ವೀರಶೈವ ಲಿಂಗಾಯತ ಒಳ ಪಂಗಡಗಳು ಸಂಘಟಿತವಾಗಲಿ: ಸಂಸದ ಜಗದೀಶ ಶೆಟ್ಟರ

| Published : Jun 17 2024, 01:34 AM IST

ವೀರಶೈವ ಲಿಂಗಾಯತ ಒಳ ಪಂಗಡಗಳು ಸಂಘಟಿತವಾಗಲಿ: ಸಂಸದ ಜಗದೀಶ ಶೆಟ್ಟರ
Share this Article
  • FB
  • TW
  • Linkdin
  • Email

ಸಾರಾಂಶ

ಬಣಜಿಗ ಸಮಾಜ ಸಂಘಟಿತವಾಗಿ ಸಮಾಜದ ಬಡ ಕುಟುಂಬಕ್ಕೆ ಸಹಾಯ, ಸಹಕಾರ ಮಾಡುವ ಜೊತೆಗೆ ಮತ್ತೊಂದು ಸಮಾಜಕ್ಕೆ ಪೂರಕವಾಗಿ ಜೀವನ ನಡೆಸುತ್ತದೆ ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.

ಕನ್ನಡಪ್ರಭ ವಾರ್ತೆ ನರಗುಂದ

ಬಣಜಿಗ ಸಮಾಜ ಸಂಘಟಿತವಾಗಿ ಸಮಾಜದ ಬಡ ಕುಟುಂಬಕ್ಕೆ ಸಹಾಯ, ಸಹಕಾರ ಮಾಡುವ ಜೊತೆಗೆ ಮತ್ತೊಂದು ಸಮಾಜಕ್ಕೆ ಪೂರಕವಾಗಿ ಜೀವನ ನಡೆಸುತ್ತದೆ. ಹಾಗೆ ವೀರಶೈವ ಲಿಂಗಾಯತ ಒಳ ಪಂಗಡಗಳು ಒಂದಾಗಿ ಜಗಜ್ಯೋತಿ ಬಸವಣ್ಣನವರ ತತ್ವಗಳನ್ನು ಅಳವಡಿಸಿಕೊಂಡು ಜಾತಿ-ಭೇದ ಮಾಡದೆ ಬಡವ, ಶ್ರೀಮಂತ ಎನ್ನದೆ ಸಂಘಟಿತರಾಗಬೇಕು ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.

ತಾಲೂಕಿನ ಶಿರೋಳ ಗ್ರಾಮದ ಶ್ರೀ ತೋಂಟದಾರ್ಯ ಮಠದಲ್ಲಿ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ, ನರಗುಂದ ತಾಲೂಕು ಘಟಕದ ಪದಗ್ರಹಣ ಹಾಗೂ ತಾಲೂಕು ಮಹಿಳಾ ಘಟಕ, ಗ್ರಾಮ ಘಟಕಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಮದುರ್ಗ ಶಾಸಕ ಅಶೋಕ ಪಟ್ಟಣ ಮಾತನಾಡಿ, ಬಸವಣ್ಣನವರು 12ನೇ ಶತಮಾನದಲ್ಲಿ ಅನುಭವ ಮಂಟಪವನ್ನು ಸ್ಥಾಪನೆ ಮಾಡಿ ಕಲ್ಯಾಣ ರಾಜ್ಯದ ಅಭಿವೃದ್ಧಿಗೆ ಸಮಾಜದಲ್ಲಿ ಜಾತಿ, ಧರ್ಮ, ಸಮಾಜದ ಸುಧಾರಣೆಗೆ ಬಹು ಮುಖ್ಯಪಾತ್ರ ವಹಿಸಿದ್ದಾರೆ ಎಂದರು.

ನರಗುಂದ ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಬಣಜಿಗರು ಸ್ವಧರ್ಮ ನಿಷ್ಠೆ ಪರಧರ್ಮ ಸಹಿಷ್ಣುಗಳು ಅವರು ತಮ್ಮ ವ್ಯಾಪಾರದ ಜೊತೆಗೆ ಮತ್ತೂಂದು ಸಮಾಜದ ಕುಟುಂಬ, ವ್ಯಕ್ತಿಗಳಿಗೆ ಸಹಾಯ ಸಹಕಾರ ನೀಡುವರು ಎಂದು ಹೇಳಿದರು.

ಮಾಜಿ ಶಾಸಕ ಬಿ.ಆರ್. ಯಾವಗಲ್‌ ಮಾತನಾಡಿ, ಜಗತ್ತಿಗೆ ಕಾಯಕ ತತ್ವದ ಮಹತ್ವವನ್ನು ಬಸವಣ್ಣನವರು ತಮ್ಮ ವಚನಗಳ ಮೂಲಕ 12ನೇ ಶತಮಾನದಲ್ಲಿ ನೀಡಿದರು ಎಂದರು.

