ಸಾರಾಂಶ
ಸರ್ಕಾರಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಜೈಶ್ರೀರಾಮ್ ಘೋಷಣೆ ಕೂಗಿರುವ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಡಾ.ಬಿ.ಆರ್.ಅಂಬೇಡ್ಕರ್ ಅನುಯಾಯಿ ಬಳಗದ ವತಿಯಿಂದ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರಸರ್ಕಾರಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಜೈಶ್ರೀರಾಮ್ ಘೋಷಣೆ ಕೂಗಿರುವ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಡಾ.ಬಿ.ಆರ್.ಅಂಬೇಡ್ಕರ್ ಅನುಯಾಯಿ ಬಳಗದ ವತಿಯಿಂದ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಸರ್ಕಾರವು ರಾಜ್ಯಾದ್ಯಂತ ಸಂವಿಧಾನ ಜಾಗೃತಿ ಜಾಥಾದ ಮೂಲಕ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಮಾಡುತ್ತಿರುವುದು ವಿಶೇಷವಾಗಿದೆ ಜಾಗೃತಿ ಜಾಥಾವು ಫೆ.8 ರಂದು ಹರದನಹಳ್ಳಿ ಗ್ರಾಪಂ ಬಂದು ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು, ಸಾರ್ವಜನಿಕರು ಭಾಗವಹಿಸಿದ್ದರು. ಈ ನಡುವೆ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಪೂರಕವಾದ ಜೈಭೀಮ್ ಘೋಷಣೆಯನ್ನು ಕೂಗುತ್ತಿದ್ದರು. ಈ ಘೋಷಣೆಗೆ ವಿರುದ್ಧ ಕೆಲವು ವಿದ್ಯಾರ್ಥಿಗಳು ಜೈಶ್ರೀರಾಮ್ ಘೋಷಣೆ ಕೂಗಿರುತ್ತಾರೆ. ಪಕ್ಕದಲ್ಲೇ ಕುಳಿತಿದ್ದ ಶಿಕ್ಷಕರ ಗಮನಕ್ಕೆ ಬಂದ ಮಕ್ಕಳಿಗೆ ಜೈಶ್ರೀರಾಮ್ ಘೋಷಣೆ ಕೂಗದಂತೆ ಹೇಳಿರುತ್ತಾರೆ. ಈ ಕಾರ್ಯಕ್ರಮ ಮುಗಿದ ನಂತರ ಶಿಕ್ಷಕರು ಘಟನೆ ಕುರಿತು ಗ್ರಾಪಂ ಅಧ್ಯಕ್ಷರು ಮತ್ತು ಮುಖ್ಯ ಶಿಕ್ಷಕರ ಗಮನಕ್ಕೆ ತಂದಿರುತ್ತಾರೆ. ಘಟನೆ ಖಂಡಿಸಿದ ಶಿಕ್ಷಕರು ಸುಮಾರು 8 ವರ್ಷಗಳಿಂದ ಇದೇ ಶಾಲೆಯಲ್ಲಿ ಕೆಲಸ ನಿರ್ವಹಿಸಿದ್ದು, ಶಾಲೆಯ ವಿದ್ಯಾರ್ಥಿ ಹಾಗೂ ಪೋಷಕರಿಗೆ ಪ್ರೀತಿ ಪಾತ್ರರಾಗಿದ್ದು ಉತ್ತಮವಾದ ಬಾಂಧವ್ಯವನ್ನು ಹೊಂದಿರುತ್ತಾರೆ. ಹಾಗೂ ಶಾಲೆಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. ಈ ಶಿಕ್ಷಕರು ಜಿಲ್ಲೆಯಲ್ಲಿ ಉತ್ತಮ ಶಿಕ್ಷಕರಾಗಿದ್ದು ಮಕ್ಕಳನ್ನು ಆಟೋಟ ಸ್ಪರ್ಧೆಗಳಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುವಂತೆ ಮಾಡಿದ್ದು, ಶಾಲೆ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ಅನೇಕ ಕೆಲಸಗಳಲ್ಲಿ ತೊಡಗಿಕೊಂಡಿರುತ್ತಾರೆ.