ಗ್ರಾಮೀಣ ಭಾಗದ ಕೂಲಿಕಾರರು ಗುಳೆ ಹೋಗುವುದನ್ನು ತಡೆದು ಸ್ಥಳೀಯವಾಗಿ ಒಂದು ಕುಟುಂಬಕ್ಕೆ 125 ದಿನಗಳ ಉದ್ಯೋಗ ಒದಗಿಸುವುದು ಯೋಜನೆಯ ಮುಖ್ಯ ಉದ್ದೇಶ

ಕೊಪ್ಪಳ: ರೈತರು ಹಾಗೂ ಕೂಲಿಕಾರರ ಆರ್ಥಿಕ ಸದೃಢತೆಗೆ ವಿಕಸಿತ ಭಾರತ ಜೀರಾಮ್‌ಜೀ ಯೋಜನೆ ಗ್ರಾಮೀಣ ಭಾಗಕ್ಕೆ ವರದಾನವಾಗಲಿದೆ ಎಂದು ಪಿಡಿಒ ಬಸವರಾಜ ಕಿರ್ದಿ ಹೇಳಿದರು.

ತಾಲೂಕಿನ ಬಹದ್ದೂರಬಂಡಿ ಗ್ರಾಪಂನಲ್ಲಿ ಮಂಗಳವಾರ ವಿಕಸಿತ ಭಾರತ ಜೀರಾಮ್‌ಜೀ (ಎಂಜಿಎನ್‌ಆರ್‌ಇಜಿಎ) ಕ್ರಿಯಾ ಯೋಜನೆ ಸಿದ್ಧಪಡಿಸುವ ಸಂಬಂಧ ಜರುಗಿದ ವಿಶೇಷ ಗ್ರಾಮಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಗ್ರಾಪಂ, ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ವೈಯಕ್ತಿಕ ಹಾಗೂ ಸಾರ್ವಜನಿಕ ಕಾಮಗಾರಿ ಕೈಗೊಳ್ಳಲು ಅವಕಾಶವಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ ಮಾತನಾಡಿ, ಗ್ರಾಮೀಣ ಭಾಗದ ಕೂಲಿಕಾರರು ಗುಳೆ ಹೋಗುವುದನ್ನು ತಡೆದು ಸ್ಥಳೀಯವಾಗಿ ಒಂದು ಕುಟುಂಬಕ್ಕೆ 125 ದಿನಗಳ ಉದ್ಯೋಗ ಒದಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.

ಪ್ರಸ್ತುತ ಯೋಜನೆಯಡಿ ಪ್ರತಿ ಮಾನವ ದಿನಕ್ಕೆ 382 ಕೂಲಿ ನಿಗದಿಪಡಿಸಲಾಗಿದ್ದು, ಜಾನುವಾರು ಶೆಡ್, ಮೇಕೆ ಶೆಡ್, ಕೃಷಿಹೊಂಡ, ಬದು ನಿರ್ಮಾಣ, ಕೋಳಿ ಶೆಡ್ ಸೇರಿದಂತೆ 318 ವಿಧದ ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ. ಜಮೀನು ಇಲ್ಲದವರು ಗ್ರಾಪಂ ಕೈಗೊಳ್ಳುವ ಸಾಮೂಹಿಕ ಕಾಮಗಾರಿಗಳಲ್ಲಿ ಭಾಗವಹಿಸಿ ಉದ್ಯೋಗ ಪಡೆದು ಆರ್ಥಿಕವಾಗಿ ಸಬಲರಾಗಬೇಕು. ಹೊಸದಾಗಿ ನೋಂದಾಯಿಸಿದ ಕುಟುಂಬಗಳಿಗೆ ಉದ್ಯೋಗ ಖಾತ್ರಿ ಕಾರ್ಡ್‌ಗಳನ್ನು ವಿತರಿಸಲಾಗುವುದು ಎಂದರು.

ಸಂಜೀವಿನಿ ಯೋಜನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಸುನೀಲ್ ಮಾತನಾಡಿ, ಸಂಜೀವಿನಿ ಸಂಘದ ಮಹಿಳೆಯರು ವೈಯಕ್ತಿಕ ಕಾಮಗಾರಿಗಳಿಗೆ ಆದ್ಯತೆ ನೀಡಿ ಯೋಜನೆಯ ಸೌಲಭ್ಯ ಪಡೆದು ಶಾಶ್ವತ ಆದಾಯ ಗಳಿಸಬೇಕು ಎಂದು ಸಲಹೆ ನೀಡಿದರು.

ಗ್ರಾಪಂ ಆಡಳಿತಾಧಿಕಾರಿ ನಾಗರತ್ನ ಅಧ್ಯಕ್ಷತೆ ವಹಿಸಿದ್ದರು. ಪಶುವೈದ್ಯಾಧಿಕಾರಿ ವಿನಯ ಅಂಗಡಿ, ತಾಂತ್ರಿಕ ಸಹಾಯಕ ಗುರುರಾಜ, ಶ್ರೀಟಿಪ್ಪು ಸುಲ್ತಾನ ಗ್ರಾಪಂ ಮಟ್ಟದ ಒಕ್ಕೂಟದ ಅಧ್ಯಕ್ಷೆ ರತ್ನಮ್ಮ ಹೊಸಳ್ಳಿ, ಎಂಬಿಕೆ ಶಕುಂತಲಾ, ಸಖಿ ಚಿನ್ನಮ್ಮ, ಗ್ರಾಪಂ ಸಿಬ್ಬಂದಿ ಮೆಹಬೂಬ, ಕನಕರಾಯ, ಗ್ರಾಮ ಕಾಯಕ ಮಿತ್ರ ಭಾಗ್ಯ ಹಾದಿಮನಿ, ರೈತರು, ಸಂಜೀವಿನಿ ಯೋಜನೆಯ ಒಕ್ಕೂಟದ ಮಹಿಳೆಯರು, ಕೃಷಿ ಗ್ರಾಮಸ್ಥರು, ಕಾಯಕ ಬಂಧುಗಳು ಹಾಗೂ ಗ್ರಾಮಸ್ಥರಿದ್ದರು.