ಇಂಧನ ದರ ಇಳಿಕೆಗೆ ಆಗ್ರಹಿಸಿ ಹಾಸನದಲ್ಲಿ ಜೆಡಿಎಸ್ ಪ್ರತಿಭಟನೆ

| Published : Jun 19 2024, 01:07 AM IST

ಇಂಧನ ದರ ಇಳಿಕೆಗೆ ಆಗ್ರಹಿಸಿ ಹಾಸನದಲ್ಲಿ ಜೆಡಿಎಸ್ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಬೆಲೆ ಏರಿಕೆಯನ್ನು ಕೂಡಲೇ ಇಳಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಪಕ್ಷದಿಂದ ಮಂಗಳವಾರ ಪ್ರತಿಭಟನೆ ನಡೆಸಿತು. ಬಳಿಕ ಎತ್ತಿನಗಾಡಿ ಮತ್ತು ಟ್ರ್ಯಾಕ್ಟರ್‌ ಮೂಲಕ ಮೆರವಣಿಗೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಪೆಟ್ರೋಲ್, ಡೀಸೆಲ್‌ ದರರ ಏರಿಕೆಗೆ ಖಂಡನೆ । ಎತ್ತಿನಗಾಡಿ, ಟ್ರ್ಯಾಕ್ಟರ್‌ ಮೆರವಣಿಗೆ । ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆ

ಕನ್ನಡಪ್ರಭ ವಾರ್ತೆ ಹಾಸನ

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಬೆಲೆ ಏರಿಕೆಯನ್ನು ಕೂಡಲೇ ಇಳಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಪಕ್ಷದಿಂದ ಮಂಗಳವಾರ ಪ್ರತಿಭಟನೆ ನಡೆಸಿತು. ಬಳಿಕ ಎತ್ತಿನಗಾಡಿ ಮತ್ತು ಟ್ರ್ಯಾಕ್ಟರ್‌ ಮೂಲಕ ಮೆರವಣಿಗೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ನಗರದ ಹೇಮವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್.ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಆಗಮಿಸಿ, ಮೊದಲಿಗೆ ಇನ್ನೂ ಬರಗಾಲದ ಸಂಕಷ್ಟದಿಂದ ಜಿಲ್ಲೆ ಹಾಗೂ ರಾಜ್ಯದ ಜನಸಾಮಾನ್ಯರು, ರೈತರು ಹೊರಬರಲಾಗದೆ ತೊಂದರೆ ಅನುಭವಿಸುತ್ತಿರುವಾಗಲೇ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಲೀಟರ್‌ಗೆ ತಲಾ ೩ ರು.ಗೆ ಹೆಚ್ಚಳ ಮಾಡಿರುವುದನ್ನು ಉಗ್ರವಾಗಿ ಖಂಡಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್.ಲಿಂಗೇಶ್ ಮಾತನಾಡಿ, ‘ಕಾಂಗ್ರೆಸ್ ಜನರ ಪರ, ಬಡವರ ಪರ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದು ಈಗ ಸಾಮಾನ್ಯನ ಬದುಕಿಗೆ ಬೆಲೆ ಏರಿಕೆ ಮೂಲಕ ಸಂಕಷ್ಟ ತಂದೊಡ್ಡಿರುವುದು ನಾಚಿಕೆಗೇಡಿನ ಸಂಗತಿ. ಅಧಿಕಾರದ ಜತೆಗೆ ಚುನಾವಣೆ ಗೆಲ್ಲಲೇಬೇಕು ಎಂಬ ಒಂದೇ ಉದ್ದೇಶದಿಂದ ಗ್ಯಾರಂಟಿ ಯೋಜನೆ ಜಾರಿಗೆ ತಂದ ನೀವು, ಅವುಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಮಾಡಿರುವುದು ದುರದೃಷ್ಟಕರ. ಇದೇನಾ ನೀವು ದೇಶಕ್ಕೆ ನೀಡಿರುವ ಕರ್ನಾಟಕದ ಮಾದರಿ’ ಎಂದು ಲೇವಡಿ ಮಾಡಿದರು.

