ಜಾತ್ರೆ ಜಾತಿ, ಮತ ಮೀರಿದ ಸಂಸ್ಕೃತಿ ಪ್ರತೀಕ: ಸದಾಶಿವ ಸ್ವಾಮೀಜಿ

| Published : Feb 12 2024, 01:32 AM IST

ಸಾರಾಂಶ

ಜಾನುವಾರು ಜಾತ್ರೆಯಲ್ಲಿ ಜಾನುವಾರುಗಳು ಇಲ್ಲದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಗ್ರಾಮದ ರೈತರು ಜಾತ್ರೆ ಕೊನೆ ದಿನ ಬೆಳಗ್ಗೆಯಿಂದ ಸಂಜೆ ವರೆಗೆ ಸ್ವಯಂ ಪ್ರೇರಿತರಾಗಿ ತಾವು ಮನೆಯಲ್ಲಿ ಸಾಕಾಣಿಕೆ ಮಾಡಿದ ಎಂಟು ಜೋಡಿ ಎತ್ತುಗಳನ್ನು ತಂದು ಸಾಂಕೇತಿಕವಾಗಿ ಜಾತ್ರಾ ಮೈದಾನದಲ್ಲಿ ಕಟ್ಟಿ ಹಾಕಿದರು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಜಾತ್ರೆ ಗಳು ಜಾತಿ ಮತ ಮೀರಿದ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ಅಭಿಪ್ರಾಯ ಪಟ್ಟರು.

ಅವರು ಸಮೀಪದ ಗುಡುಗಳಲೆ ಜಯದೇವ ಜಾನುವಾರ ಜಾತ್ರೆಯ ಮುಕ್ತಾಯ ಸಮಾರೋಪ ಸಮಾರಂಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಾತ್ರೆಗಳು ಕೃಷಿಕರ ಜೀವನದಲ್ಲಿ ನಡೆಯುವಂತ ಸಾಂಸ್ಕೃತಿಕ ಮತ್ತು ಜಾನಪದ ಸೊಗಡಿನ ಉತ್ಸವಗಳಾಗಿರುತ್ತದೆ. ಇದರ ಜೊತೆಯಲ್ಲಿ ಜಾತ್ರೋತ್ಸವಗಳು ಕೃಷಿಕರಿಗೆ ಮನರಂಜನೆ ನೀಡುವ ವೇದಿಕೆಯಾಗುತ್ತದೆ ಎಂದರು.

