ಜಲಸಿರಿ, ಸ್ಮಾರ್ಟ್‌ ಸಿಟಿ ಎಸ್ಸೆಸ್‌, ಎಸ್ಸೆಸ್ಸೆಂ ಪ್ರಯತ್ನದ ಫಲ: ದಿನೇಶ ಶೆಟ್ಟಿ

| Published : Apr 09 2024, 12:48 AM IST

ಜಲಸಿರಿ, ಸ್ಮಾರ್ಟ್‌ ಸಿಟಿ ಎಸ್ಸೆಸ್‌, ಎಸ್ಸೆಸ್ಸೆಂ ಪ್ರಯತ್ನದ ಫಲ: ದಿನೇಶ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಸಂಸದರಾಗಿ ನಾಲ್ಕು ಅವಧಿಗೆ ಕೆಲಸ ಮಾಡಿದ ಜಿ.ಎಂ.ಸಿದ್ದೇಶ್ವರ ಕಳಂಕಿತ ಕೆಳಸೇತುವೆಗಳನ್ನು ನಿರ್ಮಿಸಿ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸುಳ್ಳು ಹೇಳಿದ್ದು, ಭ್ರಷ್ಟಾಚಾರ ವಿರುದ್ಧ ಕಾಂಗ್ರೆಸ್‌ ಹೋರಾಟ ನಡೆಸಲಿದೆ ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಕಳಂಕಿತ ಕೆಳಸೇತುವೆಗಳ ನಿರ್ಮಾಣವೇ ಬಿಜೆಪಿ ಸಾಧನೆ: ಟೀಕೆ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಸಂಸದರಾಗಿ ನಾಲ್ಕು ಅವಧಿಗೆ ಕೆಲಸ ಮಾಡಿದ ಜಿ.ಎಂ.ಸಿದ್ದೇಶ್ವರ ಕಳಂಕಿತ ಕೆಳಸೇತುವೆಗಳನ್ನು ನಿರ್ಮಿಸಿ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸುಳ್ಳು ಹೇಳಿದ್ದು, ಭ್ರಷ್ಟಾಚಾರ ವಿರುದ್ಧ ಕಾಂಗ್ರೆಸ್‌ ಹೋರಾಟ ನಡೆಸಲಿದೆ ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಶೋಕ ಚಿತ್ರ ಮಂದಿರದ ರೈಲ್ವೆ ಕೆಳಸೇತುವೆ, ಡಿಸಿಎಂ ಟೌನ್ ಶಿಪ್‌ ಬಳಿ ರೈಲ್ವೆ ಕೆಳಸೇತುವೆ, ಹೊಸದಾಗಿ ನಿರ್ಮಿಸಿರುವ ಹಳೇ ಬಸ್ಸುನಿಲ್ದಾಣ ಇಡೀ ನಗರಕ್ಕೆ ಕಳಂಕವಾಗಿದೆ. ಇವುಗಳ ನಿರ್ಮಾಣದಲ್ಲಿ ಭ್ರಷ್ಟಾಚಾರ ಎದ್ದುಕಾಣುತ್ತಿದೆ ಎಂದರು.

ಬಿಜೆಪಿ ಸಂಸದ ಸಿದ್ದೇಶ್ವರ ಅವಧಿಯ ಕಳಂಕಿತರ ಕೆಳಸೇತುವೆಗಳ ಸ್ಥಳದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನಿಂದ ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ. ಜಲಸಿರಿ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ ಅವರ ದೂರದೃಷ್ಟಿ ಕಾರಣವಾಗಿದೆ. ಜಲಸಿರಿ ಯೋಜನೆಗೆ ಮೊದಲ ಆಯ್ಕೆ ವಿನಯಕುಮಾರ ಸೊರಕೆ ಪ್ರತಿನಿಧಿಸುತ್ತಿದ್ದ ಕಾಪು ಕ್ಷೇತ್ರವಾಗಿತ್ತು. ಅಲ್ಲಿ ತಾಂತ್ರಿಕ ಕಾರಣಗಳಿಂದಾಗಿ ಜಲಸಿರಿ ಯೋಜನೆ ಅನುಷ್ಠಾನಗೊಳ್ಳದ್ದರಿಂದ ದಾವಣಗೆರೆಗೆ ತಂದವರು ಎಸ್‌.ಎಸ್‌. ಮಲ್ಲಿಕಾರ್ಜುನ ಎಂದು ತಿಳಿಸಿದರು.

