ದೇಹಕ್ಕೆ ಚೈತನ್ಯ ಶಕ್ತಿ ತುಂಬಿ ನಡೆಸುವುದೇ ಜಂಗಮ

| Published : Jul 29 2024, 12:53 AM IST

ಸಾರಾಂಶ

ಹುಟ್ಟು ಸಾವು ಗೆದ್ದಿರುವುದೇ ಜಂಗಮ. ಜಂಗಮ ಎಂದರೆ ಜಾತಿ ಅಲ್ಲ, ವರ್ಗ,ಜಂಗಮ ಎನ್ನುವ ವಸ್ತುವಿಗೆ ಯಾವುದೇ ಹೋಲಿಕೆ ಕೊಡಲು ಆಗುವುದಿಲ್ಲ

ಮುಂಡರಗಿ: ಹುಟ್ಟುವುದು ಮತ್ತು ಸಾಯುವುದು ಜಂಗಮವಲ್ಲ. ಜಂಗಮಕ್ಕೆ ತಂದೆ ತಾಯಿ ಇಲ್ಲ. ಜಂಗಮಕ್ಕೆ ಜಾತಿ ಸೂತಕಾದಿಗಳಿಲ್ಲ. ನಮ್ಮ ದೇಹಕ್ಕೆ ಚೈತನ್ಯ ಶಕ್ತಿ ತುಂಬಿ ನಡೆಸುವುದೇ ಜಂಗಮ ಎಂದು ಸಿಂಧನೂರಿನ ಬಸವಕೇಂದ್ರದ ವೀರಭದ್ರಪ್ಪ ಕುರಕುಂದಿ ಹೇಳಿದರು.

ಅವರು ಮುಂಡರಗಿ ತೋಂಟದಾರ್ಯ ಮಠದಲ್ಲಿ ಆಷಾಢ ಮಾಸದ ಅಂಗವಾಗಿ ಜರುಗುತ್ತಿರುವ ಅನುಭಾವ ದರ್ಶನ ಪ್ರವಚನ ಮಾಲಿಕೆಯಲ್ಲಿ ಜಂಗಮತತ್ವ ಬಸವಣ್ಣ ಕುರಿತು ಮಾತನಾಡಿದರು.

ಹುಟ್ಟು ಸಾವು ಗೆದ್ದಿರುವುದೇ ಜಂಗಮ. ಜಂಗಮ ಎಂದರೆ ಜಾತಿ ಅಲ್ಲ, ವರ್ಗ,ಜಂಗಮ ಎನ್ನುವ ವಸ್ತುವಿಗೆ ಯಾವುದೇ ಹೋಲಿಕೆ ಕೊಡಲು ಆಗುವುದಿಲ್ಲ. ಬಸವಣ್ಣ ಜಂಗಮ ಪ್ರೇಮಿಯಾಗಿದ್ದರು. ಬಸವಣ್ಣನವರು ನೋಂದವರಲ್ಲಿ, ಬೆಂದವರಲ್ಲಿ, ದೀನರಲ್ಲಿ, ದಲಿತರಲ್ಲಿ ಜಂಗಮತ್ವ ಕಂಡಿದ್ದರು. ಬಸವಾದಿ ಪ್ರಮಥರು ಸಾವನ್ನು ಗೆದ್ದ ಜಂಗಮರು. ನಮ್ಮ ದೇಹದಲ್ಲಿನ ಜೀವವೇ ಜಂಗಮ. ನಮ್ಮೊಳಗಿನ ಜಂಗಮ ಶಕ್ತಿ ನಾವು ವಿಕಾಸ ಮಾಡಿಕೊಳ್ಳಬೇಕು. ಅರಿವು, ಆಚಾರಕ್ಕೆ ನಾವು ಜಂಗಮ ಎನ್ನಬೇಕು. ಜಂಗಮ ಜಾತಿ ಅಲ್ಲ, ಕುಲವಲ್ಲ ಅದೊಂದು ವಸ್ತು. ಜಂಗಮ ಶಕ್ತಿ ಜಾತಿಗೆ ಹೋಲಿಸಬಾರದು ಎಂದರು.

ಹಾರೋಗೇರಿ ಶರಣರ ವಿಚಾರ ವಾಹಿನಿಯ ಐ.ಆರ್. ಮಠಪತಿ ಸಾಂಸ್ಕೃತಿಕ ನಾಯಕ ಬಸವಣ್ಣ ಕುರಿತು ಮಾತನಾಡಿ, 12ನೇ ಶತಮಾನದ ಪೂರ್ವದಲ್ಲಿ ಜನರ ಸ್ಥಿತಿಗತಿ ಅವಲೋಕನ ಮಾಡಿದಾಗ ಅಂದು ಗುಲಾಮಗಿರಿ, ಚಾತುರ್ವಣ ಪದ್ಧತಿ ಇದ್ದವು. ಜಾತಿ, ಬೇಧಭಾವಗಳ ಸುಳಿಯಲ್ಲಿ ಸಿಕ್ಕು ನಲುಗುತ್ತಿದ್ದ ಕಾಲವದು. ಅಂತಹ ಕಾಲಘಟ್ಟದಲ್ಲಿ ಬಂದ ಬಸವಣ್ಣನವರು ಇವನ್ಯಾರವ ಇವನ್ಯಾರವ ಇವನ್ಯಾರವ ಎಂದಿನಿಸದೇ ಇವ ನಮ್ಮವ, ಇವ ನಮ್ಮವ ಎಂದಿನಿಸಯ್ಯ ಎಂದು ಹೇಳಿ ಜಾತಿಯತೆ,ಅಸಮಾನತೆಯ ವಿರುದ್ಧ ಧ್ವನಿ ಎತ್ತಿದರು.