ಗುಡುಗಳಲೆ ಜಾನುವರುಗಳ ಜಾತ್ರೆಗೆ ಹಲವು ವರ್ಷಗಳ ಇತಿಹಾಸ ಇದ್ದು ಬದಲಾದ ಕಾಲಘಟ್ಟದಲ್ಲಿ ರೈತರು ವ್ಯವಸಾಯಕ್ಕೆ ಯಂತ್ರೋಪಕರಣ ಬಳಕೆ ಮಾಡುತ್ತಿರುವುದರಿಂದ ಜಾನುವಾರು ಸಾಕಾಣಿಕೆ ಕಡಿಮೆಯಾಗಿದ್ದು ಜಾತ್ರೆಯಲ್ಲಿ ಜಾನುವಾರುಗಳಿಲ್ಲದಿದ್ದರೂ ಜಾತ್ರಾ ಸಮಿತಿಯವರು ಎಂದಿನಂತೆ ಜಾತ್ರೆಯನ್ನು ನಡೆಸಿಕೊಂಡು ಬರುತ್ತಿದ್ದು ಜನರಿಗೆ ಮನರಂಜನೆ ನೀಡುವ ಸಲುವಾಗಿ ಸಾಂಸ್ಕೃತಿಕ, ಕ್ರೀಡಾ ಸ್ಪರ್ಧೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರನ್ನು ರಂಜಿಸಲು ಪ್ರಯತ್ನ ಪಡುತ್ತಿರುವುದು ಶ್ಲಾಘನೀಯಕರವಾಗಿದೆ ಎಂದರು. ಇಂದು ನಾವೆಲ್ಲಾರು ಆಧುನಿಕವಾಗಿ ವಿಜ್ಞಾನ ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸುತ್ತಿದ್ದರೂ ನಮ್ಮ ದೇಶಿಯ ಸಂಸ್ಕೃತಿಯನ್ನು ನಶಿಸಲು ಬಿಡಬಾರದು. ಈ ನಿಟ್ಟಿನಲ್ಲಿ ರೈತರು ದೇಶಿಯ ಹಸು ಎತ್ತುಗಳನ್ನು ಸಾಕಾಣಿಕೆ ಮಾಡುವ ಮೂಲಕ ಜಾತ್ರೆಯನ್ನು ನಶಿಸಿ ಹೋಗದಂತೆ ನೋಡಿಕೊಳ್ಳುವಂತೆ ಸಲಹೆ ನೀಡಿದರು.ಕೊಡ್ಲಿಪೇಟೆ ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿ, ಆಧುನಿಕತೆ ಹಳ್ಳಿಯನ್ನು ಆವರಿಸಿದ್ದು ಗ್ರಾಮೀಣ ಸೊಗಡು ಸಂಸ್ಕೃತಿ ಆಧುನಿಕತೆಗೆ ಬದಲಾಗುತ್ತಿದೆ. ಈ ನಿಟ್ಟಿನಲ್ಲಿ ಜಾನುವಾರುಗಳ ಸಾಕಾಣಿಕೆ ಕಡಿಮೆಯಾಗುತ್ತಿದೆ ಎಂದರು. ಗುಡುಗಳಲೆ ಜಾತ್ರಾ ಮೈದಾನವನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಇದರ ಜೊತೆಯಲ್ಲಿ ಜಾತ್ರಾ ಮೈದಾನದಲ್ಲಿ ಮರಗಿಡಗಳನ್ನು ಬೆಳೆಸುವಂತೆ ಜಾತ್ರಾ ಸಮಿತಿಯವರಿಗೆ ಸಲಹೆ ನೀಡಿದರು.ಜಿ.ಪಂ.ಮಾಜಿ ಸದಸ್ಯ ಮತ್ತು ಕೃಷಿಕ ಡಿ.ಬಿ.ಧರ್ಮಪ್ಪ ಮಾತನಾಡಿ, ರೈತರಿಗೆ ಕೃಷಿ ಮೂಲ ಕಸಬು ಆಗಿದ್ದು ತಾವು ಬೆಳೆದ ಬೆಳೆಯಿಂದ ನಷ್ಟ ಆಗುವಂತ ಸಂದರ್ಭದಲ್ಲಿ ಹತಾಶರಾಗದೆ ವ್ಯವಸಾಯವನ್ನು ಮುಂದುವರೆಸಿಕೊಂಡು ಹೋಗಬೇಕು. ಇದರ ಜೊತೆಯಲ್ಲಿ ಗ್ರಾಮೀಣ ಸೊಗಡಿನ ಸಂಸ್ಕೃತಿ ಸಂಪ್ರದಾಯವನ್ನು ಬಿಡಬಾರದು ಎಂದರು. ಸರ್ಕಾರ ಐದು ಗ್ಯಾರೆಂಟಿಗಳನ್ನು ಜನರಿಗೆ ನೀಡುವುದರಿಂದ ರೈತರಿಗೆ ಯಾವುದೆ ಪ್ರಯೋಜನವಾಗುತ್ತಿಲ್ಲ ಇದರ ಬದಲಿಗೆ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಯೋಜನೆ ರೂಪಿಸುವುದರಿಂದ ರೈತರು ಸಂಕಷ್ಟದಿಂದ ಪಾರಾಗುತ್ತಾರೆ ಎಂದರು.ಜಾತ್ರಾ ಸಮಿತಿ ಅಧ್ಯಕ್ಷ ಎಚ್.ಎಂ.ವಿನಯ್ ಅಧ್ಯಕ್ಷತೆ ವಹಿದ್ದರು. ವೇದಿಕೆಯಲ್ಲಿ ಕಲ್ಲಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಶಿಡುಗಳಲೆ ಮಠದ ಶ್ರೀ ಇಮ್ಮಡಿ ಶಿವಲಿಂಗ ಸ್ವಾಮೀಜಿ, ತಾ.ಪಂ.ಮಾಜಿ ಸದಸ್ಯ ಕುಶಾಲಪ್ಪ, ಹಂಡ್ಲಿ ಗ್ರಾ.ಪಂ.ಅಧ್ಯಕ್ಷೆ ಸುಧಾ, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಹರೀಶ್, ದುಂಡಳ್ಳಿ ಗ್ರಾ.ಪಂ.ಸದಸ್ಯೆ ಪೂರ್ಣಿಮಾ ಕಿರಣ್, ಶನಿವಾರಸಂತೆ ಸುಪ್ರಜ ಗುರುಕುಲ ಶಾಲೆಯ ಪ್ರಾಂಶುಪಾಲೆ ಡಿ.ಸುಜಲಾದೇವಿ, ಹಂಡ್ಲಿ ಗ್ರಾ.ಪಂ. ಮಾಜಿ ಸದಸ್ಯ ಸೋಮಶೇಖರ್, ಸದಸ್ಯೆ ರೂಪ, ಹಂಡ್ಲಿ ಕೃಷಿ ಪತ್ತಿನ ಸಂಘದ ನಿರ್ದೇಶಕ ಲಕ್ಷ್ಮಯ್ಯ ಶೆಟ್ಟಿ, ಜಾತ್ರಾ ಸಮಿತಿ ಉಪಾಧ್ಯಕ್ಷ ವೀರೇಂದ್ರಕುಮಾರ್, ಕಾರ್ಯದರ್ಶಿ ಎನ್.ಎಂ. ಬಸವರಾಜು, ಉಪ ಕಾರ್ಯದರ್ಶಿ ಚೈತ್ರ ಸಮಿತಿ ಸದಸ್ಯರಾದ ಮಾದೇವಿ, ಸುವರ್ಣ ಇನ್ನು ಮುಂತಾದವರಿದ್ದರು. ಜಾನುವಾರು ಜಾತ್ರೆಯಲ್ಲಿ ಜಾನುವಾರುಗಳು ಇಲ್ಲದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಗ್ರಾಮದ ರೈತರು ಜಾತ್ರೆ ಕೊನೆ ದಿನ ಬೆಳಗ್ಗೆಯಿಂದ ಸಂಜೆ ವರೆಗೆ ಸ್ವಯಂ ಪ್ರೇರಿತರಾಗಿ ತಾವು ಮನೆಯಲ್ಲಿ ಸಾಕಾಣಿಕೆ ಮಾಡಿದ ಎಂಟು ಜೋಡಿ ಎತ್ತುಗಳನ್ನು ತಂದು ಸಾಂಕೇತಿಕವಾಗಿ ಜಾತ್ರಾ ಮೈದಾನದಲ್ಲಿ ಕಟ್ಟಿ ಹಾಕಿದರು. ಇದರಲ್ಲಿ ಒಂದು ಜೋಡಿ ಹಳ್ಳಿಕಾರ್ ತಳಿಯ ಎತ್ತುಗಳನ್ನು ಕಟ್ಟಿ ಹಾಕಿದ್ದರು. ಈ ಮೂಲಕ ರೈತರು ಜಾತ್ರೆಯ ಕೊನೆಯ ದಿನ ಜನರ ಗಮನ ಸೆಳೆದರು.