲಿ ಅಭಿನಯಸಿದ್ದೇನೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ನಾನಿಲ್ಲಿ ಒಬ್ಬ ಟಿವಿ ರಿಪೋರ್ಟರ್ ಆಗಿ ಕಾಣಿಸಿಕೊಂಡಿದ್ದೇನೆ. ಮಾಧ್ಯಮದವರ ಕಷ್ಟ ಏನು ಎನ್ನುವುದು ಪಾತ್ರದಲ್ಲಿನ ಅಭಿನಯದ ಮೂಲಕ ಗೊತ್ತಾಯಿತು ಎಂದರು.

ಚಿತ್ರದಲ್ಲಿ ಅರವಿಂದ್ ಬೋಳಾರ್, ರಾಜ್ ದೀಪಕ್ ಶೆಟ್ಟಿ, ನವೀನ್ ಡಿ. ಪಡೀಲ್, ದೇವದಾಸ್ ಕಾಪಿಕಾಡ್ ಮುಂತಾದವರು ನಟಿಸಿದ್ದಾರೆ. ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರು ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಗೋಷ್ಠಿಯಲ್ಲಿ ಶಶಿಕುಮಾರ್, ರಘು ಗುಂಡ್ಲು, ದಿವಾಕರ್ ಶೆಟ್ಟಿ, ಶುಭಂ ಹೋಟೆಲ್ ಮಾಲೀಕ ಉದಯ್ ಕಡಂಬ, ರಾಜ್‌ಕುಮಾರ್ ಮತ್ತಿತರರು ಇದ್ದರು.