ಇಂದಿನಿಂದ ಜಾತ್ರಾ ಮಹೋತ್ಸವ ಲೋಕಾಪುರ ಶ್ರೀ ದುರ್ಗಾದೇವಿ

| Published : Jun 14 2024, 01:00 AM IST

ಸಾರಾಂಶ

ಮುಧೋಳ ತಾಲೂಕಿನ ಸುಕ್ಷೇತ್ರ ಲೋಕಾಪುರ ಗ್ರಾಮದೇವಿ ಶ್ರೀ ದುರ್ಗಾದೇವಿ ಜಾತ್ರೆ ಜೂ.14ರಿಂದ 18ರವರೆಗೆ ನಡೆಯಲಿದೆ.

ಶ್ರೀನಿವಾಸ ಬಬಲಾದಿ

ಕನ್ನಡಪ್ರಭ ವಾರ್ತೆ ಲೋಕಾಪುರ

ಮುಧೋಳ ತಾಲೂಕಿನ ಸುಕ್ಷೇತ್ರ ಲೋಕಾಪುರ ಗ್ರಾಮ ಸೇರಿದಂತೆ ಅರಳಿಕಟ್ಟಿ, ಲಕ್ಷಾನಟ್ಟಿ, ಜಾಲಿಕಟ್ಟಿ, ಚೌಡಾಪುರ, ವೆಂಕಟಾಪುರ, ನಾಗಣಾಪುರ ಹೀಗೆ ಏಳು ಗ್ರಾಮಗಳ ಭಕ್ತರಿಗೆ ಶ್ರೀ ದುರ್ಗಾದೇವಿ ಆರಾಧ್ಯ ದೇವತೆಯೆಂದು ಪ್ರಸಿದ್ಧಿ ಪಡೆದಿದ್ದು, ಏಳು ವರ್ಷಕ್ಕೊಮ್ಮೆ ಜರುಗುವ ದೇವಿಯ ಜಾತ್ರೆ ಜೂ.14ರಿಂದ 18ರವರೆಗೆ ನಡೆಯಲಿದೆ.

ದೇವಿ ಉದ್ಭವ ಮೂರ್ತಿ: ಶತಮಾನಗಳ ಹಿಂದೆ ಲೋಕಾಪುರ ಗ್ರಾಮದ ನಾಗಣಾಪುರ ಹದ್ದಿನಲ್ಲಿರುವ ಕಲ್ಲು, ಮುಳ್ಳಿನ ಪೊದೆಯಲ್ಲಿ ಬೃಹತ್ ಆಕಾರದ ಕಲ್ಲಿನ ಮೂರ್ತಿಯೊಂದು ಮೂಡಿತ್ತು. ಆ ಕಲ್ಲಿನ ಮೂರ್ತಿಗೆ ದಿನಾಲು ಒಂದು ಹಸು ಹಾಲು ಉಣಿಸುತ್ತಿತ್ತು. ಅದನ್ನು ನೋಡಿದ ದನ ಕಾಯುವ ಹುಡುಗರು ಲೋಕಾಪುರದ ದೇಸಾಯಿಯವರಿಗೆ ತಿಳಿಸಿದರಂತೆ. ಅದನ್ನು ಪ್ರತ್ಯಕ್ಷವಾಗಿ ಕಂಡ ದೇಸಾಯಿ ಮನೆತನ ಹಾಗೂ ಊರ ಗ್ರಾಮಸ್ಥರು ಸೇರಿ ಕಲ್ಲು-ಮುಳ್ಳಿನ ಪೊದೆ ಸ್ವಚ್ಛಗೊಳಿಸಿ ಆ ಬೃಹತ್ ಗಾತ್ರದ ಕಲ್ಲಿನ ಮೂರ್ತಿಗೆ ಪೂಜೆ ಸಲ್ಲಿಸಲು ಆರಂಭಿಸಿದರು ಎಂಬ ಐತಿಹ್ಯವಿದೆ.

ದೇವಿಗೆ ಪ್ರಥಮ ಪೂಜೆ: ಲೋಕಾಪುರ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ಪ್ರತಿ ಮನೆಗಳಲ್ಲಿ ಯಾವುದೇ ಸಭೆ-ಸಮಾರಂಭ ಜರುಗುವ ಮುನ್ನ ದೇವತೆಗೆ ಪ್ರಥಮ ಪೂಜೆ ಸಲ್ಲಿಸಲಾಗುತ್ತದೆ. ಮಗು ಜನಿಸಲಿ, ಮದುವೆ, ಜಮೀನು ಖರೀದಿ, ಬಿತ್ತನೆ, ಹೊಸ ಮನೆಗಳ ಶಾಂತಿ ಇತರ ಎಲ್ಲಾ ಸಮಾರಂಭಗಳಿಗೂ ಮುಂಚೆ ದೇವಿಯ ಆರಾಧನೆ ಮಾಡುವುದು ಸಂಪ್ರದಾಯವಾಗಿದೆ.

