ಜೆಡಿಎಸ್ ಹಳೇ ಮೈಸೂರಿಗೆ ಸೀಮಿತವಾದ ಪಕ್ಷ ಎಂಬ ಭಾವನೆ ಇದೆ. ಅದನ್ನು ದೂರ ಮಾಡುವ ಉದ್ದೇಶದಿಂದ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿಯಾದ್ಯಂತ ಸಂಚರಿಸಿ ಪಕ್ಷಕ್ಕೆ ಶಕ್ತಿ ತುಂಬುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಜೆಡಿಎಸ್ ಹಳೇ ಮೈಸೂರಿಗೆ ಸೀಮಿತವಾದ ಪಕ್ಷ ಎಂಬ ಭಾವನೆ ಇದೆ. ಅದನ್ನು ದೂರ ಮಾಡುವ ಉದ್ದೇಶದಿಂದ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿಯಾದ್ಯಂತ ಸಂಚರಿಸಿ ಪಕ್ಷಕ್ಕೆ ಶಕ್ತಿ ತುಂಬುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಗುರುವಾರ ಪಟ್ಟಣದ ಪಾಂಡವ ಕ್ರೀಡಾಂಗಣದ ಬಳಿ ಜನರೊಂದಿಗೆ ಜನತಾದಳ ಹಾಗೂ ಜೆಡಿಎಸ್ ಪಕ್ಷದ ೨೫ನೇ ವರ್ಷದ ಬೆಳ್ಳಿಹಬ್ಬದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜನತಾದಳವನ್ನು ಅನೇಕ ಹಿರಿಯರು ನಿಸ್ವಾರ್ಥ ಭಾವನೆಯಿಂದ ಕಟ್ಟಿದ್ದಾರೆ. ಕನ್ನಡ ನಾಡಿನ ಅಸ್ಮಿತೆಯ ಉಳಿವಿಗಾಗಿ ಹುಟ್ಟಿದ ಪಕ್ಷ. ನಾಡಿನ ನೆಲ- ಜಲ, ಭಾಷೆ ಮತ್ತು ಜನಪರ ಚಳವಳಿ ಮತ್ತು ಹೋರಾಟದಿಂದಲೇ ಜನತಾದಳ ಪ್ರಾದೇಶಿಕ ಪಕ್ಷವಾಗಿ ಬೆಳೆದು ಬಂದಿರುವುದು ಇತಿಹಾಸ ಎಂದು ನುಡಿದರು.

ದೇವೇಗೌಡರ ಹೋರಾಟ ಕಿಚ್ಚು ಸ್ಫೂರ್ತಿ:

೯೩ರ ಇಳಿ ವಯಸ್ಸಿನಲ್ಲೂ ದೇವೇಗೌಡರ ಹೋರಾಟದ ಕಿಚ್ಚು ಕಡಿಮೆಯಾಗಿಲ್ಲ. ನೀರಾವರಿ ಯೋಜನೆಗಳ ಬಗ್ಗೆ ಅವರಿಗಿರುವ ತಿಳಿವಳಿಕೆ, ರಾಜ್ಯದ ಪರ ನಿಲುವು ಇಂದಿನ ಯುವಕರಿಗೆ ಸ್ಫೂರ್ತಿ. ಜೆಡಿಎಸ್ ಒಂದು ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯದಲ್ಲಿ ಗಟ್ಟಿಯಾಗಿದೆ. ಕಾರ್ಯಕರ್ತರು ಪಕ್ಷದ ದೊಡ್ಡ ಶಕ್ತಿಯಾಗಿದ್ದಾರೆ ಎಂದು ವಿಶ್ವಾಸದಿಂದ ಹೇಳಿದರು.

