ಚಿನ್ನಾಭರಣ ಅಂಗಡಿಯವರು ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಲಿ: ವಿನೋದ ರೆಡ್ಡಿ

| Published : Jul 06 2024, 12:47 AM IST

ಸಾರಾಂಶ

ಸಾಕಷ್ಟು ದುಡ್ಡು ಹಣ ಗಳಿಸಬೇಕು, ಶ್ರೀಮಂತರಾಗಬೇಕು ಆಸೆಯಿರುವುದು ಸಹಜ. ಆದರೆ ಈ ಆಸೆಯು ದುರಾಸೆಯತ್ತ ಹೆಜ್ಜೆಯಿಡಬಾರದು.

ಹಳಿಯಾಳ: ಹಣ ಸಂಪಾದನೆ ಮಾಡುವ ದುರಾಸೆಗೆ ಸಾಕಷ್ಟು ಚಿನ್ನಾಭರಣ ವರ್ತಕರು ವಂಚನೆಗೊಳಗಾಗುವ ಪ್ರಕರಣಗಳು ನಡೆದಿವೆ. ಅದಕ್ಕಾಗಿ ಅಪರಿಚಿತರು ಅಥವಾ ಸಂದೇಹಾಸ್ಪದ ವ್ಯಕ್ತಿಗಳು ವಹಿವಾಟು ಮಾಡಲು ಬಂದಲ್ಲಿ ಪೊಲೀಸ್ ಇಲಾಖೆಯ ಗಮನಕ್ಕೆ ತನ್ನಿ ಎಂದು ಪಿಎಸ್ಐ ವಿನೋದ ರೆಡ್ಡಿ ಮನವಿ ಮಾಡಿದರು.

ಇಲ್ಲಿನ ಠಾಣೆಯಲ್ಲಿ ಆಯೋಜಿಸಿದ್ದ ಚಿನ್ನಾಭರಣ ವ್ಯಾಪಾರಸ್ಥರ ಸಭೆಯಲ್ಲಿ ಮಾತನಾಡಿ, ಸಾಕಷ್ಟು ದುಡ್ಡು ಹಣ ಗಳಿಸಬೇಕು, ಶ್ರೀಮಂತರಾಗಬೇಕು ಆಸೆಯಿರುವುದು ಸಹಜ. ಆದರೆ ಈ ಆಸೆಯು ದುರಾಸೆಯತ್ತ ಹೆಜ್ಜೆಯಿಡಬಾರದು. ಅದ್ದರಿಂದ ಸಂಪಾದನೆಗೆ ಅಡ್ಡ ದಾರಿ ಹಿಡಿಯುವುದು ಸರಿಯಲ್ಲ. ಚಿನ್ನಾಭರಣ ವ್ಯಾಪಾರಸ್ಥರು ಕಾನೂನುಬದ್ಧವಾಗಿ ವಹಿವಾಟು ಮಾಡಿ. ಇದರಿಂದ ನಿಮಗೂ ಲಾಭದ ಜತೆಗೆ ನೆಮ್ಮದಿ ಸಿಗಲಿದೆ ಎಂದರು. ನಿಮ್ಮ ಯಾವುದೇ ಸಮಸ್ಯೆಗಳಿದ್ದಲ್ಲಿ ಇಲಾಖೆಯ ಗಮನಕ್ಕೆ ತನ್ನಿ. ಇಲಾಖೆ ನಿಮಗೆ ಸಹಕರಿಸಲು ಸದಾ ಸಿದ್ಧವಿದೆ ಎಂದರು.

ಎಲ್ಲ ಚಿನ್ನಾಭರಣ ವ್ಯಾಪಾರಸ್ಥರು ತಮ್ಮ ಅಂಗಡಿಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಅಲ್ಲದೇ ಕಡ್ಡಾಯವಾಗಿ ಸಿಸಿ ಕ್ಯಾಮೆರಾವನ್ನು ಅಂಗಡಿ ಎದುರಿನ ರಸ್ತೆಯ ಎರಡೂ ಬದಿಯಲ್ಲಿ ಸಾರ್ವಜನಿಕರ ಓಡಾಟ ಸಂಚಾರ ಸೆರೆ ಹಿಡಿಯುವ ಹಾಗೇ ಹಾಕಬೇಕು ಎಂದರು.ಸಭೆಯಲ್ಲಿ ಹಳಿಯಾಳ ತಾಲೂಕು ಚಿನ್ನಾಭರಣ ವ್ಯಾಪಾಸ್ಥರ ಸಂಘದ ಅಧ್ಯಕ್ಷ ವಿನಾಯಕ ತಿಗಡಿಕರ, ಉಪಾಧ್ಯಕ್ಷ ಪ್ರಕಾಶ ಗಡಕರ, ಕಾರ್ಯದರ್ಶಿ ವಿಕ್ಕಿ ಬೈಕೆರಿಕರ, ಆನಂದ ದೇವಕಾರಿ, ಅಶೋಕ ಕಾಡೋಲಕರ, ಸಚಿನ್ ವೆರ್ಣೆಕರ ಇತರರು ಇದ್ದರು.