ಮರಗಮ್ಮಾದೇವಿ ಸ್ಥಾಪನೆ: ಶ್ರೀ ದುರ್ಗಾದೇವಿ ಗರ್ಭ ಗುಡಿಯಲ್ಲಿ ಉದ್ಭವ ದುರ್ಗಾದೇವಿ ಮೂರ್ತಿಯೊಂದಿಗೆ ಕೆತ್ತನೆಯ ಮರಗಮ್ಮಾ ದೇವಿ ಮೂರ್ತಿಯನ್ನೂ ಪ್ರತಿಷ್ಠಾಪಿಸಿರುವುದು ಇಲ್ಲಿನ ವಿಶೇಷತೆ. ಮಂಗಳವಾರ ಮತ್ತು ಶುಕ್ರವಾರ ಉಪವಾಸ ವ್ರತ ಕೈಗೊಂಡು ದೇವಸ್ಥಾನಕ್ಕೆ ದೇವಿಗೆ ಬಂದು ನಮಿಸಿದರೆ ಎಂತಹುದೇ ರೋಗಗಳು ಸಂಪೂರ್ಣ ಗುಣವಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ. ವರ್ಷವಿಡೀ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಯುವಕ-ಯುವತಿಯರು ಪಾದಯಾತ್ರೆ ಮೂಲಕ ದೇವಸ್ಥಾನಕ್ಕೆ ಬಂದು ಸೇವೆ ಸಲ್ಲಿಸುತ್ತಾರೆ,

ಬೇರೆ ರಾಜ್ಯಗಳ ಭಕ್ತರ ಆಗಮನ: ದುರ್ಗಾದೇವಿ ಜಾತ್ರೆ ಈ ಭಾಗದ ಬಹುದೊಡ್ಡ ಜಾತ್ರೆಯಾಗಿದೆ. ರಾಜ್ಯದ ಮೂಲೆ-ಮೂಲೆಗಳಿಂದ ಹಾಗೂ ಗೋವಾ, ಮಹಾರಾಷ್ಟ್ರ ರಾಜ್ಯಗಳಿಂದಲೂ ಭಕ್ತರ ಮಹಾಪೂರವೇ ಹರಿದು ಬರುತ್ತದೆ.

ಬಂಢಾರ ಜಾತ್ರೆ: ಗ್ರಾಮದಲ್ಲಿ ನಡೆಯುವ ದುರ್ಗಾದೇವಿಯ ಜಾತ್ರಾ ಮಹೋತ್ಸವದಲ್ಲಿ ಪಲ್ಲಕ್ಕಿ ಉತ್ಸವ ಹಾಗೂ ಬಂಢಾರ ಓಕುಳಿಯ ಸಂಭ್ರಮ ಐದು ದಿನಗಳವರಗೆ ನಡೆಯಲಿದೆ. ಗ್ರಾಮದ ತುಂಬೆಲ್ಲ ಭಕ್ತರು ಭಂಡಾರ ಪರಸ್ಪರ ಭಂಡಾರ ಎರಚಿ ಸಂಭ್ರಮಿಸುತ್ತಾರೆ.ಸ್ಪರ್ಧೆಗಳು: ಜೂ.೧೬ರಂದು ಬೆಳಗ್ಗೆ ೯ಕ್ಕೆ ಘಟ್ಟದ ಚಕ್ಕಡಿ ಸ್ಪರ್ಧೆ, ಒಂದು ಕುದುರೆ ಒಂದು ಎತ್ತು ಸ್ಪರ್ಧೆ, ೧೭ರಂದು ಟಗರಿನ ಕಾಳಗ, ಜೂ.೧೮ರಂದು ನಿಮಿಷದ ಚಕ್ಕಡಿ ಸ್ಪರ್ಧೆ ನಡೆಯಲಿದ್ದು, ಎಲ್ಲ ಬಹುಮಾನಗಳನ್ನು ಕಮಿಟಿ ವತಿಯಿಂದ ನೀಡಲಾಗುವುದು.

ಅದೇ ದಿನ ನಾಗಣಾಪುರ ಗ್ರಾಮದವರಿಂದ ಉಡಿ ತುಂಬವ ಕಾರ್ಯಕ್ರಮ, ಸಂಜೆ ೭ ಕ್ಕೆ ಮದ್ದು ಸುಡುವ ಕಾರ್ಯಕ್ರಮ, ರಾತ್ರಿ ೧೦.೩೦ಕ್ಕೆ ವಿವಿಧ ಕಲಾ ಮೇಳದಿಂದ ಚೌಡಕಿ ಪದಗಳು ಜರುಗುವುವು.

ಜಾತ್ರಾ ಕಾರ್ಯಕ್ರಮಗಳ ವಿವರ :

ಜೂ.೧೪ರಂದು ನೂತನ ರಥಕ್ಕೆ ರಥಾಂಗ ಹೋಮ ಹಾಗೂ ರಥ ಸಂಸ್ಕಾರದೊಂದಿಗೆ ೧೧.೪೫ಕ್ಕೆ ವಾಡೇದ ಲಕ್ಷ್ಮೀದೇವಿ ದೇವಸ್ಥಾನದಿಂದ ಬಜಾರ್‌ ಮಾರ್ಗವಾಗಿ ವಿವಿಧ ಜಾನಪದ ವಾದ್ಯಮೇಳ, ಕೋಲಾಟ ಮುಂತಾದ ವಾದ್ಯತಂಡಗಳೊಂದಿಗೆ ರಥೋತ್ಸವ ನಡೆಯಲಿದೆ. ೧೫ರಂದು ಬೆಳಗ್ಗೆ ದುರ್ಗಾದೇವಿ ದೇವಸ್ಥಾನದಿಂದ ಮೇನ್ ಬಜಾರ್‌ ಮಾರ್ಗವಾಗಿ ಲಕ್ಷ್ಮೀದೇವಿ ದೇಗುಲಕ್ಕೆ ಮರಳಲಿದೆ. ೧೬ರಂದು ಸಂಗೀತ ರಸಮಂಜರಿ ಕಾರ್ಯಕ್ರಮ, ೧೭ರಂದು ರಾತ್ರಿ ೯ಕ್ಕೆ ನಾಟಕ ಪ್ರದರ್ಶನ. ೧೮ರಂದು ಸಂಜೆ ಪಲ್ಲಕ್ಕಿ ಉತ್ಸವ ಹಾಗೂ ಭಂಡಾರ ಓಕುಳಿ ಜರುಗುವುದು.