ಸಾರಾಂಶ
ಕನ್ನಡಪ್ರಭ ವಾರ್ತೆ ಮೇಲುಕೋಟೆ
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜಯಲಲಿತರ ಅವರ 77ನೇ ಹುಟ್ಟುಹಬ್ಬವನ್ನು ಕೊಯಮತ್ತೂರಿನ ಅಭಿಮಾನಿಯೊಬ್ಬರು ಸೋಮವಾರ ಅರ್ಥಪೂರ್ಣವಾಗಿ ಆಚರಿಸಿದರು.ಜಯ ಲಲಿತಾರ ಹುಟ್ಟುಹಬ್ಬದ ಅಂಗವಾಗಿ ತಮಿಳುನಾಡು ಕೊಯಮತ್ತೂರು ಜಿಲ್ಲೆಯ ಮೇದರ್ ಸಂಘದ ಅಧ್ಯಕ್ಷ ಅನ್ಬಳಗನ್ ಕ್ಷೇತ್ರದ ಅಧಿದೈವ ಚೆಲುವನಾರಾಯಣಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿದರು. ನಂತರ ಭಕ್ತರಿಗೆ ಪೊಂಗಲ್ ಪ್ರಸಾದ ವಿತರಿಸುವ ವ್ಯವಸ್ಥೆ ಮಾಡಿದ್ದರು.
ರಾಮಾನುಜಾಚಾರ್ಯರೇ ಭಿಕ್ಷೆ ಸ್ವೀಕರಿಸಿದ್ದ ಯತಿರಾಜ ದಾಸರ್ ಗುರುಪೀಠದಲ್ಲಿ ನೂರಾರು ಮಂದಿಗೆ ಎಂದಿನಂತೆ ಅನ್ನದಾನ ಏರ್ಪಡಿಸಿದ್ದರು. ನೂರಾರು ಭಕ್ತರು ಸಿಹಿಯೊಂದಿಗೆ ಭೋಜನ ಪ್ರಸಾದ ಸ್ವೀಕರಿಸಿದರು.ಮೇಧರ್ ಸಂಘದ ಅಧ್ಯಕ್ಷರಾದ ಅನ್ಬಳಗನ್ ಕಳೆದ 33 ವರ್ಷಗಳಿಂದ ಜಯಲಲಿತ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಜಯಲಲಿತಾ ಹುಟ್ಟೂರಾದ ಮೇಲುಕೋಟೆಯಲ್ಲೂ ಸಹ ಕಳೆದ ಏಳು ವರ್ಷಗಳಿಂದ ವಿಶೇಷ ಪೂಜೆ, ಯತಿರಾಜ ದಾಸರ್ ಗುರುಪೀಠದಲ್ಲಿ ಭೋಜನ ಪ್ರಸಾದ ವಿತರಣೆ ಮಾಡಿಕೊಂಡು ಬಂದಿದ್ದಾರೆ.
ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ತಮ್ಮ ಸ್ವಂತ ಖರ್ಚಿನಿಂದ ನಿರಂತರವಾಗಿ ತಮ್ಮ ಆರಾಧ್ಯ ದೇವತೆ ದಿ.ಜಯಲಲಿತ ಹುಟ್ಟುಹಬ್ಬ ಆಚರಿಸುತ್ತಾ ಬಂದಿರುವ ಅನ್ಬಳಗನ್ ಜಯಲಲಿತಾ ಮುಖ್ಯಮಂತ್ರಿ ಆಗಿದ್ದಾಗ ತಮ್ಮನ್ನು ಕರೆಸಿ ಅಭಿನಂದಿಸಿ ತೋರಿಸಿದ ಗೌರವದರದ ಪ್ರೀತಿಯನ್ನು ಇಂದಿಗೂ ನೆನೆಯುತ್ತಾರೆ.ಯಾವುದೇ ಆಡಂಬರವಿಲ್ಲದೆ ಚೆಲುವನಾರಾಯಣನ ಭಕ್ತರಿಗೆ ಮಾಜಿ ಮುಖ್ಯಮಂತ್ರಿ ಜಯಲಲಿತ ಹುಟ್ಟು ಹಬ್ಬದ ವೇಳೆ ವಿಶೇಷ ಪೂಜೆ, ಅನ್ನದಾನ, ಪ್ರಸಾದ ವಿತರಣೆಯ ಕಾರ್ಯ ಮಾಡುತ್ತಾ ಬಂದಿರುವುದು ಮಾದರಿ ಆಗಿದೆ ಎಂದು ಸ್ಥಾನಾಚಾರ್ಯ ಶ್ರೀನಿವಾಸನ್ ನರಸಿಂಹನ್ ಗುರೂಜಿ ಪ್ರಶಂಶಿಸಿದ್ದಾರೆ. ಇದೆ ವೇಳೆ ಅನ್ಬಳಗನ್ ಅವರನ್ನು ಯತಿರಾಜದಾಸರ್ ಗುರು ಪೀಠದ ವತಿಯಿಂದ ಅಭಿನಂದಿಸಲಾಯಿತು.