ಜಿಮ್ಸ್‌, ಜಯದೇವ ಆಸ್ಪತ್ರೆಗಳಲ್ಲಿ ನೀರಿನ ಹಾಹಾಕರ!

| Published : Jun 19 2024, 01:09 AM IST

ಸಾರಾಂಶ

ಗುಲ್ಬರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ ಜಿಮ್ಸ್‌ ಆಸ್ಪತ್ರೆ ಹಾಗೂ ಅದೇ ಆವರಣದಲ್ಲಿರುವ ಜಯದೇವ ಹೃದ್ರೋಗ ವಿಜ್ಞಾನ ಸಂಶೋಧನಾ ಸಂಸ್ಥೆಗೆ ಕಳೆದ 15 ದಿನದಿಂದ ತೀವ್ರ ನೀರಿನ ಕೊರತೆ ಕಾಡುತ್ತಿರೋದರಿಂದ ತುರ್ತು ಶಸ್ತ್ರ ಚಿಕಿತ್ಸೆ ಸೇರಿದಂತೆ ಹೊರತು ಪಡಿಸಿ, ಇನ್ನುಳಿದಂತೆ ಹಲವು ಸ್ವರೂಪದ ಶಸ್ತ್ರ ಚಿಕಿತ್ಸೆಗಳನ್ನು ಇವರೆಡೂ ಸಂಸ್ಥೆಗಳಲ್ಲಿ ಮುಂದೂಡಲಾಗಿದೆ.

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ನಗರದಲ್ಲಿರುವ ಗುಲ್ಬರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ ಜಿಮ್ಸ್‌ ಆಸ್ಪತ್ರೆ ಹಾಗೂ ಅದೇ ಆವರಣದಲ್ಲಿರುವ ಜಯದೇವ ಹೃದ್ರೋಗ ವಿಜ್ಞಾನ ಸಂಶೋಧನಾ ಸಂಸ್ಥೆಗೆ ಕಳೆದ 15 ದಿನದಿಂದ ತೀವ್ರ ನೀರಿನ ಕೊರತೆ ಕಾಡುತ್ತಿರೋದರಿಂದ ತುರ್ತು ಶಸ್ತ್ರ ಚಿಕಿತ್ಸೆ ಸೇರಿದಂತೆ ಹೊರತು ಪಡಿಸಿ, ಇನ್ನುಳಿದಂತೆ ಹಲವು ಸ್ವರೂಪದ ಶಸ್ತ್ರ ಚಿಕಿತ್ಸೆಗಳನ್ನು ಇವರೆಡೂ ಸಂಸ್ಥೆಗಳಲ್ಲಿ ಮುಂದೂಡಲಾಗಿದೆ.

ಆಸ್ಪತ್ರೆಯ ನಿತ್ಯದ ದಿನಚರಿ ಸಾಗಿಸಿಕೊಂಡು ಹೋಗಲು ಕಸರತ್ತಿಗೆ ಇಳಿದಿರುವ ಇಲ್ಲಿನ ಆಡಳಿತ ಮಂಡಳಿ 20 ಲೀಟರ್‌ನ ಕ್ಯಾನ್‌ಗಳ ಖರೀದಿಸುತ್ತ ನೀರಿನ ತನ್ನ ಬೇಡಿಕೆ ಪೂರೈಸಿಕೊಳ್ಳಲು ಹರಸಾಹಸ ಪಡುತ್ತಿದೆ.

ಇದಲ್ಲದೆ ಇವೆರಡೂ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಒಳ ರೋಗಿಗಳ ಸಹಾಯಕರು, ರೋಗಿಗಳು ಎಲ್ಲರೂ ಕುಡಿಯಲು ಶುದ್ಧ ನೀರಿನ ಸವಲತ್ತಿಲ್ಲದೆ ಪರದಾಡುತ್ತಿದ್ದು, ನಿತ್ಯ ಹತ್ತಾರು ಬಾಟಲ್‌ ನೀರು, ಕ್ಯಾನ್‌ ನೀರು ಖರೀದಿಸುವ ಅನಿವಾರ್ಯತೆ ಎದುರಿಸುತ್ತಿದ್ದಾರೆ.

