ಜೇಡರ ದಾಸಿಮಯ್ಯ ಅನುಭವಿ ಶರಣ: ಪಾಟೀಲ

| Published : Aug 12 2024, 01:06 AM IST

ಸಾರಾಂಶ

ನನಗ್ಯಾವ ಸಂಪತ್ತು ಬೇಕಿಲ್ಲ. ಸಂಪತ್ತು, ಭೂಮಿ, ಹೊಲಮನೆ, ರಾಜನ ಸ್ಥಾನ ಕೊಡುತ್ತೆಂದರೂ ಎಲ್ಲವನ್ನೂ ನಾನೊಲ್ಲೆ ಆದರೆ ಸಜ್ಜನ ಶರಣರ ವಚನ ತತ್ವಗಳು ತಮ್ಮ ಕಿವಿಗೆ ಬಿದ್ದರೆ ಸಾಕು ತಮ್ಮ ಬದುಕೆ ಸಾರ್ಥಕ

ಗದಗ: ಮನುಷ್ಯನ ಬದುಕಿಗೆ ಸ್ನೇಹ ಇಲ್ಲವೇ ಸಂಘವೆನ್ನುವುದು ಬಹುಮುಖ್ಯ. ಅದರಲ್ಲೂ ಆತ ಸಂಸ್ಕಾರವಂತನಾಗಲು ಆತನ ಸುತ್ತಮುತ್ತಲಿನ ಪರಿಸರ, ಸಂಘವೇ ಕಾರಣವಾಗಿರುತ್ತದೆ. 12ನೇ ಶತಮಾನದ ಶರಣರ ಬದುಕು ಅದ್ಭುತವಾದುದು. ಇಲ್ಲಿ ಎಲ್ಲ ಕಾಯಕ ವರ್ಗದವರಿದ್ದರು. ಅಂತವರಲ್ಲಿ ಜೇಡರ ದಾಸಿಮಯ್ಯನವರು ಎದ್ದು ಕಾಣುತ್ತಾರೆ ಎಂದು ಪ್ರಾ. ಬಿ.ಬಿ.ಪಾಟೀಲ ಹೇಳಿದರು.

ಅವರು ಬೆಟಗೇರಿಯ ಶ್ರೀನಾಲ್ವಡಿ ನೀಲಕಂಠಪಟ್ಟದಾರ್ಯ ಸ್ವಾಮಿಗಳು ಕುರುಹೀನಶೆಟ್ಟಿ ಸಮಾಜದ ಮೂಲ ಪೀಠಾಧೀಶ್ವರರ ಸನ್ನಿಧಿಯಲ್ಲಿ ನಡೆದ ವಚನ ಶ್ರಾವಣ 2024ರ 5ನೇ ದಿನದ ವಚನ ನಿರ್ವಚನ ಕಾರ್ಯಕ್ರಮದಲ್ಲಿ ಮಾತನಾಡಿ, ನೇಯುವ ಕಾಯಕದಲ್ಲಿದ್ದ ಅವರ 176 ವಚನಗಳು ದೊರಕಿವೆ. ಇವರ ಧರ್ಮಪತ್ನಿ ದುಗ್ಗಲೆ ಕೂಡಾ ಪತಿಯ ಜತೆಗೆ ವಚನ ರಚಿಸಿದ್ದಾರೆ. ಬಸವಣ್ಣನವರಿಗಿಂತ ತುಸು ಹಿರಿಯರಾದ ಜೇಡರ ದಾಸಿಮಯ್ಯನವರ ವಚನಗಳು ತೀರಾ ಸರಳವಾಗಿವೆ. ದಾಸಿಮಯ್ಯನವರು ಮನುಷ್ಯ ಸರಳವಾಗಿ ಜೀವಿಸಬೇಕು. ನನಗ್ಯಾವ ಸಂಪತ್ತು ಬೇಕಿಲ್ಲ. ಸಂಪತ್ತು, ಭೂಮಿ, ಹೊಲಮನೆ, ರಾಜನ ಸ್ಥಾನ ಕೊಡುತ್ತೆಂದರೂ ಎಲ್ಲವನ್ನೂ ನಾನೊಲ್ಲೆ ಆದರೆ ಸಜ್ಜನ ಶರಣರ ವಚನ ತತ್ವಗಳು ತಮ್ಮ ಕಿವಿಗೆ ಬಿದ್ದರೆ ಸಾಕು ತಮ್ಮ ಬದುಕೆ ಸಾರ್ಥಕವಾಗುತ್ತದೆಂದು ದಾಸಿಮಯ್ಯ ನುಡಿದಿದ್ದಾರೆ ಎಂದು ತಿಳಿಸಿದರು.

ಈ ವೇಳೆ ಕುರುಹಿನಶೆಟ್ಟಿ ಸಮಾಜದ ಮೂಲಪೀಠಾಧಿಶ್ವರ ಶ್ರೀನಾಲ್ವಡಿ ನೀಲಕಂಠ ಪಟ್ಟದಾರ್ಯ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಬಸವದಳದ ಅಧ್ಯಕ್ಷ ವಿ.ಕೆ. ಕರಿಗೌಡ್ರ ವಹಿಸಿದ್ದರು. ಎಂಜನೀಯರ್‌ ಎಂ.ಸಿ. ಐಲಿ, ದೇವಪ್ಪ ಗೋಟೂರ, ಬಸವರಾಜ ಗಣಪಾ, ಮಲ್ಲಿಕಾರ್ಜುನ ಕುದರಿ, ಬಿ.ಎಸ್. ಹಿಂಡಿ, ಜಕ್ಕಪ್ಪ ಕುಂಬಾರ ಇದ್ದರು. ಮಲ್ಲಿಕಾರ್ಜುನ ಐಲಿ ಸ್ವಾಗತಿಸಿದರು. ಪ್ರಕಾಶ ಅಸುಂಡಿ ನಿರೂಪಿಸಿದರು.