ಕೌಶಲ್ಯ, ವ್ಯವಹಾರ ಜ್ಞಾನ ವೃದ್ಧಿಸುವಲ್ಲಿ ಜೆಸಿಐ ಸಹಕಾರಿ: ಜಿ.ವಿ.ಗಣೇಶ್

| Published : Oct 09 2025, 02:00 AM IST

ಕೌಶಲ್ಯ, ವ್ಯವಹಾರ ಜ್ಞಾನ ವೃದ್ಧಿಸುವಲ್ಲಿ ಜೆಸಿಐ ಸಹಕಾರಿ: ಜಿ.ವಿ.ಗಣೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಜೆಸಿಐ ಸಂಸ್ಥೆಗೆ ಸೇರುವುದರಿಂದ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುವ ಜತೆಯಲ್ಲಿ ಕೌಶಲ್ಯ ಹಾಗೂ ವ್ಯವಹಾರ ಜ್ಞಾನ ವೃದ್ಧಿಯಾಗುತ್ತದೆ ಎಂದು ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಜಿ.ವಿ.ಗಣೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜೆಸಿಐ ಸಂಸ್ಥೆಗೆ ಸೇರುವುದರಿಂದ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುವ ಜತೆಯಲ್ಲಿ ಕೌಶಲ್ಯ ಹಾಗೂ ವ್ಯವಹಾರ ಜ್ಞಾನ ವೃದ್ಧಿಯಾಗುತ್ತದೆ ಎಂದು ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಜಿ.ವಿ.ಗಣೇಶ್ ಹೇಳಿದರು.

ಜೆಸಿಐ ಸಹ್ಯಾದ್ರಿ ಘಟಕದ ವತಿಯಿಂದ ಸಹ್ಯಾದ್ರಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಆಯೋಜಿಸಿದ್ದ ತರಬೇತಿ ಶಿಬಿರದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜೆಸಿಐ ಸಂಸ್ಥೆ ವಿಶ್ವಾದ್ಯಂತ ಮಾನವೀಯ ಸೇವೆಗಳನ್ನು ಮಾಡುವುದರ ಜತೆಗೆ ಯುವಜನರಲ್ಲಿ ಕೌಶಲ್ಯ, ಜ್ಞಾನ ಮತ್ತು ವ್ಯವಹಾರ ಜ್ಞಾನವನ್ನು ವೃದ್ಧಿ ಮಾಡುತ್ತದೆ. ಜೆಸಿಐ ಸಂಸ್ಥೆ ತರಬೇತಿಗಳಲ್ಲಿ ಪಾಲ್ಗೊಂಡರೆ ಕೌಶಲ್ಯ ವೃದ್ಧಿಯ ಜತೆಗೆ ಜೀವನೋತ್ಸಾಹ ಮೂಡುತ್ತದೆ ಎಂದು ತಿಳಿಸಿದರು.

ತರಬೇತಿಗಳಲ್ಲಿ ಪರಸ್ಪರರಲ್ಲಿ ಒಡನಾಟ ಸಂಪರ್ಕ ಪರಿಚಯ ಹಾಗೂ ಅವರ ಪ್ರತಿಭೆ ಮತ್ತು ನಮ್ಮ ಪ್ರತಿಭೆ ಅನಾವರಣಕ್ಕೆ ವೇದಿಕೆಯಾಗುತ್ತದೆ. ಈ ನಿಟ್ಟಿನಲ್ಲಿ ಜೆಸಿಐ ಸಂಸ್ಥೆಯು ಶಾಲಾ ಕಾಲೇಜು, ಬ್ಯಾಂಕ್ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ವಿಶೇಷವಾದ ತರಬೇತಿಗಳನ್ನು ಹಮ್ಮಿಕೊಳ್ಳುವುದರ ಮುಖಾಂತರ ಅವರಿಗೆ ಅಗತ್ಯವಾದ ಮಾಹಿತಿಗಳನ್ನು ನೀಡುತ್ತದೆ ಎಂದರು.

ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಸಿಐ ಶಿವಮೊಗ್ಗ ಕಾಮರ್ಸ್ ಅಧ್ಯಕ್ಷೆ ನಿವೇದಿತಾ ವಿಕಾಸ್ ಮಾತನಾಡಿ, ಪ್ರತಿಯೊಂದು ಕ್ಷೇತ್ರದಲ್ಲೂ ಸಹ ಕೌಶಲ್ಯಗಳು ಅತಿ ಮುಖ್ಯ. ಸರಿಯಾದ ಕೌಶಲ್ಯ ಇದ್ದರೆ ನಾವು ಯಶಸ್ವಿ ಉದ್ಯಮಿಗಳು ಹಾಗೂ ಉದ್ಯೋಗಸ್ಥರಾಗುತ್ತೇವೆ. ಸಂದರ್ಶನಗಳಲ್ಲಿ ಭಾಗವಹಿಸಬೇಕಾದರೆ ಎಲ್ಲಾ ವಿಷಯಗಳ ಅರಿವು ಜ್ಞಾನ ಹಾಗೂ ವಿಷಯಕ್ಕೆ ಸಂಬಂಧಪಟ್ಟ ಕೌಶಲ್ಯ ಅತಿ ಮುಖ್ಯ ಎಂದು ಹೇಳಿದರು.

ಎಲ್ಲರೂ ಜೆಸಿಐ ಸಂಸ್ಥೆ ಸೇರುವುದರ ಮುಖಾಂತರ ಸಂಸ್ಥೆಯ ಕಾರ್ಯ ಚಟುವಟಿಕೆ, ಸೇವಾ ಚಟುವಟಿಕೆಗೆ ಕೈಜೋಡಿಸಬೇಕು. ಸಮಾಜದಲ್ಲಿ ಸದೃಢ ವ್ಯಕ್ತಿಗಳಾಗಿ ನಿರ್ಮಾಣಗೊಳ್ಳಲು ಸಾಧ್ಯವಾಗುತ್ತದೆ ಎಂದರು.

ಸಹ್ಯಾದ್ರಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ರಮೇಶ್ ಭಟ್ ಮಾತನಾಡಿ, ಎಲ್ಲಾ ಹಣಕಾಸು ಸಂಸ್ಥೆಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಇಂತಹ ತರಬೇತಿಗಳು ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ನಾವು ಎಷ್ಟೇ ವಿಷಯಗಳನ್ನು ತಿಳಿದುಕೊಂಡಿದ್ದರೂ ಇಂತಹ ತರಬೇತಿಗಳು ಉದ್ಯೋಗಿಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಹೇಳಿದರು.

ತರಬೇತುದಾರರಾದ ಸಪ್ನ ಅನುಷ್, ಕಾರ್ಯದರ್ಶಿ ಪ್ರಮೋದ್ ಉಡುಪ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.