ಈ ವೇಳೆ ದಿವ್ಯ ಸಾನಿಧ್ಯ ವಹಿಸಿದ್ದ ಗದಗ-ಡಂಬಳ ತೋಂಟದಾರ್ಯ ಮಠದ ಡಾ. ಸಿದ್ಧರಾಮ ಸ್ವಾಮೀಜಿ, ಶಿರೋಳ-ಭೈರನಹಟ್ಟಿ ತೋಂಟದಾರ್ಯ ಮಠದ ಶಾಂತಲಿಂಗ ಸ್ವಾಮೀಜಿ ಆರ್ಶಿವಚನ ನೀಡಿದರು.

ಧಾರವಾಡ ಉಚ್ಚ ನ್ಯಾಯಾಲಯದ ನ್ಯಾಯವಾದಿ ಕೆ.ಎಸ್. ಕೋರಿಶೆಟ್ಟರ ಉಪನ್ಯಾಸ ನೀಡಿದರು. ವಿ.ಕೆ. ಮರಿಗುದ್ದಿ ಮಾತನಾಡಿದರು. 90 ವರ್ಷ ಮೇಲಿನ 5 ಹಿರಿಯ ಜೀವಿಗಳನ್ನು, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ 30 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ತಾಲೂಕ, ಗ್ರಾಮ ಘಟಕಗಳ ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋದಿಸಲಾಯಿತು. ಶಿರೋಳ ಹಿರೇಮಠದ ವೀರಯ್ಯ ಹಿರೇಮಠ, ತಾಲೂಕಿನ ಬಣಜಿಗ ಸಮಾಜದ ಅಧ್ಯಕ್ಷ ಶಿವಾನಂದ ಶೇಬಣ್ಣವರ, ಮಹಿಳಾ ಅಧ್ಯಕ್ಷೆ ಸುಕನ್ಯಾ ಕಾಲಚಟ್ಟಿ, ಜಿಲ್ಲಾ ಬಣಜಿಗ ಸಮಾಜದ ಅಧ್ಯಕ್ಷ ಈಶಣ್ಣ ಮುನವಳ್ಳಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರುಡಗಿ, ವಿಶ್ರಾಂತ ಜಿಲ್ಲಾ ಸತ್ರ ನ್ಯಾಯಾಧೀಶ ವಿ.ಎಚ್. ಸಾಂಬ್ರಾಣಿ, ರುದ್ರಪ್ಪ ಪಟ್ಟಣಶೆಟ್ಟಿ ಸೇರಿದಂತೆ ಪದಾಧಿಕಾರಿಗಳು ಇದ್ದರು.

ಹುಬಳ್ಳಿಯ ವಿಶಾಲಾಕ್ಷೀ ಅಂಗಡಿ ಪ್ರಾರ್ಥಿಸಿದರು. ಬಿ.ಆರ್. ಪಟ್ಟಣಶೆಟ್ಟಿ, ಶಿದ್ದು ಅಂಗಡಿ, ಉಮೇಶ ಮರಿಗುದ್ದಿ, ಪ್ರಶಾಂತ ಶೆಲ್ಲಿಕೆರಿ ಕಾರ್ಯಕ್ರಮ ನಿರ್ವಹಿಸಿದರು.

ಸಂಸದ ಜಗದೀಶ ಶೆಟ್ಟರಗೆ ಲಕ್ಷ್ಮೇಶ್ವರದಲ್ಲಿ ಸನ್ಮಾನ

ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರಬೆಳಗಾವಿ ಕ್ಷೇತ್ರದ ಸಂಸದ ಜಗದೀಶ ಶೆಟ್ಟರ ಅವರು ಭಾನುವಾರ ಗದಗ ಕಡೆಗೆ ತೆರಳುವ ವೇಳೆಯಲ್ಲಿ ಲಕ್ಷ್ಮೇಶ್ವರಕ್ಕೆ ಆಗಮಿಸಿದಾಗ ಅವರನ್ನು ಮಹಾಕವಿ ಪಂಪ ವರ್ತುಲದ ಬಳಿ ಬಿಜೆಪಿ ಕಾರ್ಯಕರ್ತರು ಹೂಗುಚ್ಛ ನೀಡುವುದರ ಮೂಲಕ ಬರಮಾಡಿಕೊಂಡರು. ನಂತರ ಬಾಲಾಜಿ ಆಸ್ಪತ್ರೆಯಲ್ಲಿ ಜಗದೀಶ ಶೆಟ್ಟರ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಡಾ. ಚಂದ್ರು ಲಮಾಣಿ, ಅಶ್ವಿನಿ ಅಂಕಲಕೋಟಿ, ದುಂಡೇಶ ಕೊಟಗಿ, ಉಳವೇಶಗೌಡ ಪಾಟೀಲ, ಗಂಗಾಧರ ಮೆಣಸಿನಕಾಯಿ, ಗಿರೀಶ ಚೌರೆಡ್ಡಿ, ಶಿವಯೋಗಿ ಅಂಕಲಕೋಟಿ, ನವೀನ ಬೆಳ್ಳಟ್ಟಿ ಸೇರಿದಂತೆ ಮತ್ತಿತರರು ಇದ್ದರು.