ಎಲ್ಲರನ್ನೂ ಅಪ್ಪಿಕೊಂಡು ಏಕದೇವೋಪಾಸನೆಯ ಬಗ್ಗೆ ಮೊಟ್ಟ ಮೊದಲ ಬಾರಿಗೆ ತಿಳಿಸಿಕೊಟ್ಟರು. ಇದಲ್ಲದೇ 900 ವರ್ಷಗಳ ಹಿಂದೆಯೇ ದೇಶದ ಮೂಲೆ ಮೂಲೆಯಿಂದ ಬಂದಿದ್ದ ಎಲ್ಲ ಶರಣರಿಗೂ ಕನ್ನಡ ಭಾಷೆ ಕಲಿಸಿ ಕನ್ನಡದಲ್ಲಿಯೇ ವಚನ ರಚಿಸಲು ಕಲಿಸುವ ಮೂಲಕ ಸಾಂಸ್ಕ್ರತಿಕವಾಗಿ ಕನ್ನಡ ಸಾಹಿತ್ಯ ಸಮೃದ್ಧಿಗೊಳಿಸಿದರು. ಬಸವಣ್ಣನವರು ಸಾಮಾನ್ಯರ ಬದುಕಿನಲ್ಲಿದ್ದ ಗೊಂದಲ ಪರಿಹರಿಸಿದ ಈ ನಾಡಿನ ಸಾಂಸ್ಕ್ರತಿಕ ನಾಯಕರಾಗಿದ್ದಾರೆ ಎಂದರು.

ಸಾನ್ನಿಧ್ಯ ವಹಿಸಿದ್ದ ಜ. ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ಜಗತ್ತಿನಲ್ಲಿ ಎಲ್ಲ ಧರ್ಮ ಸಿದ್ಧಾಂತಗಳು ಮೂರರ ಮೇಲೆ ಚರ್ಚೆಗಳಾಗಬೇಕು. ಅವು ಜೀವ, ಜಗತ್ತು ಮತ್ತು ಈಶ್ವರನ ಕುರಿತು ಚಿಂತನೆ ಮಾಡುವ ಮೂಲ ಸಿದ್ಧಾಂತಕ್ಕೆ ಆಧ್ಯಾತ್ಮ ಎನ್ನುತ್ತಾರೆ. ಜಂಗಮ ಎಂದರೆ ಜೀವ. ಈ ಜಗತ್ತಿನಲ್ಲಿ‌ ಎಲ್ಲವನ್ನೂ ಪ್ರಕೃತಿ ನಮಗೆ ಕೊಟ್ಟಿದ್ದೆ. ಭೂಚರ, ಜಲಚರ, ಕೇಚರ ಕೊಟ್ಟಿದೆ. ಇವೆಲ್ಲವೂ ಜೀವದ ಮೇಲೆ ನಿಂತಿವೆ. ಎಲ್ಲ ಸಿದ್ಧಾಂತಗಳು ಪ್ರಾರಂಭವಾಗುವುದೇ ಜೀವದ ಮೇಲೆ. ಜಂಗಮ ಎನ್ನುವುದು ಜೀವ ಅದು ಜೀವಾತ್ಮ ಆಗಬೇಕು.

ಒಂದು ಜೀವ ಪ್ರೀತಿ ಮಾಡಿದರೆ ಅದು ಕರ್ಮ, ಒಂದು ಜೀವ ಸಕಲರನ್ನೂ ಪ್ರೀತಿ ಮಾಡಿದರೆ ಅದು ಧರ್ಮ. ವ್ಯಕ್ತಿಯನ್ನು ಗೌರವಿಸುವುದು ಬೇರೆ, ಪ್ರೀತಿ ಮಾಡುವುದು ಬೇರೆ. ಜಾತಿ ಮೀರಿ ಬರುವುದೇ ಜಂಗಮ. ಬಸವಣ್ಣನವರಲ್ಲಿ ಜೀವ ಪ್ರೇಮವಿತ್ತು. ಬಸವಣ್ಣ ಜಂಗಮ ಪ್ರೇಮಿಯಾಗಿದ್ದರು ಎಂದರು. ಸಿದ್ದಲಿಂಗೇಶ ಕಬ್ಬೂರಮಠ ಸ್ವಾಗತಿಸಿ, ನಿರೂಪಿಸಿದರು.