ಮಲೆನಾಡು ರೈತರ ಹೋರಾಟಕ್ಕೆ ಜೆಡಿಎಸ್ ಬೆಂಬಲ

| Published : Oct 27 2024, 02:02 AM IST

ಮಲೆನಾಡು ರೈತರ ಹೋರಾಟಕ್ಕೆ ಜೆಡಿಎಸ್ ಬೆಂಬಲ
Share this Article
  • FB
  • TW
  • Linkdin
  • Email

ಸಾರಾಂಶ

ಮಲೆನಾಡಿನ ರೈತರ ಭೂ ಸಮಸ್ಯೆ ಈಡೇರಿಕೆಗಾಗಿ ರೈತರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಗೆ ನಮ್ಮ ಸಂಪೂರ್ಣ ಸಹಕಾರ ಇದೆ ಎಂದು ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ತ್ಯಾಗರಾಜ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಸಾಗರ

ಮಲೆನಾಡಿನ ರೈತರ ಭೂ ಸಮಸ್ಯೆ ಈಡೇರಿಕೆಗಾಗಿ ರೈತರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಗೆ ನಮ್ಮ ಸಂಪೂರ್ಣ ಸಹಕಾರ ಇದೆ ಎಂದು ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ತ್ಯಾಗರಾಜ್ ತಿಳಿಸಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೆ ರೈತರು ಐದಾರು ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ರೈತರ ಬೇಡಿಕೆ ಈಡೇರಿಸುವತ್ತ ತಕ್ಷಣ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.ಶರಾವತಿ ಮುಳುಗಡೆ ಸಂತ್ರಸ್ತರದ್ದು ದೀರ್ಘಕಾಲದ ಬೇಡಿಕೆಯಾಗಿದೆ. ನಾಡಿಗೆ ಬೆಳಕು ನೀಡಿ ಅವರು ಕತ್ತಲಿನಲ್ಲಿ ವಾಸ ಮಾಡುತ್ತಿದ್ದಾರೆ. ಪ್ರತಿ ಚುನಾವಣೆ ಸಂದರ್ಭದಲ್ಲೂ ಶರಾವತಿ ಮುಳುಗಡೆ ಸಂತ್ರಸ್ತರ ಸಂಕಷ್ಟವನ್ನು ಚುನಾವಣಾ ವಿಷಯವಾಗಿ ಪರಿಗಣಿಸಿ ಅಧಿಕಾರಕ್ಕೆ ಬಂದ ಮೇಲೆ ಅದನ್ನು ಮರೆತು ಹೋಗುತ್ತಿದ್ದಾರೆ. ತಕ್ಷಣ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಹಕ್ಕು ನೀಡಬೇಕು ಎಂದು ಅವರು ಆಗ್ರಹಿಸಿದರು.

ಅರಣ್ಯವಾಸಿಗಳಿಗೆ ಹಕ್ಕುಪತ್ರ ನೀಡಲು ಕೇಂದ್ರ ಸರ್ಕಾರ ಕಾಯ್ದೆಗೆ ಅಗತ್ಯ ತಿದ್ದುಪಡಿ ಮಾಡಬೇಕು. ಸಣ್ಣ ಹಿಡುವಳಿದಾರರಿಗೆ ನೋಟಿಸ್ ನೀಡುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು. ಈ ಹಿನ್ನೆಲೆಯಲ್ಲಿ ಪಕ್ಷಾತೀತವಾಗಿ ರಾಜ್ಯದ ಸಂಸದರು ಕೇಂದ್ರದ ಮೇಲೆ ಒತ್ತಡ ತರಬೇಕು. ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರಿಗೂ ಈ ಬಗ್ಗೆ ಮನವಿ ಸಲ್ಲಿಸಲಾಗುತ್ತದೆ ಎಂದು ಹೇಳಿದರು. ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಕನ್ನಪ್ಪ ಬೆಳಲಮಕ್ಕಿ ಮಾತನಾಡಿ, ತಾಲೂಕಿನಲ್ಲಿ ಅತಿವೃಷ್ಟಿಯಿಂದ ಶೇ.75ರಷ್ಟು ಅಡಕೆ ಫಸಲು ನಷ್ಟವಾಗಿದೆ. ರಾಜ್ಯ ಸರ್ಕಾರ ತಕ್ಷಣ ಅಡಕೆ ಬೆಳೆಗಾರರಿಗೆ ಪರಿಹಾರ ನೀಡಬೇಕು. ಮುಳುಗಡೆ ಸಂತ್ರಸ್ತರು, ಬಗರ್ಹುಕುಂ ಸಾಗುವಳಿದಾರರು, ಅರಣ್ಯವಾಸಿಗಳಿಗೆ ಹಕ್ಕುಪತ್ರ ನೀಡುವತ್ತ ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಜೆಡಿಎಸ್ ಬೆಂಬಲ ನೀಡಿದೆ ಎಂದರು.

ಸೊರಬ ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯ ಸಂಪೂರ್ಣ ನಿಷ್ಕ್ರಿಯವಾಗಿದ್ದು ಶಾಸಕರು ಫ್ಲೆಕ್ಸ್ಗೆ ಸೀಮಿತರಾಗಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ನಗರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದರೂ ಈ ತನಕ ಅದು ಕಾರ್ಯಾರಂಭ ಮಾಡಿಲ್ಲ ಎಂದು ದೂರಿದರು.ಗೋಷ್ಠಿಯಲ್ಲಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಸಿದ್ದಪ್ಪ ಸದಸ್ಯತ್ವ ನೋಂದಾವಣೆಗೆ ಚಾಲನೆ ನೀಡಿದರು. ವಸಂತ್ ಶೇಟ್, ಜಯಲಕ್ಷ್ಮೀ ನಾರಾಯಣಪ್ಪ, ಜಯಲಕ್ಷ್ಮೀ ಕುಮಾರ್, ಸಂಗಯ್ಯ, ಉಮೇಶ್ ಸಿಗಂದೂರು ಹಾಜರಿದ್ದರು.