ಸಾರಾಂಶ
- ನಗರ, ಪಟ್ಟಣಗಳ ಮಾರುಕಟ್ಟೆ ಪ್ರವೇಶಿಸಿರುವ ನೇರಳೆ । ಅಪರೂಪದ ಹಣ್ಣುಗಳ ಸಾಲಿಗೆ ಸೇರುತ್ತಿರುವ ಫಲ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಮುಂಗಾರು ಹಂಗಾಮು ಆರಂಭ ಕಾಲದಲ್ಲಿ ನಗರ, ಪಟ್ಟಣಗಳ ಮಾರುಕಟ್ಟೆಯಲ್ಲಿ ಕಪ್ಪುದ್ರಾಕ್ಷಿಗೆ ಸರಿಸಮನಾಗಿ ಹಣ್ಣುಪ್ರಿಯರ ಕಣ್ಣು ಸೆಳೆಯುವುದು ನೇರಳೆ ಹಣ್ಣು. ಹಳ್ಳಿಗಳಲ್ಲಾದರೆ ಮಕ್ಕಳು, ಯುವಜನರು ನೇರಳೆ ಮರಗಳನ್ನು ಹುಡುಕಿ, ಗದ್ದೆ, ಹೊಲ, ತೋಟಗಳಿಗೆ ತೆರಳಿ ತರುವಂಥ ರುಚಿಕರ ಹಣ್ಣಿದು.ಎಷ್ಟೇ ಎತ್ತರಕ್ಕೆ ಬೆಳೆದ ಮರವನ್ನೂ ಹತ್ತಿ ಅಥವಾ ಕಲ್ಲು ಬೀರಿಯಾದರೂ ಸಂಗ್ರಹಿಸಿ ತಂದು ತಿನ್ನುವಂಥ ಈ ಹಣ್ಣು ಇಂದು ಅಪರೂಪವಾಗುತ್ತಿದೆ. ಇಂಥ ಹಣ್ಣು ಹೊನ್ನಾಳಿ ಪಟ್ಟಣದಲ್ಲಿ ಈಗ ಅಲ್ಲಲ್ಲಿ ಗ್ರಾಹಕರ ಕೈ ಸೇರುತ್ತಿದೆ. ಎಷ್ಟೋ ಬಡಹಣ್ಣು ವ್ಯಾಪಾರಿಗಳಿಗೆ ವೃತ್ತಿಯಾಗಿ ಕೈ ಹಿಡಿದಿದೆ ನೇರಳೆ.
ಕವಳೆ, ಬೆಟ್ಟದ ನೆಲ್ಲಿ, ಬೋರೆಹಣ್ಣು ಸೇರಿ ಕಾಡು ಪ್ರದೇಶದಲ್ಲಿ ಬೆಳೆಯುವ ಅನೇಕ ಹಣ್ಣುಗಳು ಇಂದು ನಗರ, ಪಟ್ಟಣಿಗರ ಕಣ್ಣು ಮಾತ್ರವಲ್ಲ, ಮನಸಿನಿಂದಲೇ ಮಾಯವಾಗುತ್ತಿವೆ. ಈಗ ನೇರಳೆ ಹಣ್ಣು ಕೂಡ ಈ ಸ್ಥಿತಿಗೆ ಬಂದಿದೆ. ಪ್ರಾಣಿ, ಪಕ್ಷಿಗಳಿಗೂ ಇಷ್ಟವಾಗುವ ಈ ನೇರಳೆ ಪಟ್ಟಣ, ನಗರಗಳಲ್ಲಿ ಖರೀದಿಸಲು ಜನ ಉತ್ಸುಕರಾಗಿ ಇರುವುದು ಇದಕ್ಕೆ ಸಾಕ್ಷಿ ಎನ್ನಬಹುದು.ಬಹುಪಯೋಗಿ ಫಲ:
