ಜೈನ ಧರ್ಮ ಇಂದು ಜೀವಂತವಾಗಿ ಉಳಿದಿರುವುದಕ್ಕೆ ಕಾರಣ ಕೇವಲ ತೀರ್ಥಂಕರರ ಉಪದೇಶ ಮಾತ್ರವಲ್ಲ, ಅದನ್ನು ಸಂರಕ್ಷಿಸಿ, ಸಂಹಿತೆಗೊಳಿಸಿ, ಜೀವನೋಪಯೋಗಿಯಾಗಿ ರೂಪಿಸಿದ ಆಚಾರ್ಯ-ಶಾಸ್ತ್ರ ಪರಂಪರೆ ವಿಶೇಷವಾಗಿ ಜೈನ ಸಿದ್ಧಾಂತಗಳಿಗೆ ಪೂರಕವಾದ ಶಾಶ್ವತ ಕೊಡುಗೆ ನೀಡಿದ ಆಚಾರ್ಯ ಪರಂಪರೆಯನ್ನು ಸ್ಮರಿಸಲು ಇಚ್ಛಿಸುತ್ತೇನೆ ಎಂದು 5ನೇ ದಕ್ಷಿಣ ಭಾರತ ಅರ್ಚಕ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಪಾದೂರು ಸುದರ್ಶನ ಕುಮಾರ್ ಇಂದ್ರ ಹೇಳಿದರು.

ಕನ್ನಡಪ್ರಭವಾರ್ತೆ ಚನ್ನರಾಯಪಟ್ಟಣ

ಜೈನ ಧರ್ಮ ಇಂದು ಜೀವಂತವಾಗಿ ಉಳಿದಿರುವುದಕ್ಕೆ ಕಾರಣ ಕೇವಲ ತೀರ್ಥಂಕರರ ಉಪದೇಶ ಮಾತ್ರವಲ್ಲ, ಅದನ್ನು ಸಂರಕ್ಷಿಸಿ, ಸಂಹಿತೆಗೊಳಿಸಿ, ಜೀವನೋಪಯೋಗಿಯಾಗಿ ರೂಪಿಸಿದ ಆಚಾರ್ಯ-ಶಾಸ್ತ್ರ ಪರಂಪರೆ. ವಿಶೇಷವಾಗಿ ಜೈನ ಸಿದ್ಧಾಂತಗಳಿಗೆ ಪೂರಕವಾದ ಶಾಶ್ವತ ಕೊಡುಗೆ ನೀಡಿದ ಆಚಾರ್ಯ ಪರಂಪರೆಯನ್ನು ಸ್ಮರಿಸಲು ಇಚ್ಛಿಸುತ್ತೇನೆ ಎಂದು 5ನೇ ದಕ್ಷಿಣ ಭಾರತ ಅರ್ಚಕ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಪಾದೂರು ಸುದರ್ಶನ ಕುಮಾರ್ ಇಂದ್ರ ಹೇಳಿದರು. ತಾಲೂಕಿನ ಶ್ರೀಕ್ಷೇತ್ರ ಶ್ರವಣಬೆಳಗೊಳದಲ್ಲಿ ಜ.೬ ಮತ್ತು ೭ ರಂದು ನಡೆಯುತ್ತಿರುವ ೫ನೇ ದಕ್ಷಿಣ ಭಾರತ ದಿಗಂಬರ ಜೈನ ಅರ್ಚಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ಅಹಿಂಸೆ, ಅಪರಿಗ್ರಹ ಮತ್ತು ಅನೇಕಾಂತದ ದಿವ್ಯ ಸಂದೇಶವನ್ನು ಲೋಕಕ್ಕೆ ನೀಡಿದ ತೀಥಂಕರ ಪರಂಪರೆಯ ಪುಣ್ಯಭೂಮಿ ಶ್ರೀ ಕ್ಷೇತ್ರ ಶ್ರವಣಬೆಳಗೊಳದಲ್ಲಿ ಇಂದು ನಾವು ದಕ್ಷಿಣ ಭಾರತ ಮಟ್ಟದ ಜೈನ ಅರ್ಚಕ ಸಮ್ಮೇಳನಕ್ಕೆ ಸೇರಿರುವುದು ಅತ್ಯಂತ ಧನ್ಯತೆಯ ವಿಷಯವಾಗಿದೆ. ಜೈನ ಧರ್ಮವು ಸಂಯಮ, ಶ್ರದ್ಧೆ ಮತ್ತು ಶಾಸ್ತ್ರಾನುಸರಣೆಯ ಮೇಲೆ ನಿಂತ ಶಾಶ್ವತ ಧರ್ಮ. ಧರ್ಮದ ಆಚರಣಾತ್ಮಕ ರೂಪವನ್ನು ಸಮಾಜದೊಳಗೆ ಜೀವಂತವಾಗಿರಿಸುವ ಮಹತ್ತರ ಹೊಣೆಗಾರಿಕೆ ಹಾಗೂ ಜೈನ ಧರ್ಮದ ಜೀವಂತ ಹರಿವನ್ನು ಸಮಾಜದೊಳಗೆ ನಿರಂತರವಾಗಿ ಸಾಗಿಸುವಲ್ಲಿ ಪುರೋಹಿತ, ಪಂಡಿತ, ಅರ್ಚಕ, ಉಪಾಧ್ಯಾಯ ಮತ್ತು ಇಂದ್ರ ಇವರ ಮೇಲಿದೆ. ಕರ್ನಾಟಕವು ಜೈನ ಧರ್ಮದ ಆಚಾರ್ಯ-ಶಾಸ್ತ್ರಿ ಪರಂಪರೆಯ ಮಹಾ ಪೀಠಭೂಮಿ ಆಗಿದೆ. ಶ್ರವಣಬೆಳಗೊಳದಲ್ಲಿ ಆರಂಭಗೊಂಡು ದಕ್ಷಿಣ ಭಾರತಕ್ಕೆ ವಿಸ್ತರಿಸಿ ಬೆಳೆದು ನಿಂತಿದೆ. ಜೈನ ಆಚಾರ್ಯರು, ಯತಿಗಳು, ಶಾಸ್ತ್ರಿಗಳು ಕರ್ನಾಟಕದ ಧಾರ್ಮಿಕ-ಸಾಂಸ್ಕೃತಿಕ ಇತಿಹಾಸವನ್ನು ರೂಪಿಸಿದ್ದಾರೆ. ಕ್ರಿ.ಪೂ.೩ನೇ ಶತಮಾನದಲ್ಲಿ ಚಂದ್ರಗುಪ್ತ ಮೌರ್ಯ ಹಾಗೂ ಭದ್ರಬಾಹು ಆಚಾರ್ಯರು ಶ್ರವಣಬೆಳಗೊಳಕ್ಕೆ ಆಗಮನ ಮಾಡಿದ ನಂತರ ಕರ್ನಾಟಕ ಜೈನ ಧರ್ಮದ ಕೇಂದ್ರವಾಗಿ, ದಿಗಂಬರ ಜೈನ ಆಚಾರ್ಯ ಪರಂಪರೆ ಬೆಳೆದುಬಂದಿತು. ಕುಂದ ಕುಂದಾಚಾರ್ಯರು ಸಮಯಸಾರ, ಪ್ರವಚನಸಾರ, ನಿಯಮಸಾರ ಕೃತಿಗಳನ್ನು ರಚನೆ ಮಾಡಿ ದಿಗಂಬರ ತತ್ತ್ವಶಾಸ್ತ್ರವನ್ನು ಶಿಖರಕ್ಕೆ ಏರಿಸಿದವರು. ಸಮಂತಭದ್ರಾಚಾರ್ಯರು ರತ್ನಕರಂಡಕ ಶ್ರಾವಕಾಚಾರ ಕೃತಿಯ ಮೂಲಕ ಭಕ್ತಿ ಮತ್ತು ತರ್ಕ ಎರಡರ ಸಂಯೋಜನೆ ಮಾಡಿ ಕರ್ನಾಟಕದಲ್ಲಿ ಶ್ರಾವಕ ಸಂಸ್ಕಾರ ಪದ್ಧತಿಗೆ ದಿಕ್ಕನ್ನು ನೀಡಿದವರು ಎಂದರು.

ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಜೈನ ಮಂದಿರಗಳಲ್ಲಿ ದಿನನಿತ್ಯ ಪೂಜೆ ಮಾಡುವ ಜತೆಗೆ ಸಮಾಜದಲ್ಲಿ ಜನರಿಗೆ ಉತ್ತಮ ಸಂಸ್ಕಾರ, ಸನ್ಮಾರ್ಗದತ್ತ ತೆಗೆದುಕೊಂಡು ಹೋಗುವ ಕಾರ್ಯ ಮಾಡುತ್ತಿರುವ ಅರ್ಚಕರ ಕೊಡುಗೆ ಅಪಾರವಿದೆ. ಬೆಳೆ-ಮಳೆ ಕಡಿಮೆ ಆದಾಗಲೂ ನಾವೆಲ್ಲಾ ಅರ್ಚಕರಿಂದ ಪೂಜೆ ಮಾಡಿಸುತ್ತೇವೆ. ಲೋಕಕಲ್ಯಾಣಕ್ಕಾಗಿ ನಿತ್ಯ ಪೂಜೆ, ಸಮಾಜ ತಿದ್ದುವುದರಲ್ಲಿಯೂ ಅರ್ಚಕರ ಕಾರ್ಯ ಅನನ್ಯವಾಗಿದೆ ಎಂದು ಹೇಳಿದರು.

ಪುರಾತನ ಕಾಲದಿಂದಲೂ ಜೈನ ಧರ್ಮಕ್ಕೆ ತನ್ನದೇ ಇದೆ ಧಾರ್ಮಿಕ ಶಕ್ತಿ ತತ್ವ ಆದರ್ಶ ಇದೆ. ಸರ್ವರನ್ನು ಗೌರವಿಸುವ ಸರ್ವರಿಗೂ ಶಕ್ತಿ ತುಂಬವ ಧರ್ಮ ಎಂದರೆ ಅದು ಜೈನಧರ್ಮ ಎಂದರು. ಜಗತ್ತಿನಲ್ಲಿ ಶ್ರವಣಬೆಳಗೊಳ ಕ್ಷೇತ್ರವು ಕೊಟ್ಯಂತರ ಜನರಿಗೆ ಒಳ್ಳೆಯ ದಿಕ್ಕಿನಲ್ಲಿ ಸಾಗುವಂತೆ ಆಶೀರ್ವಾದ ಮಾಡಿದೆ. ದೇವರು ಸ್ವರೂಪದ ಕರ್ಮಯೋಗಿ ದಿವಂಗತ ಚಾರುಕೀರ್ತಿ ಭಟ್ಟಾರಕರು ಶ್ರವಣಬೆಳಗೊಳ ಕ್ಷೇತ್ರವನ್ನು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕವಾಗಿ ಬೆಳೆಸುವದರೊಂದಿಗೆ ಜಗತ್ತಿಗೆ ಪರಿಯಚಯಿಸಿದರು ಎಂದು ಸ್ಮರಿಸಿದರು. ಶ್ರವಣಬೆಳಗೊಳ ದಿಗಂಬರ ಜೈನ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಶಿವಮೊಗ್ಗ ಜಿಲ್ಲೆಯ ಹೊಂಬುಜ ಜೈನ ಮಠದ ಸ್ವಸ್ತಿಶ್ರೀ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದಕ್ಷಿಣ ಭಾರತ ಜೈನ ಅರ್ಚಕರ ಸಂಘದ ಅಧ್ಯಕ್ಷ ಎಸ್.ಎಂ.ಸನ್ಮತಿಕುಮಾರ್, ಪ್ರಧಾನ ಕಾರ್ಯದರ್ಶಿ ಡಾ. ಎಚ್.ಪಿ.ಮೋಹನಕುಮಾರ ಶಾಸ್ತ್ರಿ, ಕಾರ್ಯಾಧ್ಯಕ್ಷ ತವನಪ್ಪ ಪಂಡಿತ, ನಿಕಟಪೂರ್ವ ಅಧ್ಯಕ್ಷ ಶಾಂತಿನಾಥ ಪಾರ್ಶ್ವನಾಥ ಉಪಾದ್ಯೆ, ಶೀಲಾ ಅನಂತರಾಜ್, ಜಿ.ಪಿ.ಪದ್ಮಕುಮಾರ್ ಮುಂತಾದವರಿದ್ದರು.