ಸ್ಮಾರ್ಟ್ ಸಿಟಿ ಯೋಜನೆ ಮೊದಲ ಪಟ್ಟಿಯಲ್ಲೇ ದಾವಣಗೆರೆ ಆಯ್ಕೆಯಾಗುವಲ್ಲಿ ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ, ಆಗಿನ ಪಾಲಿಕೆ ಆಡಳಿತ ಪಕ್ಷ ಕಾಂಗ್ರೆಸ್‌, ಆಯುಕ್ತ ಬಿ.ಎಚ್. ನಾರಾಯಣಪ್ಪ ಶ್ರಮದ ಫಲವಾಗಿದೆ. ಉತ್ತಮ ತೆರಿಗೆ ಸಂಗ್ರಹಣೆ, ಕೇಂದ್ರ, ರಾಜ್ಯ ಸರ್ಕಾರಗಳ ಅನುದಾನ ಸದ್ಬಳಕೆಯಿಂದಾಗಿ ಸ್ಮಾರ್ಟ್‌ ಸಿಟಿಗೆ ಆಯ್ಕೆಯಾಯಿತೇ ಹೊರತು, ಸಂಸದರ ಪಾತ್ರ ಇದರಲ್ಲಿ ಏನೂ ಇಲ್ಲ ಎಂದು ಟೀಕಿಸಿದರು.

ಜಲಸಿರಿ ಯೋಜನೆ, ಸ್ಮಾರ್ಟ್ ಸಿಟಿ ಯೋಜನೆಗಳು ದಾವಣಗೆರೆಗೆ ಹೇಗೆ ಲಭಿಸಿದವೆಂಬ ಸಂಗತಿಯನ್ನೆಲ್ಲಾ ಅರಿಯದ ಅಥವಾ ಅರಿತಿದ್ದರೂ ಜನಸಾಮಾನ್ಯರಿಗೆ ತಪ್ಪು ಮಾಹಿತಿ ನೀಡುವ ಕೆಲಸವನ್ನು ಸಂಸದ ಸಿದ್ದೇಶ್ವರ ಮಾಡುತ್ತಿದ್ದಾರೆ. ಸಿದ್ದೇಶ್ವರ ದಾವಣಗೆರೆ ಜಿಲ್ಲೆಗೆ ಯಾವುದೇ ಯೋಜನೆಗಳನ್ನು ತರದೇ, ಶಾಮನೂರು ಶಿವಶಂಕರಪ್ಪ, ಎಸ್.ಎಸ್.ಮಲ್ಲಿಕಾರ್ಜುನ ತಂದ ಯೋಜನೆಗಳಲ್ಲಿ ಕಮಿಷನ್ ಪಡೆದಿದ್ದಾರೆ ಎಂದು ಆರೋಪಿಸಿದರು.

ಮುಖಂಡರಾದ ಅಯೂಬ್ ಪೈಲ್ವಾನ್‌, ಆರ್.ಎಚ್.ನಾಗಭೂಷಣ, ಉತ್ತರ ಅಧ್ಯಕ್ಷ ಕೆ.ಜಿ.ಶಿವಕುಮಾರ, ಪಾಲಿಕೆ ಸದಸ್ಯ ಎ.ನಾಗರಾಜ, ಮಾಜಿ ಮೇಯರ್ ಅನಿತಾಬಾಯಿ ಮಾಲತೇಶ ಇತರರಿದ್ದರು.

- - - -8ಕೆಡಿವಿಜಿ3:

ದಾವಣಗೆರೆಯಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ ನೇತೃತ್ವದ ಸುದ್ದಿಗೋಷ್ಠಿಯಲ್ಲಿ ಸಂಸದ ಸಿದ್ದೇಶ್ವರ ವಿರುದ್ಧ ಮುಖಂಡರು ಫಲಕ ಪ್ರದರ್ಶಿಸಿದರು.