ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ರಾಜ್ಯ ಬಿಜೆಪಿ ಏ. 7 ರಿಂದ ಹಮ್ಮಿಕೊಂಡಿರುವ ಜನಾಕ್ರೋಶ ಯಾತ್ರೆ ಮೈಸೂರಿನಿಂದಲೇ ಆರಂಭವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ತಿಳಿಸಿದರು.ನಗರದ ಚಾಮರಾಜಪುರಂನ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ಸಿಎಂ ತವರು ಜಿಲ್ಲೆ ಮೈಸೂರಿನಲ್ಲೂ ಪ್ರತಿಭಟನೆಗೆ ಬಿಜೆಪಿ ಸಿದ್ಧತೆ ನಡೆಸಿದೆ. ಮೈಸೂರಿನಲ್ಲಿ ಆರಂಭವಾಗುವ ಈ ಪ್ರತಿಭಟನೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ ನೀಡುವರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಪಕ್ಷದ ಇತರ ನಾಯಕರು ಪಾಲ್ಗೊಳ್ಳುವರು ಎಂದರು.
ಬಿಜೆಪಿ ಅಹೋರಾತ್ರಿ ಧರಣಿಗೆ ಮುಂದಾಗುವ ಮುನ್ನಾ ದಿನವೂ ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಸಿತ್ತು. ಕಸದ ಮೇಲೂ ತೆರಿಗೆ, ಮನೆಗಳ ಮುಂದೆ ನಿಲ್ಲಿಸುವ ವಾಹನಗಳ ಮೇಲೆಯೂ ತೆರಿಗೆ ಸೇರಿದಂತೆ ರಾಜ್ಯದ ಜನರಿಗೆ ತೆರಿಗೆ ಭಾರ ಹೊರಿಸುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಏ. 7 ರಿಂದ ಮೈಸೂರಿನಿಂದಲೇ ಹೋರಾಟ ಆರಂಭಿಸುತ್ತೇವೆ. ರಾಜ್ಯ ಸರ್ಕಾರದ ಸೊಕ್ಕನ್ನು ಚಾಮುಂಡೇಶ್ವರಿ ಮುರಿಯಬೇಕು ಎಂಬ ಸಂಕಲ್ಪದೊಂದಿಗೆ ಬಿಜೆಪಿ ಹೋರಾಟ ಆರಂಭಿಸಲಿದೆ ಎಂದು ಅವರು ಹೇಳಿದರು.ವಕ್ತಾರ ಎಂ.ಜಿ. ಮಹೇಶ್ ಮಾತನಾಡಿ, ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ಮೈಸೂರಿನಿಂದಲೇ ಹೋರಾಟ ಆರಂಭಿಸುತ್ತಿದ್ದೇವೆ. ಈಗಾಗಲೇ ಹಲವು ಹೋರಾಟಗಳನ್ನು ಮೈಸೂರಿನಿಂದಲೇ ಆರಂಭಿಸಿ ಯಶಸ್ವಿ ಆಗಿದ್ದೇವೆ. ಹಾಗಾಗಿ ರಾಜ್ಯ ಸರ್ಕಾರದ ವಿರುದ್ಧ ಮೈಸೂರಿನಿಂದಲೇ ಹೋರಾಟ ಆರಂಭಿಸುತ್ತಿದ್ದೇವೆ. ಏ. 7ರಂದು ಮೈಸೂರಿನ ಪುರಭವನ ಬಳಿಯಿಂದ ಜನಾಂದೋಲನ ಯಾತ್ರೆಗೆ ಚಾಲನೆ ಸಿಗಲಿದೆ. ಸುಮಾರು 2 ಕಿ.ಮೀ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಹೊರಡಲಿದೆ. ರಾಜ್ಯ ಸರ್ಕಾರದ ವಿರುದ್ಧ ಜನ ಜಾಗೃತಿ ಮೂಡಿಸುವ ಕೆಲಸದಲ್ಲಿ ನಮ್ಮ ಬಿಜೆಪಿ ಪಕ್ಷದ ಹಿರಿಯ ಮುಖಂಡರು ಪಾಲ್ಗೊಳ್ಳುವುರು ಎಂದು ಹೇಳಿದರು.
ಮೊದಲ ಹಂತದಲ್ಲಿ ಮೈಸೂರು, ಚಾಮರಾಜನಗರ, ಮಂಡ್ಯ, ಚಿಕ್ಕಮಗಳೂರು, ಉಡುಪಿ ಸೇರಿದಂತೆ ದಕ್ಷಿಣ ಕರ್ನಾಟಕದ ಭಾಗದಲ್ಲಿ ಜನಾಂದೋಲನ ಯಾತ್ರೆ ಹೊರಡುತ್ತದೆ ಎಂದು ಮಾಹಿತಿ ನೀಡಿದರು.ಪೂರ್ವಭಾವಿ ಸಭೆ:
ಏ. 7 ರಂದು ಮೈಸೂರಿನಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಲಿರುವ ಹಿನ್ನಲೆಯಲ್ಲಿ ಶುಕ್ರವಾರ ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಮಾಜಿ ಶಾಸಕ ಪ್ರೀತಮ್ ಗೌಡ, ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಅಲ್ಪಸಂಖ್ಯಾತರ ಮೋರ್ಚಾದ ಅಧ್ಯಕ್ಷ ಅನಿಲ್ ಥಾಮಸ್, ಹಿಂದುಳಿದ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ. ರಾಜೇಂದ್ರ, ಮುಖಂಡರಾದ ಕವೀಶ್ ಗೌಡ, ಮಂಗಳಾ ಸೋಮಶೇಖರ್, ಮೈಸೂರು, ಚಾಮರಾಜನಗರ ಜಿಲ್ಲೆಯ ಮುಖಂಡರು ಪಾಲ್ಗೊಂಡಿದ್ದರು.