ಸಾರಾಂಶ
ಧರ್ಮ ಸಂರಕ್ಷಣೆಯ ಈ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳು ಹಾಜರಿದ್ದು ಹಿಂದು ಧಾರ್ಮಿಕ ನಂಬಿಕೆಗಳ ಮೇಲೆ ಪ್ರಹಾರ ಮಾಡುವ ಕಿಡಿಗೇಡಿಗಳ ವಿರುದ್ಧ ಕಠಿಣ ಸಂದೇಶ ರವಾನಿಸಬೇಕು
ಕುಮಟಾ: ಧರ್ಮಸ್ಥಳ ಷಡ್ಯಂತ್ರದ ಹಿಂದಿನ ಶಕ್ತಿಗಳಿಗೆ ಕಾನೂನು ಬಿಸಿ ಮುಟ್ಟಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಆ.೨೫ ರಂದು ಮಧ್ಯಾಹ್ನ ೩ ಗಂಟೆಗೆ ಪಟ್ಟಣದಲ್ಲಿ ಜನಾಗ್ರಹ ಜಾಥಾ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸನಾತನ ಧರ್ಮ ಜಾಗೃತಿ ಪ್ರತಿಷ್ಠಾನದ ಅಧ್ಯಕ್ಷ ಎಂ.ಜಿ. ಭಟ್ ತಿಳಿಸಿದರು.ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ಅಂದು ಮಧ್ಯಾಹ್ನ ಮಣಕಿ ಮೈದಾನದಲ್ಲಿ ಸೇರಿ ಮೆರವಣಿಗೆ ಮೂಲಕ ತಾಲೂಕಾಡಳಿತ ಸೌಧಕ್ಕೆ ತೆರಳಿ ಪ್ರಧಾನಮಂತ್ರಿ, ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಸಂಬೋಧಿಸಿದ ಮನವಿ ಅಧಿಕಾರಿಗಳ ಮೂಲಕ ಸಲ್ಲಿಸಲಾಗುವುದು. ಧರ್ಮ ಸಂರಕ್ಷಣೆಯ ಈ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳು ಹಾಜರಿದ್ದು ಹಿಂದು ಧಾರ್ಮಿಕ ನಂಬಿಕೆಗಳ ಮೇಲೆ ಪ್ರಹಾರ ಮಾಡುವ ಕಿಡಿಗೇಡಿಗಳ ವಿರುದ್ಧ ಕಠಿಣ ಸಂದೇಶ ರವಾನಿಸಬೇಕು ಎಂದು ವಿನಂತಿಸಿದರು.
ಬಿಜೆಪಿ ಮಂಡಲಾಧ್ಯಕ್ಷ ಜಿ.ಐ. ಹೆಗಡೆ ಮಾತನಾಡಿ, ಹಿಂದೆ ಕಾಂಚಿಶ್ರೀ, ರಾಘವೇಶ್ವರ ಶ್ರೀ, ಶಬರಿಮಲೆ, ತಿರುಪತಿ ಮುಂತಾದ ಹಲವು ಪ್ರಕರಣಗಳಲ್ಲಿ ಇದೇ ಮಾದರಿಯ ಅಂತಾರಾಷ್ಟ್ರೀಯ ಷಡ್ಯಂತ್ರ ಕಂಡಿದ್ದೇವೆ. ಮುಂದುವರಿದ ಭಾಗವಾಗಿ ಇಂದು ಧರ್ಮಸ್ಥಳಕ್ಕೂ ಬಂದು ತಲುಪಿದೆ. ಇದೊಂದು ಪರೀಕ್ಷಾ ಕಾಲವಾಗಿದ್ದು ನಕಲಿ ಹಿಂದುತ್ವವಾದಿಗಳ ಬಣ್ಣ ಬಯಲಾಗಲು ಕಾರಣವಾಗಿದೆ. ಸೌಜನ್ಯಳಂತಹ ಯಾವುದೇ ಹೆಣ್ಣಿನ ಮಾನಪ್ರಾಣದ ಪರವಾಗಿ ಬಿಜೆಪಿ ಯಾವತ್ತೂ ನಿಂತಿದೆ. ಆದರೆ ನೇರವಾಗಿ ಧರ್ಮಕ್ಷೇತ್ರ ಹಾಗೂ ಡಾ. ಹೆಗ್ಗಡೆ ಕುಟುಂಬವನ್ನೇ ಗುರಿಯಾಗಿಸಿ ನಡೆಸುತ್ತಿರುವ ತಥಾಕಥಿತ ಧಾರ್ಮಿಕ ನಿಂದನೆ ಸಹಿಸಲಾಗದು. ಪ್ರತಿಭಟನೆಯಲ್ಲಿ ಸನಾತನ ಧರ್ಮ ಜಾಗೃತಿ ಪ್ರತಿಷ್ಠಾನ, ಹಿಂದು ಪರ ವಿವಿಧ ಸಂಘಟನೆ, ಬಿಜೆಪಿ ಮಾತ್ರವಲ್ಲದೇ ಪಕ್ಷಾತೀತವಾಗಿ, ಹಲವು ಜನಪರ ಸಂಘಟನೆ, ಸೇವಾ ಸಂಘಟನೆ ಸಹಿತ ಸಮಸ್ತ ಹಿಂದು ಸಮಾಜ ಹೋರಾಟದಲ್ಲಿ ಕೈಜೋಡಿಸಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದು ವಿನಂತಿಸಿದರು.ಹೊಲನಗದ್ದೆ ಪಂಚಾಯಿತಿ ಅಧ್ಯಕ್ಷ ಎಂ.ಎಂ. ಹೆಗಡೆ, ಜಯಾ ಶೇಟ್, ಜಿನೇಂದ್ರ ನಾಯ್ಕ, ಎಂ.ಸಿ. ನಾಯ್ಕ, ದೀಪಾ ಹಿಣಿ, ಚಿನ್ಮಯ ಕಾಮತ, ತಿಮ್ಮಪ್ಪ ಮುಕ್ರಿ ಇತರರು ಇದ್ದರು.