ಸಾರಾಂಶ
ಮಂಡ್ಯ : ಮಂಡ್ಯ ಕೃಷಿ ವಿಶ್ವವಿದ್ಯಾಲಯಕ್ಕೆ ಸರ್ಕಾರ ಮತ್ತು ರಾಜ್ಯಪಾಲರಿಂದ ಅನುಮೋದನೆ ದೊರಕಿದೆ. ಇಲ್ಲಿ ಜೆಡಿಎಸ್ ಶಾಸಕರು ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ಅದು ಲೆಕ್ಕಕ್ಕೆ ಇಲ್ಲದಂತಾಗಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಕೃಷಿ ವಿವಿ ಅಗತ್ಯವಿರುವ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ಸಂಪುಟದಲ್ಲಿ ಅನುಮೋದನೆ ದೊರಕಿಸಲಾಗಿತ್ತು. ಆದರೆ, ಜೆಡಿಎಸ್ ಶಾಸಕರು ಇದಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಿ ಸದನದಲ್ಲಿ ಧರಣಿ ನಡೆಸಿದ್ದರು ಎಂದರು.
ಹಾಸನ ಕಾಲೇಜುಗಳನ್ನು ಮಂಡ್ಯ ಕೃಷಿ ವಿವಿಗೆ ಸೇರಿಸದಂತೆ ರಾಜ್ಯಪಾಲರಿಗೆ ಮನವಿಯನ್ನೂ ಸಲ್ಲಿಸಿದ್ದರು. ಇದರ ನಡುವೆ ಮತ್ತೊಂದು ವಿಪಕ್ಷ ಬಿಜೆಪಿಯಿಂದ ಕೃಷಿ ವಿವಿಗೆ ಯಾವುದೇ ವಿರೋಧ ವ್ಯಕ್ತವಾಗಲಿಲ್ಲ. ರಾಜ್ಯಪಾಲರೂ ಕೂಡ ಕೃಷಿ ವಿವಿ ಅಗತ್ಯತೆ ಮನಗಂಡು ಅನುಮೋದನೆ ನೀಡಿದರು. ಜೆಡಿಎಸ್ ಮಂಡ್ಯ ಅಭಿವೃದ್ಧಿಗೆ ವಿರೋಧಿಗಳು ಎಂಬುದನ್ನು ಇದರ ಮೂಲಕ ತೋರಿಸಿದ್ದಾರೆ ಎಂದು ಟೀಕಿಸಿದರು.
ಮಂಡ್ಯದಲ್ಲಿ ಕೃಷಿ ವಿವಿ ಸ್ಥಾಪನೆಯಾಗಬಾರದು ಎಂಬುದೇ ಜೆಡಿಎಸ್‌ನ ಮೂಲ ಉದ್ದೇಶ. ಇದಕ್ಕಾಗಿ ತಿಪ್ಪೇಸ್ವಾಮಿಯವರನ್ನು ಮುಂದಿಟ್ಟುಕೊಂಡು ರೇವಣ್ಣ ಅವರ ಮೂಲಕ ವಿರೋಧ ಮಾಡಿದರು. ತಿಪ್ಪೇಸ್ವಾಮಿ ಅವರ ಹಿಂದೆ ಯಾರಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದು ಜನರಿಗೆ ಅರ್ಥವಾಗುವುದಿಲ್ಲ. ಜಿಲ್ಲೆಯ ಜನರು ಕೊಟ್ಟ ಅಧಿಕಾರವನ್ನು ಅಭಿವೃದ್ಧಿಗೆ ವಿರೋಧವಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್ ನಾಯಕರನ್ನು ಗುರಿಯಾಗಿಸಿಕೊಂಡು ಟೀಕಿಸಿದರು.
ಸಂಸದರಾಗಿ ಜಿಲ್ಲೆಗೆ ಬಂದು ಕೇವಲ ದಿಶಾ ಸಭೆ ಮಾಡುವುದಕ್ಕಷ್ಟೇ ಅವರ ಕೆಲಸವಲ್ಲ. ಜಿಲ್ಲೆಯ ಜನರ ಅಭಿವೃದ್ಧಿಯ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು. ಸರ್ಕಾರದಿಂದ ಯಾವುದೇ ಸಹಕಾರ ಸಿಗುತ್ತಿಲ್ಲ ಎನ್ನುವುದು ಇವರ ದೌರ್ಬಲ್ಯ ತೋರಿಸುತ್ತದೆ ಎಂದರು.
ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ಅವರು ಮಾಡುವ ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಸಂಪೂರ್ಣ ಸಹಕಾರ ನೀಡುವಂತೆ ಜಿಲ್ಲಾಡಳಿತಕ್ಕೆ ನಾನು ಹಿಂದೆಯೇ ಸೂಚಿಸಿದ್ದೇನೆ. ಆದರೂ, ಸಹಕಾರ ಸಿಗುತ್ತಿಲ್ಲ ಎನ್ನುವುದು ಕೇವಲ ನೆಪವಷ್ಟೆ. ಅಭಿವೃದ್ಧಿಯ ಇಚ್ಛಾಶಕ್ತಿ ಅವರಲ್ಲಿರಬೇಕು ಎಂದು ನುಡಿದರು.
ಕೇಂದ್ರ ಸಚಿವರಾಗಿ ಮಂಡ್ಯ ಜಿಲ್ಲೆಯ ಋಣ ತೀರಿಸುವುದಾಗಿ ಪದೇ ಪದೇ ಹೇಳುತ್ತಿದ್ದರಾದರೂ ಕಳೆದೊಂದು ವರ್ಷದಿಂದ ಇವರು ಮಾಡಿರುವುದಾದರೂ ಏನು. ಇನ್ನೂ ನಾಲ್ಕು ವರ್ಷಗಳ ಕಾಲಾವಕಾಶ ಇದೆ. ಈಗಲಾದರೂ ಕೇಂದ್ರದಿಂದ ಅಭಿವೃದ್ಧಿ ಪೂರಕವಾದ ಯೋಜನೆ ತಂದು ಜನರ ಋಣ. ಅಭಿವೃದ್ಧಿಗೆ ನಾವೆಂದೂ ಅಡ್ಡಗಾಲು ಹಾಕುವುದಿಲ್ಲ. ನಾವು ಅಭಿವೃದ್ಧಿಪರವಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.