ಕೊಬ್ಬರಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ

| Published : Dec 03 2023, 01:00 AM IST

ಸಾರಾಂಶ

ತೆಂಗು ಬೆಳೆಯ ಬೆಲೆ ಪಾತಾಳಕ್ಕೆ ಕುಸಿದು ಇಂದು ಬೆಳೆಗಾರು ಸಂಕಷ್ಟದಲ್ಲಿದ್ದಾರೆ. ರೈತರ ಹಿತ ಕಾಪಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಹಾಗೂ ಕೊಬ್ಬರಿಗೆ ಬೆಂಬಲ ಬೆಲೆ ನೀಡಲು ಆಗ್ರಹಿಸಿ ಶಾಸಕರಾದ ಎಚ್.ಡಿ. ರೇವಣ್ಣ ಅವರ ನೇತೃತ್ವದಲ್ಲಿ ಶನಿವಾರ ನೂರಾರು ಜನ ರೈತರು ಹಾಗೂ ಜೆಡಿಎಸ್‌ ಜನಪ್ರತಿನಿಧಿಗಳೊಡಗೂಡಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ರಸ್ತೆ ಉದ್ದಕ್ಕೂ ತೆಂಗಿನಕಾಯಿ ಒಡೆಯುವ ಮೂಲಕ ವಿನೂತನವಾಗಿ ಪ್ರತಿಭಟನೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಹಾಸನ ಕೊಬ್ಬರಿಗೆ ಬೆಂಬಲ ಬೆಲೆ ನೀಡಲು ಆಗ್ರಹಿಸಿ ಶಾಸಕರಾದ ಎಚ್.ಡಿ. ರೇವಣ್ಣ ಅವರ ನೇತೃತ್ವದಲ್ಲಿ ಶನಿವಾರ ನೂರಾರು ಜನ ರೈತರು ಹಾಗೂ ಜೆಡಿಎಸ್‌ ಜನಪ್ರತಿನಿಧಿಗಳೊಡಗೂಡಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ರಸ್ತೆ ಉದ್ದಕ್ಕೂ ತೆಂಗಿನಕಾಯಿ ಒಡೆಯುವ ಮೂಲಕ ವಿನೂತನವಾಗಿ ಪ್ರತಿಭಟನೆ ಮಾಡಲಾಯಿತು. ನಗರದ ಹೇಮಾವತಿ ಪ್ರತಿಮೆ ಮುಂಭಾಗದಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದ ಅವರು, ಅಫೆ ವಾಹನದಲ್ಲಿ ತಂದ ಕೊಬ್ಬರಿ ಮತ್ತು ತೆಂಗಿನಕಾಯಿಯನ್ನು ಡೀಸಿ ಕಚೇರಿ ಆವರಣದಲ್ಲಿ ಸುರಿದರು. ತೆಂಗು ಬೆಳೆಯ ಬೆಲೆ ಪಾತಾಳಕ್ಕೆ ಕುಸಿದು ಇಂದು ಬೆಳೆಗಾರು ಸಂಕಷ್ಟದಲ್ಲಿದ್ದಾರೆ. ರೈತರ ಹಿತ ಕಾಪಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಕಾರರು ಆಕ್ರೋಶ ಹೊರಹಾಕಿದರು.