ಶೌಚ ಹಾಗೂ ಸ್ನಾದ ಗೃಹಗಳ ಬಾಗಿಲು ಬಂದ್‌: ಜಿಮ್ಸ್‌ ಹಾಗೂ ಜಯದೇವಕ್ಕೆ ಎಲ್‌ ಆಂಡ್‌ ಟಿ ಕಂಪನಿ ನಿತ್ಯ ನೀರು ಪೂರೈಕೆ ಮಾಡುತ್ತಿದ್ದರೂ ಈಚೆಗಿನ 1 ವಾರದಿಂದ ಮಳೆಯಾಗುತ್ತಿದ್ದು ಭೀಮಾ ನದಿಗೆ, ಬೆಣ್ಣೆತೊರಾ ನದಿಗೆ ಎರಡಕ್ಕೂ ಮಣ್ಣು ಮಿಶ್ರಿತ ರಾಡಿ ನೀರು ಹರಿದು ಬರುತ್ತಿದೆ. ಇದೇ ಕಾರಣಕ್ಕಾಗಿ ನಗರದಲ್ಲಿಯೂ ಕಳೆದ 1 ವಾರದ ಕಾಲ ನೀರಿನ ಪೂರೈಕೆ ಸ್ಥಗಿತಮಾಡಲಾಗಿತ್ತು. ಇದೇ ಕಾರಣದಿಂದ ಇವೆರಡೂ ಆಸ್ಪಜ್ಬೊತ್ರೆಗಳಿಗ ನೀರಿನ ಪೂರೈಕೆ ಸ್ಥಗಿತ ಮಾಡಲಾಗಿದ್ದು ಇದು ರೋಗಿಗಳ ಪಾಲಿಗೆ ತೊಂದರೆಯಾಗಿ ಕಾಡುತ್ತಿದೆ.

ನೀರಿನ ಕೊರತೆಯಿಂದಾಗಿ ಆಸ್ಪತ್ರೆಯಲ್ಲಿ ರೋಗಿಗಳು, ರೋಗಿಗಳ ಸಹಾಯಕರು ಕುಡಿಯುವ ನೀರಿನ ಸವಲತ್ತಿಲ್ಲದೆ ಬಳಲುವಂತಾಗಿದೆ. ಆಸ್ಪತ್ರೆಯಲ್ಲಿರುವ ಶೌಚಾಲಯ , ಸ್ನಾನದ ಗೃಹಗಳನ್ನೂ ಬಂದ್‌ ಮಾಡಲಾಗಿದೆ.

ಜಿಮ್ಸ್‌ನಲ್ಲಿ ನಿತ್ಯ 500 ಕ್ಕಿಂತ ಹೆಚ್ಚು ಹೊರರೋಗಿಗಳು, 200 ಕಕಿಂತ ಅಧಿಕ ಒಳ ರೋಗಿಗಳು ದಾಖಲಾಗುತ್ತಾರೆ. 3 ಪಾಾಳಿಯಲ್ಲಿ 1 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಾರೆ. ನಿತ್ಯ ಶಸ್ತ್ರಚಿಕಿತ್ಸೆ ಉಪಕರಣ ಸ್ವಚ್ಚತೆ ಸೇರಿದಂತೆ ಅಗತ್ಯ ಕೆಲಸಗಳಿಗೆ, ಶೌಚಾಲಯ, ಬಟ್ಟೆ ತೊಳೆಯೋದು, ಶ್ನಾನ, ಶೌಚಗ್ರಹಗಳಿಗೆಲ್ಲ ಸೇರಿ ನಿತ್ಯ 1. 75 ಲಕ್ಷದಷ್ಟು ನೀರಿನ ಅಗತ್ಯವಿದೆ.

ಆದರೆ ಕಳೆದೊಂದು ವಾರದಿಂದ ಈ ಅಗತ್ಯದಷ್ಟು ಪ್ರಮಾಣದಲ್ಲಿ ನೀರು ಆಸ್ಪತ್ರೆಗಳಿಗೆ ಪೂರೈಕೆಯಾಗುತ್ತಿಲ್ಲ. ಇದರಿಂದಾಗಿ ನೀರಿನ ಹಾಹಾಕಾರ ತಲೆದೋರಿದೆ.

ಎಮರ್ಜೆನ್ಸಿ ಸರ್ಜರಿಗೆ 20 ಲೀಟರ್‌ ನೀರಿನ ಕ್ಯಾನ್‌ ಬಳಕೆ: ಇಲ್ಲಿ ಕಳೆದೊಂದು ವಾರದಿಂದ ನೀರಿನ ಕ್ಯಾನ್‌ ಖರೀದಿಸಿ ನೀರನ್ನು ಬಳಸಲಾಗುತ್ತಿದೆ. ತುರ್ತು ಶಸ್ತ್ರ ಚಿಕಿತ್ಸೆಗಳಿಗೆ ಇವೇ ನೀರನ್ನು ಬಳಸಲಾಗುತ್ತಿದೆ. ಇವೆರಡೂ ಆಸ್ಪತ್ರೆಯ ಎಲ್ಲಾ ವಾರ್ಡ್‌ಗಳಲ್ಲಿ ಮೂಲೆಗಳಲ್ಲೆಲ್ಲಾ ನೀರು ಸಂಗ್ರಹಿಸಲು ಬ್ಯಾರೆಲ್‌ ಇಡಲಾಗಿದೆ. ನೀರಿನ ಕ್ಯಾನ್‌ ನೂರಾರು ಸಂಖ್ಯೆಯಲ್ಲಿ ನಿತ್ಯ ಖರೀದಿಸುವ ಕೆಲಸವೂ ಸಾಗಿದೆ.