ನೇರಳೆ ನಾಲಗೆಗೆ ಮಾತ್ರವಲ್ಲ, ದೇಹಕ್ಕೂ ಬಹುಪಯೋಗಿ. ಸಕ್ಕರೆ ಕಾಯಲೆ, ಹೃದಯ ಸಂಬಂಧಿ ಕಾಯಿಲೆ ಸೇರಿ ಅನೇಕ ರೋಗಗಳಿಗೆ ರಾಮಬಾಣ. ಇದೇ ಕಾರಣಕ್ಕೆ ವರ್ಷಕ್ಕೊಂದು ಹಬ್ಬದಂತೆ ಬರುವ ನೇರಳೆ ಹಣ್ಣು ಜನ ಇಷ್ಟಪಟ್ಟು ಸೇವಿಸುತ್ತಾರೆ. ಪಿತ್ತ ಜನಕಾಂಗದಲ್ಲಿ ಉತ್ಪತ್ತಿಯಾಗುವ ಇನ್ಸುಲಿನ್‌ಗೆ ವೇಗವರ್ಧಕವಾಗಿ ನೇರಳೆ ಕಾರ್ಯನಿರ್ವಹಿಸುತ್ತದೆ. ಇನ್ಸುಲಿನ್ ಅಂಶ ಹೆಚ್ಚಾಗಿ ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಆಗುತ್ತದೆ ಎನ್ನುವುದು ವೈದ್ಯಲೋಕದ ಮಾಹಿತಿ.ನೇರಳೆ ತೋಟಗಳು:
ನಾಟಿನೇರಳೆ, ನಾಯಿ ನೇರಳೆ, ಹಾಗೂ ಜಂಬೂ ನೇರಳೆ ಎಂಬ ವಿಧಗಳಲ್ಲಿ ಗುರುತಿಸುವ ನೇರಳೆ ಹಣ್ಣು ಜೂನ್ ಮತ್ತು ಜುಲೈ ತಿಂಗಳಲ್ಲಿ ಮಾತ್ರ ಲಭ್ಯವಾಗುತ್ತದೆ ಎಂಬುವು ವಿಶೇಷ. ಕಾಡುಗಳು ಬಿಟ್ಟರೆ ಹಳ್ಳಿ, ರಸ್ತೆ ಇಕ್ಕೆಲಗಳ ಸಾಲು ಮರಗಳಲ್ಲಿ ಸಿರುವ ನೇರಳೆ ಮಕ್ಕಳಿಗೆ ಅಚ್ಚುಮೆಚ್ಚು. ನೇರಳೆ ಹಣ್ಣು ತೋಟಗಳನ್ನೇ ನಿರ್ಮಿಸಿ ರೈತರು ಲಾಭ ಗಳಿಸುತ್ತಿದ್ದಾರೆ. ಹಣ್ಣುಗಳ ವ್ಯಾಪಾರಿಗಳಿಗೆ ನೇರಳೆ ತೋಟಗಳ ಗುತ್ತಿಗೆ ನೀಡುತ್ತಾರೆ ಎನ್ನುತ್ತಾರೆ ವ್ಯಾಪಾರಿಗಳು.ಹೊನ್ನಾಳಿ ಪಟ್ಟಣದಲ್ಲಿ ನೇರಳೆ ಮಾರಾಟಕ್ಕೆಂದೇ ಹಾವೇರಿ ಜಿಲ್ಲೆ ವ್ಯಾಪಾರಿಗಳು ಬಂದಿದ್ದಾರೆ. ರಟ್ಟಿಹಳ್ಳಿ ತಾಲೂಕಿನ ಕಿರಿಗೆರೆ ಗ್ರಾಮದ ನೇರಳೆ ವ್ಯಾಪಾರಿ ಫಾರೂಕ್ ಹೇಳುವಂತೆ, ನೇರಳೆ ಹಣ್ಣಿನಿಂದ ವೃತ್ತಿ ಕಂಡುಕೊಂಡಿದ್ದೇನೆ. ತೂಕದ ಲೆಕ್ಕದಲ್ಲಿ ಈ ಹಣ್ಣು ಮಾರಾಟ ಮಾಡುತ್ತಾರೆ. ಪ್ರಸ್ತುತ 1 ಕೆ.ಜಿ. ನೇರಳೆ ಹಣ್ಣು ₹400 ವರೆಗೆ ಮಾರಾಟ ಮಾಡಲಾಗುತ್ತಿದೆ. ದಿನಕ್ಕೆ 25ರಿಂದ 40 ಕೆ.ಜಿ. ನೇರಳೆ ಹಣ್ಣು ಮಾರಾಟ ಮಾಡುತ್ತಿದ್ದೇನೆ ಎನ್ನುತ್ತಾರೆ.
