ಜಾತ್ರಾ ಮಹೋತ್ಸವ: ನೋಟಿಸ್‌ ಜಾರಿ

| Published : May 04 2024, 12:35 AM IST

ಸಾರಾಂಶ

ಚಿಕ್ಕಮಗಳೂರು, ಬೆನ್ನಿಗೆ ಕಬ್ಬಿಣದ ಕೊಕ್ಕೆ ಚುಚ್ಚಿಕೊಂಡು ಟ್ರ್ಯಾಕ್ಟರ್‌ ಎಳೆದ ಸಂಬಂಧ ಶ್ರೀ ಕರುಮಾರಿಯಮ್ಮ ದೇವಸ್ಥಾನ ಸಮಿತಿಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ನೋಟಿಸ್‌ ಜಾರಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಬೆನ್ನಿಗೆ ಕಬ್ಬಿಣದ ಕೊಕ್ಕೆ ಚುಚ್ಚಿಕೊಂಡು ಟ್ರ್ಯಾಕ್ಟರ್‌ ಎಳೆದ ಸಂಬಂಧ ಶ್ರೀ ಕರುಮಾರಿಯಮ್ಮ ದೇವಸ್ಥಾನ ಸಮಿತಿಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ನೋಟಿಸ್‌ ಜಾರಿ ಮಾಡಿದ್ದಾರೆ.

ನಗರದಲ್ಲಿ ಮೇ 1 ರಿಂದ ಐದು ದಿನಗಳ ಕಾಲ ನಡೆಸಲಾಗುತ್ತಿರುವ ಶ್ರೀ ಕರುಮಾರಿಯಮ್ಮ ಜಾತ್ರಾ ಮಹೋತ್ಸವದ ಮೂರನೇ ದಿನವಾದ ಶುಕ್ರವಾರದಂದು ಕೆರೆ ಕೊಡಮ್ಮ ದೇವಸ್ಥಾನದಿಂದ ಕರಗ ಮೆರವಣಿಗೆ ಹೊರಟಿತು. ಕಳೆದ ವರ್ಷ ಬೇಡಿಕೊಂಡಿದ್ದ ಭಕ್ತರು ಶುಕ್ರವಾರ ತಮ್ಮ ಬೆನ್ನಿಗೆ ಕಬ್ಬಿಣದ ಕೊಕ್ಕೆಯನ್ನು ಚುಚ್ಚಿಕೊಂಡು ಶ್ರೀ ಕರುಮಾರಿಯಮ್ಮ ದೇವಾಲಯದವರೆಗೆ ಟ್ರ್ಯಾಕ್ಟರ್‌ ಎಳೆದು ತಮ್ಮ ಭಕ್ತಿಯನ್ನು ಸಮರ್ಪಿಸಿದರು.

ಈ ಸಂಬಂಧ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಸ್ಥಳಕ್ಕೆ ತಹಸೀಲ್ದಾರ್‌ ಡಾ. ಸುಮಂತ್‌ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಆಗಮಿಸಿ ಹಿಂಸೆಯ ಮೂಲಕ ಹಬ್ಬ ಆಚರಣೆ ಸರಿಯಲ್ಲ, ಇದೊಂದು ಮೌಢ್ಯತೆ ಎಂದು ಸಂಘಟಕರಿಗೆ ಮನವರಿಕೆ ಮಾಡಿದರು. ಆಗ ಸ್ಥಳದಲ್ಲಿಯೇ ಇದ್ದ ಭಕ್ತರು, ಅನಾದಿ ಕಾಲದಿಂದಲೂ ಈ ಆಚರಣೆ ನಡೆಯುತ್ತಿದೆ. ಕೆಲವು ಆಚರಣೆಗಳನ್ನು ಹಂತ ಹಂತವಾಗಿ ಕೈಬಿಡಲಾಗಿದೆ. ಮುಂದಿನ ದಿನಗಳಲ್ಲಿ ಈ ಆಚರಣೆಯನ್ನು ಕೂಡ ಕೈಬಿಡುವ ಸಾಧ್ಯತೆ ಇದೆ ಎಂದರು.

ಆದರೂ ಸಹ ದೇವಾಲಯದ ಸಮಿತಿ ಗೌರವಾಧ್ಯಕ್ಷ ಜಿ. ರಘು ಹಾಗೂ ಕಾರ್ಯದರ್ಶಿ ಆರ್. ಮಂಜು ಅವರಿಗೆ ನೋಟಿಸ್‌ ಜಾರಿ ಮಾಡಿ 24 ಗಂಟೆಯೊಳಗೆ ಉತ್ತರ ನೀಡಬೇಕೆಂದು ಹೇಳಿ ಅಧಿಕಾರಿಗಳು ತೆರಳಿದರು. ಕೂಡಲೇ ಸಮಾಜ ಕಲ್ಯಾಣ ಇಲಾಖೆಯ ಕಚೇರಿಗೆ ಹೋಗಿದ್ದಾಗ ಅಧಿಕಾರಿಗಳು ಇರಲಿಲ್ಲ ಎಂದು ಜಿ. ರಘು ತಿಳಿಸಿದ್ದಾರೆ.

ಈ ಘಟನೆ ನಂತರ ಪೂರ್ವ ನಿಗಧಿಯಂತೆ ಶುಕ್ರವಾರ ಸಂಜೆ ದೇವಾಲಯದ ಆವರಣದಲ್ಲಿ ಸಿಡಿ ಮಹೋತ್ಸವ ನಡೆಯಿತು. 3 ಕೆಸಿಕೆಎಂ 5ಶ್ರೀ ಕರುಮಾರಿಯಮ್ಮ ಜಾತ್ರಾ ಮಹೋತ್ಸವದಲ್ಲಿ ಶುಕ್ರವಾರ ಭಕ್ತರು ಬೆನ್ನಿಗೆ ಕಬ್ಬಿಣದ ಕೊಕ್ಕೆಯನ್ನು ಚುಚ್ಚಿಕೊಂಡು ಟ್ರ್ಯಾಕ್ಟರ್‌ ಎಳೆಯುವ ಮೂಲಕ ಹರಕೆಯನ್ನು ತೀರಿಸಿದರು.