ಸಾರಾಂಶ
ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತ ಎಡಿಜಿಪಿ ಬಳಸಿರುವ ಪದ ಬಳಕೆ ಖಂಡನೀಯಕನ್ನಡಪ್ರಭ ವಾರ್ತೆ ಹಾಸನ
ಒಬ್ಬ ಪೊಲೀಸ್ ತನಿಖಾಧಿಕಾರಿಯಾಗಿ ಅವರು ಆಡಿರುವ ಮಾತುಗಳು ರಾಜಕಾರಣಿಗೆ ಮಾಡಿರುವ ಅಪಮಾನ. ಕೇಂದ್ರ ಸರ್ಕಾರದ ಮಂತ್ರಿಯಾಗಿರುವ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಲೋಕಾಯುಕ್ತ ಎಡಿಜಿಪಿ ಬಳಸಿರುವ ಪದ ಬಳಕೆ ಖಂಡನೀಯ ಕೂಡಲೇ ಸರ್ಕಾರ ಆತನನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ಅಕ್ಟೋಬರ್ ೩ರಂದು ನಗರದಲ್ಲಿ ಜೆಡಿಎಸ್ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎ. ಮಂಜು ಎಚ್ಚರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಮುಡಾ ಹಗರಣದ ತನಿಖಾಧಿಕಾರಿಯಾಗಿ ಅವರು ಆಡಿರುವ ಮಾತುಗಳು ಒಬ್ಬ ಜನಪ್ರತಿನಿಧಿಗೆ ಮಾಡಿರುವ ಅಪಮಾನವಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದ ಅವರು, ಈ ಪ್ರಕರಣವನ್ನು ಗಮನಿಸಿದರೆ ಈ ಮಾತುಗಳನ್ನು ಅವರು ಹೇಳಿರುವುದಲ್ಲ ಯಾರೋ ಹೇಳಿಸಿರುವು ಎಂಬ ಅನುಮಾನ ಇದೆ ಎಂದರು.
ಎಡಿಜಿಪಿ ಬರೆದಿರುವ ಪತ್ರ ವೈರಲ್ ಆಗಿದ್ದು, ಅದರ ಬಗ್ಗೆ ತನಿಖೆ ಆಗಬೇಕು. ಅವರು ತನಿಖಾಧಿಕಾರಿ ಆಗಿ ಕೆಲಸ ಮಾಡುತ್ತಿಲ್ಲ. ಅದನ್ನು ಬಿಟ್ಟ ಬೇರೆ ಪದಗಳನ್ನು ಬಳಸಿದ್ದಾರೆ. ಅವರು ತನಿಖಾಧಿಕಾರಿ ಆಗಲು ಅರ್ಹರಲ್ಲ. ಪೊಲೀಸ್ ಅಧಿಕಾರಿಗೆ ಪ್ರಕರಣದ ತನಿಖೆ ಮಾಡಿ ವರದಿ ನೀಡಲು ಕೊಟ್ಟಿದ್ದಾರೆ. ಇವರು ಪ್ರಚಾರ ತೆಗೆದುಕೊಳ್ಳಲು ಈ ರೀತಿ ಮಾಡಿದ್ದಾರೆ. ಎಡಿಜಿಪಿಗೆ ಪದ ಬಳಕೆ ಯಾರು ಕಲಿಸಿಕೊಟ್ಟರು ಗೊತ್ತಿಲ್ಲ. ಹುಷಾರಾಗಿ ಮಾತನಾಡುವುದನ್ನು ಕಲಿತುಕೊಳ್ಳಬೇಕು. ಫೂಟ್ಪಾತ್‌ನವರ ರೀತಿ ಮಾತನಾಡಿರುವುದು ಸರಿಯಲ್ಲ. ಯಾರೋ ಬರೆದ ಪುಸ್ತಕವನ್ನು ಓದಿದ್ದಾರೋ, ಬಿಟ್ಟವ್ರೋ ಗೊತ್ತಿಲ್ಲ. ಅವರು ಆ ರೀತಿ ಬರೆದಿದ್ದಾರೋ, ಬೇರೆಯವರು ಅವರ ಮೂಲಕ ಹೇಳಿಸಿರುವುದು ಎದ್ದು ಕಾಣಿಸುತ್ತಿದೆ. ಪ್ರಚಾರಪ್ರಿಯರಾಗಿ ಮಾಡುತ್ತಿರುವುದು ಸರಿಯಲ್ಲ. ಅವರ ಮೇಲೆ ಹಲವು ಆಪಾದನೆಗಳಿವೆ. ಎಡಿಜಿಪಿ ಮಾವ ಡೀಸಿ ಆಗಿದ್ದರು. ಅವರ ಹಗರಣಗಳು ಮುಚ್ಚಿಹೋಗಿವೆ. ಎಡಿಜಿಪಿಯನ್ನು ಕಾಂಗ್ರೆಸ್ ಮಂತ್ರಿಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರು ಬರೆದಿರುವುದು ಒಬ್ಬ ಚುನಾಯಿತ ಪ್ರತಿನಿಧಿ ಮೇಲೆ, ನನ್ನ ಮೇಲೆ, ಸಿದ್ದರಾಮಯ್ಯ ಅವರ ಮೇಲೆ ಮಾತನಾಡಿರುವ ಲೆಕ್ಕ. ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಅಸೆಂಬ್ಲಿಗೆ ಶಂಕರ್ ಬಿದರಿ ಬಂದಿದ್ದರು ಅವರನ್ನು ಹೊರಗೆ ನೂಕಿದ್ದೆವು. ಕೂಡಲೇ ತನಿಖಾಧಿಕಾರಿಯನ್ನು ಬದಲಾವಣೆ ಮಾಡಬೇಕು. ಸಾರ್ವಜನಿಕವಾಗಿ ನಾನು ಮಾಡಿರುವುದು ತಪ್ಪು ಅಂತ ಹೇಳಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.ಅಪಚಾರ ಮಾಡಿದ್ದಾರೆ: ಮಾಜಿ ಸಚಿವ ಎಚ್.ಕೆ ಕುಮಾರಸ್ವಾಮಿ ಮಾತನಾಡಿ, ಎಡಿಜಿಪಿ ಚಂದ್ರಶೇಖರ್ ನೀಡಿರುವ ಹೇಳಿಕೆಯಲ್ಲಿ ಕುಮಾರಸ್ವಾಮಿಯವರನ್ನು ಟಾರ್ಗೆಟ್ ಮಾಡಿರುವುದು ಕಂಡು ಬರುತ್ತಿದೆ, ಇದನ್ನು ಆಡಳಿತ ಪಕ್ಷದ ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಖಂಡಿಸಬೇಕಿತ್ತು. ಆದರೆ ಅದರ ಬದಲಾಗಿ ಅವರ ಪರವಾಗಿಯೇ ಮಾತನಾಡುವ ಮೂಲಕ ಸಂವಿಧಾನದ ನೀತಿ ನಿಯಮಗಳಿಗೆ ಅಪಚಾರ ಮಾಡಿದ್ದಾರೆ. ಅಲ್ಲದೆ ಮೇಲಾಧಿಕಾರಿಗಳಿಗೆ ಬರೆದಿರುವ ಪತ್ರ ವೈರಲ್ ಆಗಿದೆ. ಇದೆಲ್ಲವೂ ಸರ್ಕಾರದ ದುರಾಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು. ಸರ್ಕಾರಿ ಹುದ್ದೆಗೆ ನೇಮಕವಾಗುವ ಮುನ್ನ ಸರ್ಕಾರದ ನಿಯಮಗಳಿಗೆ ಬದ್ಧರಾಗಿರುತ್ತೇವೆ ಎಂಬ ಪ್ರಮಾಣವಚನ ಸ್ವೀಕಾರ ಮಾಡಿರುತ್ತಾರೆ. ಆದರೆ ಜನಪ್ರತಿನಿಧಿಗಳ ವಿರುದ್ಧವೇ ಮನಬಂದಂತೆ ಮಾತನಾಡಿ, ಅವಾಚ್ಯ ಶಬ್ಧಗಳನ್ನು ಬಳಸುವ ಮೂಲಕ ಮನಬಂದಂತೆ ನಡೆದುಕೊಳ್ಳುತ್ತಿರುವ ಅಧಿಕಾರಿಗಳಿಗೆ ಕಡಿವಾಣ ಹಾಕುವ ಅನಿವಾರ್ಯತೆ ಇದೇ ಇಲ್ಲವಾದರೆ ಮುಂದಿನ ದಿನಗಳಲ್ಲಿ ಸಂವಿಧಾನದ ನೀತಿ ನಿಯಮಗಳಿಗೆ ಅಪಚಾರ ಕಟ್ಟಿಟ್ಟ ಬುತ್ತಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್, ಜೆಡಿಎಸ್ ತಾಲೂಕು ಅಧ್ಯಕ್ಷರಾದ ಎಸ್. ದ್ಯಾವೇಗೌಡ, ಆಲೂರು ತಾಲೂಕು ಅಧ್ಯಕ್ಷ ಮಂಜೇಗೌಡ, ಮಾದ್ಯಮ ವಕ್ತಾರ ಹೊಂಗೆರೆ ರಘು ಇದ್ದರು.ಎಡಿಜಿಪಿ ಪೂರ್ವಾಗ್ರಹ ಪೀಡಿತರಾಗಿ ವರ್ತಿಸುತ್ತಿದ್ದು, ಒಬ್ಬ ಕೇಂದ್ರ ಮಂತ್ರಿ ಬಗ್ಗೆ ಈ ರೀತಿ ಪತ್ರ ಬರೆದಿರುವುದನ್ನು ಖಂಡಿಸುತ್ತೇನೆ. ಕೂಡಲೇ ಅವರು ಕ್ಷಮೆ ಯಾಚಿಸಬೇಕು. ಎಡಿಜಿಪಿಪತ್ರ ಬರೆದಿರುವುದನ್ನು ಖಂಡಿಸಿ ಗುರುವಾರ ಜೆಡಿಎಸ್ ಕಾರ್ಯಕರ್ತರು, ಎಚ್.ಡಿ. ಕುಮಾರಸ್ವಾಮಿ ಅಭಿಮಾನಿಗಳು ಸೇರಿ ಹಾಸನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕೂಡಲೇ ಎಡಿಜಿಪಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಕೆ.ಎಸ್. ಲಿಂಗೇಶ್, ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