೨೦೧೮ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕರ್ನಾಟಕ ರಾಮರಾಜ್ಯವಾಗಿತ್ತು. ಆ ಸಮಯದಲ್ಲಿ ರೈತರ ₹೨,೬೦೦ ಕೋಟಿ ಸಾಲ ಮನ್ನಾ ಮಾಡಿ ರೈತರ ಮೇಲಿನ ಆರ್ಥಿಕ ಹೊರೆ ಇಳಿಸಿದ್ದರು. ರೈತರ ಆತ್ಮಹತ್ಯೆಯನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದರು ಎಂದು ಬಣ್ಣಿಸಿದರು.

ನನ್ನ ರಾಜಕಾರಣ ಮಂಡ್ಯದಿಂದಲೇ ಆರಂಭಗೊಂಡಿತು. ಅಂದಿನ ನಿಖಿಲ್‌ಗೂ ಇಂದಿನ ನಿಖಿಲ್‌ಗೂ ವ್ಯತ್ಯಾಸಗಳಿವೆ. ಚುನಾವಣೆಯಲ್ಲಿ ಏಳು- ಬೀಳುಗಳು ಸಹಜ. ಸೋಲುಗಳಿಂದ ನನಗೆ ರಾಜಕೀಯ ಪಕ್ವತೆ ಬಂದಿದೆ. ಜನರು ನನ್ನನ್ನು ಚುನಾವಣೆಯಲ್ಲಿ ಸೋಲಿಸಿದರೂ ನಾನು ಹೋದಲ್ಲೆಲ್ಲಾ ಅಕ್ಕರೆ, ಪ್ರೀತಿ, ವಿಶ್ವಾಸವನ್ನು ತೋರಿಸುತ್ತಿದ್ದಾರೆ ಎಂದರು.

ಒಗ್ಗಟ್ಟಾಗಿ ಪಕ್ಷ ಮುನ್ನಡೆಸಿ:

ಜೆಡಿಎಸ್‌ಗೆ ಈಗ ೨೫ ವರ್ಷವಾಗಿದೆ. ಪಕ್ಷ ಸುವರ್ಣ ಮಹೋತ್ಸವ ಆಚರಿಸಬೇಕಾದರೆ ಜನಪರವಾದ ಹೋರಾಟ ಮತ್ತು ಬದ್ಧತೆಯಿಂದ ಎಲ್ಲರೂ ಮುನ್ನಡೆಯಬೇಕಿದೆ. ರಾಜ್ಯದಲ್ಲಿ ಪಕ್ಷ ಯಶಸ್ಸು ಕಾಣುತ್ತಿದೆ. ನಾವೆಲ್ಲರೂ ಒಗ್ಗಟ್ಟಾಗಿ ಪಕ್ಷವನ್ನು ಬಲ ಪಡಿಸುವ ಕೆಲಸ ಮಾಡಬೇಕಿದೆ ಎಂದರು.

========ಜಿಲ್ಲೆಯ ಅಭಿವೃದ್ಧಿಗೆ ಎಲ್ಲರೂ ಹೆಗಲುಕೊಟ್ಟು ನಿಲ್ಲಬೇಕಿದೆ. ಅದಕ್ಕಾಗಿ ಜೆಡಿಎಸ್‌ನ ಮಾಜಿ ಶಾಸಕರಿಗೆ ಜನರು ಆಶೀರ್ವಾದ ಮಾಡಬೇಕು ಎಂದು ಜನರಲ್ಲಿ ಮನವಿ ಮಾಡಿದರು.. ದೇವೇಗೌಡರು, ಕುಮಾರಸ್ವಾಮಿ ಅವರು ಈ ಜಿಲ್ಲೆಯವರಾಗದಿದ್ದರೂ ಹಲವು ರೈತಪರ- ಜನಪರ ಹೋರಾಟಗಳಿಂದಲೇ ಜಿಲ್ಲೆಯ ಜನರ ಮನಸ್ಸನ್ನು ಗೆದ್ದಿದ್ದಾರೆ. ಅದನ್ನು ಉಳಿಸಿಕೊಂಡು ಹೋಗಬೇಕಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.