ಮಾಜಿ ಸಚಿವ ಎಚ್.ಡಿ. ರೇವಣ್ಣ ಮಾಧ್ಯಮದೊಂದಿಗೆ ಮಾತನಾಡಿ, ಹಾಸನ ಜಿಲ್ಲೆಯ ಎಲ್ಲಾ ಕಡೆ ಅತೀ ಕಡಿಮೆ ಮಳೆಯಾಗಿದ್ದು, ಜಿಲ್ಲೆಯಾದ್ಯಂತ ಸುಮಾರು ೧,೫೪,೦೦೦ ಹೆಕ್ಟೇರ್ ಪ್ರದೇಶದಲ್ಲಿ ರೈತರು ಬಿತ್ತಿದ ರಾಗಿ, ಮುಸುಕಿನ ಜೋಳ, ಭತ್ತ ಇತರೆ ಕೃಷಿ ಮತ್ತು ತೋಟಗಾರಿಕ ಬೆಳೆಗಳು ಸಂಪೂರ್ಣವಾಗಿ ನಷ್ಟವಾಗಿದೆ. ೧.೧೦.೦೦೦ ಹೆಕ್ಟೇರ್ (ಸುಮಾರು ೨.೫೦,೦೦೦ ಎಕರೆ) ಪ್ರದೇಶದಲ್ಲಿ ತೆಂಗು ಬೆಳೆಗೆ ಮಳೆ ಕೊರತೆಯಾಗಿ ಕೀಟಬಾಧೆಯಿಂದಾಗಿ ಇಳುವರಿಯಲ್ಲಿ ಶೇಕಡಾ ೫೦ರಷ್ಟು ನಷ್ಟವುಂಟಾಗಿದೆ. ಅಲ್ಲದೇ ಕೊಬ್ಬರಿ ಬೆಲೆಯಲ್ಲಿ ತೀವ್ರ ಇಳಿಮುಖವಾಗಿ ಜಿಲ್ಲೆಯ ಕೊಬ್ಬರಿ ಬೆಳೆಗಾರರು ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ತಲೆದೋರಿದೆ. ವಿವಿಧ ಬೆಳೆಗಳಲ್ಲಿ ಜಿಲ್ಲೆಯ ರೈತರು ಸುಮಾರು ೩೦೦೦ ಕೋಟಿಗಳಿಗೂ ಹೆಚ್ಚು ಆರ್ಥಿಕ ನಷ್ಟಕ್ಕೀಡಾಗಿದ್ದಾರೆ. ಆದರೆ, ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್ ನಿಯಮಾನುಸಾರ ೧೩೧ ಕೋಟಿಗಳಷ್ಟು ಬೆಳೆ ನಷ್ಟವಾಗಿರುವುದಾಗಿ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಯಿಂದ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಕಳುಹಿಸುತ್ತಿದ್ದು, ಕೂಡಲೇ ಬೆಳೆ ಪರಿಹಾರ ರು. ೧೩೧ ಕೋಟಿಗಳನ್ನು ಬಿಡುಗಡೆಗೊಳಿಸಬೇಕು. ಹಾಗೂ ತೋಟಗಾರಿಕೆ ಬೆಳೆಗಳಾದ ತೆಂಗು, ಅಡಿಕೆ, ಕಾಫಿ, ಏಲಕ್ಕಿ, ಮೆಣಸು, ಹೂ, ತರಕಾರಿ ಮತ್ತಿತರ ಬೆಳೆಗಳು ಸಂಪೂರ್ಣ ಹಾಳಾಗಿ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿರುವುದಿಂದ ಬೆಳೆಗಳನ್ನು ಬೆಳೆದ ರೈತರಿಗೆ ಕೂಡಲೇ ಪರಿಹಾರವನ್ನು ನೀಡಬೇಕು. ರೈತರ ರಾಷ್ಟ್ರೀಕೃತ, ಸಹಕಾರ ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು. ಪ್ರತಿ ಕ್ವಿಂಟಲ್ ಕೊಬ್ಬರಿಗೆ ಬೆಂಬಲ ಬೆಲೆ ನೀಡುವುದರ ಜತೆಗೆ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಆಗ್ರಹಿಸಿ, ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದಂತೆ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ ೧೫ ಸಾವಿರ ರುಪಾಯಿ ಬೆಂಬಲ ಬೆಲೆ ಕೊಡುವಂತೆ ಒತ್ತಾಯಿಸಿದರು. ನಂತರದಲ್ಲಿ ತೆಂಗಿನಕಾಯಿ ಮತ್ತು ಕೊಬ್ಬರಿಯನ್ನು ಚೀಲದಲ್ಲಿ ತುಂಬಿ ಜಿಲ್ಲಾಧಿಕಾರಿ ಕಚೇರಿ ಬಳಿ ಇಟ್ಟು ಬಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಶಾಸಕರಾದ ಸಿ.ಎನ್. ಬಾಲಕೃಷ್ಣ, ಎಚ್.ಪಿ. ಸ್ವರೂಪ್, ಮಾಜಿ ಶಾಸಕ ಕೆ.ಎಸ್. ಲಿಂಗೇಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ನಾಗರಾಜು, ಮಂಜೇಗೌಡ, ಮಾಧ್ಯಮ ವಕ್ತಾರ ಹೊಂಗೆರೆ ರಘು, ಗಿರೀಶ್, ಸೇರಿದಂತೆ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸೇರಿದಂತೆ ರೈತರು ಪಾಲ್ಗೊಂಡಿದ್ದರು.

*ಹೇಳಿಕೆ- 1

ರಾಜ್ಯ ಸರ್ಕಾರದವರು ಚುನಾವಣಾ ಪೂರ್ವದಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಕೊಬ್ಬರಿಗೆ ಪ್ರತಿ ಕ್ವಿಂಟಲ್‌ಗೆ ಕನಿಷ್ಠ ೧೫ ಸಾವಿರ ಬೆಂಬಲ ಬೆಲೆಯನ್ನು ಘೋಷಿಸಿ ರೈತರಿಂದ ನೇರವಾಗಿ ಖರೀದಿಸಲಾಗುವುದೆಂದು ಭರವಸೆ ನೀಡಿದ್ದರು. ನೀಡಿದ ಆಶ್ವಾಸನೆಯಂತೆ ಬೆಂಬಲ ಬೆಲೆಯನ್ನು ಕೂಡಲೇ ಘೋಷಿಸಬೇಕು.

- ಎಚ್‌ ಡಿ ರೇವಣ್ಣ, ಜೆಡಿಎಸ್‌ ಶಾಸಕ