ಆದರೆ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಹಾಗೂ ಮುಖ್ಯ ಶಿಕ್ಷಕ ಊರಿನ ಕೆಲವು ಕಿಡಿಕೇಡಿಗಳ ಜೊತೆ ಕೈಜೋಡಿಸಿ ಮಕ್ಕಳಿಗೆ ಎಚ್ಚರಿಕೆ ನೀಡದೇ ಶಿಕ್ಷಕರ ವಿರುದ್ಧವೇ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಮಾನಸಿಕವಾಗಿ ಶಿಕ್ಷಕರಿಗೆ ತೊಂದರೆ ನೀಡಿರುತ್ತಾರೆ. ಹಾಗೂ ಮಾಡದಿರುವ ತಪ್ಪಿಗೆ ಕ್ಷಮೆಯನ್ನು ಯಾಚಿಸುವಂತೆ ಒತ್ತಾಯ ಮಾಡಿರುತ್ತಾರೆ. ಗ್ರಾಮದ ಮುಖಂಡರ ಜೊತೆ ಘಟನೆ ಬಗ್ಗೆ ಚರ್ಚಿಸಿ ಗ್ರಾಮದ ಮಹಿಳಾ ಸಂಘದ ವತಿಯಿಂದ ಕಾರ್ಯಕ್ರಮದ ದಿನ ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಸಂವಿಧಾನಕ್ಕೆ ಅಪಮಾನ ಮಾಡಿದ ವಿದ್ಯಾರ್ಥಿಗಳ ವಿರುದ್ಧ ಶಾಲಾ ''''''''ಹಂತದಲ್ಲಿ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಫೆ 12 ರಂದು ಶಾಲೆಯ ಮುಖ್ಯ ಶಿಕ್ಷಕರಿಗೆ ಮನವಿ ಸಲ್ಲಿಸಿರುತ್ತಾರೆ. ಆದರೆ ಘಟನೆ ನಡೆದು ಇಷ್ಟು ದಿನಗಳಾದರೂ ಎಸ್.ಡಿ.ಎಂ.ಸಿ. ಅಧ್ಯಕ್ಷ ಮತ್ತು ಮುಖ್ಯ ಶಿಕ್ಷಕ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಊರಿನ ಕೆಲವು ಕಿಡಿಕೇಡಿಗಳ ಜೊತೆ ಸೇರಿಕೊಂಡು ಮಕ್ಕಳಿಗೆ ಎಚ್ಚರಿಕೆ ನೀಡದೇ ಶಿಕ್ಷಕರ ವಿರುದ್ಧವೇ ಇಲ್ಲಸಲ್ಲದ ಆರೋಪಗಳನ್ನು ಮಾಡಿ, ದಲಿತ ಎಂಬ ಕಾರಣಕ್ಕೆ ಶಿಕ್ಷಕರ ವರ್ಗಾವಣೆ ಒತ್ತಾಯ ಮಾಡುತ್ತಿರುವುದು ಖಂಡನೀಯ.ಸಂಬಂಧಪಟ್ಟವರ ಮೇಲೆ ಕ್ರಮ ಜರುಗಿಸಿ ನೊಂದ ದಲಿತ ದೈಹಿಕ ಶಿಕ್ಷಕರಿಗೆ ಸೂಕ್ತ ರಕ್ಷಣೆ ನೀಡಿ, ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡುವಂತೆ ಹಾಗೂ ವಿದ್ಯಾರ್ಥಿಗಳನ್ನು ಜೈಶ್ರೀರಾಮ್ ಘೋಷಣೆ ಕೂಗಲು ಪ್ರೇರೆಪಿಸಿದ ಕೆಲವು ಕಿಡಿಕೇಡಿಗಳ ವಿರುದ್ಧ ಪೊಲೀಸ್ ಇಲಾಖೆ ಸುಮೋಟೋ ಕೇಸ್ ದಾಖಲಿಸಿ ಶಿಸ್ತುಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿ ಬಳಗ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅನುಯಾಯಿ ಬಳಗದ ಅಧ್ಯಕ್ಷ ಎಸ್.ಪಿ.ಮಹೇಶ್, ವಾಸು ಹೊಂಡರಬಾಳು, ಸಿದ್ದರಾಜು ದೊಡ್ಡರಾಯಪೇಟೆ, ರಾಜಶೇಖರ ಹೆಗ್ಗೋಠಾರ, ಚಂದಕವಾಡಿ ರಾಜಶೇಖರ, ರಾಜು ರಾಮಸಮುದ್ರ, ಯೋಗೀಶ್ ಸಿದ್ದಯ್ಯನಪುರ, ಸ್ವಾಮಿ ಹೊಂಗನೂರು, ರಂಗಸ್ವಾಮಿ ಗಾಳೀಪುರ, ಕೃಷ್ಣಮೂರ್ತಿ,ರವಿ , ಗ್ರಾಪಂ.ಮಾಜಿ ಸದಸ್ಯ ಕಾಂತರಾಜು ಮನು,ಬಸವಣ್ಣ,ಸ್ವಾಮಿ ಇತರರು ಹಾಜರಿದ್ದರು.