ಹೊಸ ವರ್ಷದ ಸಂಕ್ರಾಂತಿ ಹಬ್ಬದ ಬಳಿಕ ಪಕ್ಷ ಸಂಘಟನೆ ಸಲುವಾಗಿ ವಾರಕ್ಕೆ ಕನಿಷ್ಠ ಮೂರು ಜಿಲ್ಲೆಗಳಲ್ಲಿ ಪ್ರವಾಸ ಮಾಡಲು ನಿರ್ಧರಿಸಿರುವ ಜೆಡಿಎಸ್, ಅದಕ್ಕೂ ಮೊದಲು ಹೊಸದಾಗಿ ಜಿಲ್ಲಾಧ್ಯಕ್ಷರ ನೇಮಕ ಮಾಡಲು ತೀರ್ಮಾನಿಸಿದೆ.
ಬೆಂಗಳೂರು : ಹೊಸ ವರ್ಷದ ಸಂಕ್ರಾಂತಿ ಹಬ್ಬದ ಬಳಿಕ ಪಕ್ಷ ಸಂಘಟನೆ ಸಲುವಾಗಿ ವಾರಕ್ಕೆ ಕನಿಷ್ಠ ಮೂರು ಜಿಲ್ಲೆಗಳಲ್ಲಿ ಪ್ರವಾಸ ಮಾಡಲು ನಿರ್ಧರಿಸಿರುವ ಜೆಡಿಎಸ್, ಅದಕ್ಕೂ ಮೊದಲು ಹೊಸದಾಗಿ ಜಿಲ್ಲಾಧ್ಯಕ್ಷರ ನೇಮಕ ಮಾಡಲು ತೀರ್ಮಾನಿಸಿದೆ.
ಬುಧವಾರ ನಗರದಲ್ಲಿ ಪಕ್ಷದ ನೂತನ ಕೋರ್ ಕಮಿಟಿಯ ಪ್ರಥಮ ಸಭೆ ನಡೆಯಿತು. ಕೋರ್ ಕಮಿಟಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಮಿಟಿ ಸದಸ್ಯರಾದ ಎ.ಮಂಜು, ಎಚ್.ಕೆ.ಕುಮಾರಸ್ವಾಮಿ, ನೇಮಿರಾಜ್ ನಾಯ್ಕ್, ಕರೆಮ್ಮ ನಾಯಕ್, ದೊಡ್ಡನಗೌಡ ಪಾಟೀಲ್, ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.
ಇದೇ ತಿಂಗಳ 22ರಂದು ಪಕ್ಷದ ರಾಜ್ಯ ಕಚೇರಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧ್ಯಕ್ಷರ ಸಭೆ ಕರೆದಿದ್ದೇವೆ. ಈ ಸಭೆಯಲ್ಲಿ ಅನೇಕ ವಿಚಾರಗಳ ಬಗ್ಗೆ ಚರ್ಚಿಸಲಾಗುವುದು. ಸಂಕ್ರಾಂತಿ ಹಬ್ಬದ ಬಳಿಕ ವಾರಕ್ಕೆ ಕನಿಷ್ಠ ಮೂರು ಜಿಲ್ಲೆಗಳಲ್ಲಿ ಪ್ರವಾಸ ಮಾಡಲು ಕೋರ್ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಶೀಘ್ರದಲ್ಲೇ ಪ್ರವಾಸದ ದಿನಾಂಕ ಗೊತ್ತುಪಡಿಸಲಾಗುವುದು ಎಂದು ತಿಳಿಸಿದರು.
ಎಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಮರು ಆಯ್ಕೆ
ಎಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಮರು ಆಯ್ಕೆಯಾದ ಬಳಿಕ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳ ಅಧಿಕಾರ ವಿಸರ್ಜನೆಯಾಗಿದೆ. ಹೀಗಾಗಿ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಜಿಲ್ಲೆಗಳಲ್ಲಿ ಪಕ್ಷದ ಶಾಸಕರು, ಮಾಜಿ ಶಾಸಕರು, ಪರಾಜಿತ ಅಭ್ಯರ್ಥಿಗಳು ಹಾಗೂ ಮುಖಂಡರೊಂದಿಗೆ ಚರ್ಚಿಸಲಾಗುವುದು ಎಂದರು.
ಪರಿಣಾಮಕಾರಿಯಾಗಿ ಪಕ್ಷ ಸಂಘಟಿಸುವ, ನಾಯಕತ್ವಕ್ಕೆ ನಿಷ್ಠರಾಗಿರುವ ಹಾಗೂ ಪಕ್ಷ ಸಂಘಟನೆಗೆ ಸಮಯ ಕೊಡುವವರನ್ನು ಜಿಲ್ಲಾಧ್ಯಕ್ಷರಾಗಿ ನೇಮಿಸಲಾಗುವುದು. ಅಂತೆಯೇ ಪರಿಣಾಮಕಾರಿ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಹಿಂದಿನ ಜಿಲ್ಲಾಧ್ಯಕ್ಷರನ್ನು ಮುಂದುವರೆಸಲಾಗುವುದು. ಜಿಲ್ಲಾಧ್ಯಕ್ಷ ಸ್ಥಾನ ಬಿಟ್ಟುಕೊಡುವ ಮುಖಂಡರನ್ನು ರಾಜ್ಯ ಮಟ್ಟದಲ್ಲಿ ಪಕ್ಷ ಸಂಘಟನೆಗೆ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.
ಪರಿಷತ್, ಸ್ಥಳೀಯ ಸಂಸ್ಥೆಗಳ ಚುನಾವಣೆ:
ಮುಂದಿನ ವರ್ಷ ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಸೀಟು ಹಂಚಿಕೆ ಸಂಬಂಧ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸಂಸತ್ ಅಧಿವೇಶನದ ಬಳಿಕ ಚರ್ಚಿಸಿ ತೀರ್ಮಾನಿಸಲಿದ್ದಾರೆ. ಅಂತೆಯೇ ಮುಂದಿನ ವರ್ಷ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಎದುರಾಗಲಿದ್ದು, ಎಲ್ಲಾ ಚುನಾವಣೆಗಳಲ್ಲಿ ಎನ್‌ಡಿಎ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಬೇಕು. ಈ ನಿಟ್ಟಿನಲ್ಲಿ ಪಕ್ಷ ಸಂಘಟಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಇದೇ ವೇಳೆ ಕೃಷ್ಣಾ ರೆಡ್ಡಿ ತಿಳಿಸಿದರು.