ರುಚಿ ನೋಡದೇ ಖರೀದಿಸೋದಿಲ್ಲ:ಕೆಲ ಗ್ರಾಹಕರು ಹಣ್ಣು ರುಚಿ ನೋಡಲೆಂದೇ ಬುಟ್ಟಿಗೆ ಕೈ ಹಾಕಿ ಒಂದೆರಡು ಹಣ್ಣುಗಳ ತಿಂದುಬಿಡುತ್ತಾರೆ. ಹೀಗೆ ದಿನಕ್ಕೆ ಹತ್ತಿಪ್ಪತ್ತು ಜನ ಹಣ್ಣುಗಳ ತಿಂದರೆ ನಮಗೆ ಕೆ.ಜಿ.ಗೂ ಅಧಿಕ ಹಣ್ಣು ನಷ್ಟವಾಗುತ್ತದೆ. ತಿನ್ನುವ ವಸ್ತುಗಳನ್ನು ತೆರೆದಿಟ್ಟಾಗ ಜನ ಕೈ ಹಾಕಿ, ರುಚಿ ನೋಡಿ ಖರೀದಿಸುವುದು ಸಹಜ. ಇಂಥ ಸಂದರ್ಭದಲ್ಲಿ ಗ್ರಾಹಕರಿಗೆ ಜೋರು ಮಾಡಲಾಗದೇ ಸುಮ್ಮನಿರುತ್ತೇನೆ ಎಂದು ಫಾರೂಕು ಹೇಳುತ್ತಾರೆ.
ನೇರಳೆ ದುಬಾರಿಯಾದರೂ, ಚಿಂತೆ ಪಡದೇ ಔಷಧೀಯ ಗುಣಗಳ್ಳುಳ್ಳ ಹಾಗೂ ವರ್ಷದಲ್ಲಿ ಒಮ್ಮೆ ಮಾತ್ರ ಸಿಗುವ ನೇರಳೆ ತಿನ್ನುವುದು ಆರೋಗಕ್ಕೆ ಒಳ್ಳೆಯದು ಎಂಬ ಅರಿವು ಗ್ರಾಹಕರಿಗೂ ಇರುವುದು. ಒಟ್ಟಿನಲ್ಲಿ ಸೀಸನ್ ಫ್ರೂಟ್ ನೇರಳೆ ರುಚಿ ಯಾರೂ ತಪ್ಪಿಸಿಕೊಳ್ಳೋದಿಲ್ಲ ಅನ್ನೋದು ವಿಶೇಷ.- - -
ಕೋಟ್ಹಾವೇರಿ ಜಿಲ್ಲೆಯ ಗುತ್ತಲ, ಹಾವನೂರು, ಗ್ರಾಮಗಳ ನೇರಳೆ ಹಣ್ಣುಗಳ ತೋಟಗಳಿಂದ ಹಣ್ಣು ಖರೀದಿಸಿ ತಂದು ಮಾರುತ್ತೇವೆ. ಮಳೆ ಹೆಚ್ಚಾಗಿ ಇಲ್ಲದ ಕಾರಣ ನೇರಳೆ ಹಣ್ಣುಗಳ ಇಳುವರಿ ತೀರಾ ಕಡಿಮೆಯಾಗಿದೆ, ಬೆಲೆ ಹೆಚ್ಚಾಗಿದೆ. ಇದರಿಂದ ಗ್ರಾಹಕರು ನೇರಳೆ ಕೊಳ್ಳಲು ಕೊಂಚ ಹಿಂದೇಟು ಹಾಕುತ್ತಿದ್ದಾರೆ ಎನಿಸಿದೆ
- ಫಾರೂಕ್, ನೇರಳೆ ಹಣ್ಣು ವ್ಯಾಪಾರಿ- - -
-ಫೋಟೋ:ಹೊನ್ನಾಳಿ ಪಟ್ಟಣದಲ್ಲಿ ನೇರಳೆ ಹಣ್ಣು ಖರೀದಿಸಲು ಮುಗಿಬಿದ್ದಿರುವ ಗ್ರಾಹಕರು.