ಸಾರಾಂಶ
ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ಮುಂಗಾರು ಮಳೆ ಉತ್ತಮವಾಗಿ ಆಗುತ್ತಿರುವುದರಿಂದ ಕಬಿನಿ ಜಲಾಶಯವು ಕಳೆದ ವರ್ಷಕ್ಕಿಂತಲೂ ಈ ವರ್ಷ ಬೇಗ ಭರ್ತಿಯಾಗಿರುವುದರಿಂದ ಕಬಿನಿ ಬಲ ದಂಡೆ ನಾಲೆಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕೆಂದು ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಶುಕ್ರವಾರ ರೈತ ಮುಖಂಡರ ಸಭೆಯನ್ನು ನಡೆಸಿದ ಬಳಿಕ ಮಾತನಾಡಿದ ಅವರು, ಕೇರಳದ ವೈನಾಡಿನಲ್ಲಿ ಉತ್ತಮ ಮಳೆ ಆಗುತ್ತಿದ್ದು, ಈಗಾಗಲೇ ಕಬಿನಿ ಜಲಾಶಯದ ನೀರಿನ ಮಟ್ಟ ಗರಿಷ್ಠ ಮಟ್ಟವನ್ನು ತಲುಪಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕಬಿನಿ ಜಲಾಶಯ ಬಲದಂಡೆ ನಾಲೆಯ ಅಚ್ಚುಕಟ್ಟು ಭಾಗದ ರೈತರ ಜಮೀನುಗಳಿಗೆ ನೀರನ್ನು ಕೊಡದ ಸರ್ಕಾರ ರಾಜ್ಯದ ರೈತರನ್ನು ಕಡೆಗಣಿಸಿ ತಮಿಳುನಾಡಿಗೆ ರಾಜಕೀಯ ಹಿತಾಶಕ್ತಿಗೆ ನಿರಂತರವಾಗಿ ನೀರು ಹರಿಸಲಾಯಿತು ಎಂದು ಆರೋಪಿಸಿದರು.
ಇದುವರೆಗೂ ರಾಜ್ಯವನ್ನು ಆಳುವ ಸರ್ಕಾರಗಳು ರಾಜ್ಯದ ರೈತರಿಗೆ ತುಂಬಲಾರದ ನಷ್ಟವನ್ನುಂಟುಮಾಡಿವೆ. ಆದ್ದರಿಂದ ರೈತರು ಬೆಳೆಯನ್ನು ಬೆಳೆಯದೆ ತುಂಬಾ ಸಂಕಷ್ಟದಲ್ಲಿದ್ದಾರೆ.ಕಬಿನಿ ಅಚ್ಚುಕಟ್ಟು ಭಾಗದ ರೈತರು ಎರಡು ವರ್ಷಗಳಿಂದ ನೀರಿಲ್ಲದೆ ಜೀವನ ಸಾಗಿಸುವುದು ತುಂಬಾ ದುಸ್ತರವಾಗಿದೆ. ಅಲ್ಲದೆ ಮೇವು ಇಲ್ಲದೆ ದನ-ಕರುಗಳ ಸಾಕಾಣಿಕೆಯಲ್ಲಿ ತುಂಬಾ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕಬಿನಿ ಬಲದಂಡೆ ನಾಲೆಯಲ್ಲಿ ನೀರು ಹರಿಯದ ಕಾರಣ ಅಂತರ್ಜಲ ಕುಸಿದು ರೈತರ ಕೃಷಿ ಪಂಪು ಸೆಟ್ಗಳಲ್ಲಿ ನೀರಿಲ್ಲದೆ ಅಲ್ಪಸ್ವಲ್ಪ ಬಾಳೆ, ಕಬ್ಬು, ತರಕಾರಿ ಒಣಗಿ ಹೋಗಿದ್ದು, ರೈತರು ಜೀವನ ಸಾಧಿಸುವುದೇ ಕಷ್ಟವಾಗಿದೆ ಎಂದು ಅವರು ದೂರಿದರು.
ಜು. 18ರಂದು ಜಾಗೃತಿ ಸಮಾವೇಶಜಿಲ್ಲಾ ಕಾರ್ಯಾಧ್ಯಕ್ಷ ಕಿರಗಸೂರು ಶಂಕರ್ ಮಾತನಾಡಿ, ಎರಡು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಣ್ಣಾರಿ ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವ ಕಾರ್ಯವನ್ನು ಪ್ರಾರಂಭ ಮಾಡುವ ಮೊದಲು ಕಳೆದ ವರ್ಷದ ಬಾಕಿ ಹಣ ಹಾಗೂ ಈ ವರ್ಷದ ಉಪ ಉತ್ಪನ್ನಗಳ ಲಾಭವನ್ನು ಹಂಚಿಕೆ ಮಾಡಬೇಕು ಎಂದು ಕಾರ್ಖಾನೆ ಮುಂಭಾಗ ಜು. 18ರಂದು ಜಾಗೃತಿ ಸಮಾವೇಶವನ್ನು ಕಬ್ಬು ಬೆಳೆಗಾರ ಸಂಘದ ರಾಜ್ಯ ಅಧ್ಯಕ್ಷ ಕುರುಬೂರು ಶಾಂತಕುಮಾರ್ ರವರ ನೇತೃತ್ವದಲ್ಲಿ ಏರ್ಪಡಿಸಲಾಗಿದೆ. ಆದ್ದರಿಂದ ಈ ಸಮಾವೇಶಕ್ಕೆ ಕಬ್ಬು ಬೆಳೆಗಾರ ರೈತರು ಸ್ವಯಂ ಪ್ರೇರಿತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಪ್ರಧಾನ ಕಾರ್ಯದರ್ಶಿ ಪ್ರಸಾದ್ ನಾಯಕ, ಸಂಘಟನಾ ಕಾರ್ಯದರ್ಶಿ ಪ್ರದೀಪ್, ಜಿಲ್ಲಾ ಜಂಟಿ ಕಾರ್ಯದರ್ಶಿ ಬಿ.ಪಿ. ಪರಶಿವಮೂರ್ತಿ, ಟೌನ್ ಅಧ್ಯಕ್ಷ ಅಪ್ಪಣ್ಣ, ಸೂರಿ, ರಾಜೇಶ್, ಉಮೇಶ್, ಕುಮಾರ್, ಲಿಂಗರಾಜು, ಯೋಗೀಶ, ಗೌರಿಶಂಕರ ಇದ್ದರು.