‘ನಿಮ್ಮದೇ ಸಂಪುಟದ ಹಲವು ಸಚಿವರು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದಕ್ಕಾಗಿಯೇ ಇಂಧನದ ಮೇಲಿನ ತೆರಿಗೆ ಹೆಚ್ಚಳ ಮಾಡಲಾಗಿದೆ ಎಂದು ಹೇಳಿದ್ದಾರೆ. ಇದನ್ನು ನೋಡಿದರೆ ಪೂರ್ವಾಪರ ಯೋಚಿಸದೇ, ಸಂಪನ್ಮೂಲ ಕ್ರೋಢೀಕರಣ ಮಾಡಿಕೊಳ್ಳದೆ ನೀವು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದೀರಿ ಎಂದು ಇದರಿಂದ ತಿಳಿದು ಬರುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ‘ಬೆಲೆ ಏರಿಕೆ ನಂತರವೂ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಇಂಧನ ದರ ಕಡಿಮೆ ಇದೆ ಎಂದು ಸಮರ್ಥಿಸಿಕೊಳ್ಳುತ್ತಿರುವ ನಿಮ್ಮ ನಿಲುವು ಹಾಸ್ಯಾಸ್ಪದ. ಪೆಟ್ರೋಲ್-ಡೀಸೆಲ್ ಮೇಲಿನ ಬೆಲೆ ಏರಿಕೆಯಿಂದ ಸಾಗಣೆ ವೆಚ್ಚ ಹಾಗೂ ಅಗತ್ಯ ವಸ್ತುಗಳ ಬೆಲೆ ಸಹಜವಾಗಿಯೇ ಏರಲಿದೆ. ಇದರಿಂದ ಜನ ಸಾಮಾನ್ಯರ ಜೀವನದ ಮೇಲೆ ದೊಡ್ಡ ಹೊಡೆತ ಬೀಳಲಿದೆ’ ಎಂದು ಹೇಳಿದರು.

‘ಮೊದಲೇ ಬರದ ಪೆಟ್ಟಿನಿಂದ ಜನರು ತತ್ತರಿಸಿ ಹೋಗಿದ್ದಾರೆ. ಅಭಿವೃದ್ಧಿ ಶೂನ್ಯವಾಗಿದೆ. ಕೇವಲ ಗ್ಯಾರಂಟಿ ಯೋಜನೆಗಳ ಜಪದಲ್ಲಿ ನಿಮ್ಮ ಸರ್ಕಾರ ಅಭಿವೃದ್ಧಿಯನ್ನೇ ಸಂಪೂರ್ಣವಾಗಿ ಮರೆತಿದೆ. ಸಮಸ್ತ ಜನರ ಪರವಾಗಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ, ಅದೇ ಜನರ ಮೇಲೆ ತೆರಿಗೆಯ ಭಾರ ಹೊರಿಸುವುದು ನಿಜಕ್ಕೂ ಖಂಡನೀಯ. ಕೂಡಲೇ ಇಂಧನದ ಮೇಲಿನ ತೆರಿಗೆ ಏರಿಕೆ ನಿರ್ಧಾರವನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ನಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಸಿದರು.

ಶಾಸಕ ಎಚ್.ಪಿ.ಸ್ವರೂಪ್, ಜೆಡಿಎಸ್ ವಕ್ತಾರ ಹೊಂಗೆರೆ ರಘು, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಬಿ.ಆರ್.ಸತ್ಯನಾರಾಯಣ್, ಜೆಡಿಎಸ್ ತಾಲೂಕು ಅದ್ಯಕ್ಷ ಎಸ್.ದ್ಯಾವೇಗೌಡ, ಆಲೂರು ತಾಲೂಕು ಅಧ್ಯಕ್ಷ ಮಂಜೇಗೌಡ, ಚನ್ನರಾಯಪಟ್ಟಣ ತಾಲೂಕು ಅಧ್ಯಕ್ಷ ಪರಮ ದೇವರಾಜೇಗೌಡ, ಜಿಲ್ಲಾ ನೌಕರರ ಸಂಘದ ಮಾಜಿ ಗೌರವಾದ್ಯಕ್ಷ ರುದ್ರಫ್ಪ, ಮೊಸಳೆ ಹೊಸಹಳ್ಳಿ ಚಂದ್ರೇಗೌಡ, ಪ್ರೇಮಮ್ಮ, ನಗರಸಭೆ ಸದಸ್ಯರಾದ ಚಂದ್ರೇಗೌಡ, ಸೈಯದ್ ಅಕ್ಬರ್, ಯೋಗೇಂದ್ರ ಬಾಬು, ಅಮೀರ್ ಜಾನ್, ಬಟ್ಟೆ ಗೋಪಾಲ್, ಸಮೀರ್, ಬಿಜೆಪಿ ಮುಖಂಡ ಮನೋಹರ್ ಇದ್ದರು.