ಬಳಕೆಗೆ ಯೋಗ್ಯವಲ್ಲದ ನೀರು ಆಸ್ಪತ್ರೆಗೆ ಪೂರಾಕೆಯಾಗುತ್ತಿದೆ. ನೀರು ಹೀಗೇ ಇರಬೇಕು ಎಂಬ 21 ಮಾನದಂಡಗಳಲ್ಲಿ 7, 8 ಮಾನದಂಡಗಳೂ ಹೊಂದಕೆಯಾಗುತ್ತಿಲ್ಲ, ಅಂತಹ ನೀರು ಪೂರೈಕೆ ಶುರುವಾದಾಗ ಆ ನೀರು ಪೂರೈಕೆಗೆ ಆಸ್ಪತ್ರೆಯ ಆಡಳಿತ ಮಂಡಳಿಯೇ ಆಕ್ಷೇಪಿಸಿದೆ. ಇದೀಗ ಎಲ್‌ ಆಂಡ್‌ ಟಿ ನಿತ್ಯ 7, 8 ಟ್ಯಾಂಕರ್‌ ನೀರು ಪೂರೈಸುತ್ತಿದ್ದರೂ ಅದು ಯಾತಕ್ಕೂ ಸಾಲುತ್ತಿಲ್ಲ.

ನಿತ್ಯ ಉಭಯ ಆಸ್ಪತ್ರೆಗಳ ಕೆಲಸ ಕಾರ್ಯಗಳಿಗೆ 1. 50 ಲಕ್ಷ ಲೀಟರ್‌ ನೀರು ಬೇಕು. ಟ್ಯಾಂಕರ್‌ ಮೂಲಕ ಕೇವಲ 30 ಸಾವಿರ ಲೀಟರ್‌ ನೀರು ಪೂರೈಕೆಯಾಗುತ್ತಿದ್ದು ಇದು ಆಸ್ಪತ್ರೆಯ ದಿನಚರಿ ಮೇಲೆಯೇ ಕೆಟ್ಟ ಪರಿಣಾಮ ಬೀರಿದೆ. ಹೀಗಾಗಿ ಇಲ್ಲಿನ ಆಸ್ಪತ್ರೆ ಆಡಳಿತ ಮಂಡಳಿ, ನಿರ್ದೇಶಕರೆಲ್ಲರೂ ಸೇರಿಕೊಂಡು ತುರ್ತು ಶಸ್ತ್ರ ಚಿಕಿತ್ಸೆಗಳು ನಿಲ್ಲಬಾರದು ಎಂದು 20 ಲೀಟರ್ ಕ್ಯಾನ್ ನೀರನ್ನು ಖರೀದಿ ತಂದು ಶಸ್ತ್ರ ಚಿಕಿತ್ಸೆಗಳನ್ನು ಕೈಗೊಳ್ಳಲಾಗುತ್ತಿದೆ.

ತುರ್ತು ಅಲ್ಲದ ಶಸ್ತ್ರ ಚಿಕಿತ್ಸೆಗಳನ್ನು ವೈದ್ಯರು ಮುಂದೂಡಿದ್ದಾರೆ, ನೀರಿನ ಸವಲತ್ತು ಸರಿಯಾದಾಗ ಇಂತಹ ಎಲ್ಲಾ ಚಿಕಿತ್ಸಾ ಕ್ರಮಗಳನ್ನು ಕೈಗೊಳ್ಳೋಣವೆಂದು ರೋಗಿಗಳಿಗೆ ತಿಳಿ ಹೇಳುತ್ತಿದ್ದಾರೆ.

ಈ ಸುದ್ದಿ ತಿಳಿಯುತ್ತಿದ್ದಂತೆಯೇ ಇಂದು ಜಿಮ್ಸ್‌, ಜಯದೇವಕ್ಕೆ ಭೇಟಿ ನೀಡಿ ರೋಗಿಗಳೊಂದಿಗೆ ಮಾತುಕತೆ ನಡೆಸಿದ್ದಲ್ಲದೆ ಆಡಳಿತ ಮಂಡಳಿಯವರ ಜೊತೆಗೂ ಸಭೆ ನಡೆಸಿರುವ ಡಿಸಿ ಫೌಜಿಯಾ ತರನ್ನುಮ್‌ ಅಗತ್ಯ ನೀರು ಪೂರೈಕೆಗೆ ಸೂಚಿಸಿದ್ದಾರೆ. ಜಿಮ್ಸ್‌ನಲ್ಲಿ ನಿತ್ಯ 1,500 ರಿಂದ 600ರಷ್ಟು ಹೊರ ರೋಗಿಗಳು ಬಂದು ಹೋಗುತ್ತಾರೆ. 50ರಿಂದ 200 ಒಳ ರೋಗಿಗಳಿದ್ದಾರೆ. ಈವರೆಗೂ 299 ವಾಟರ್‌ ಕ್ಯಾನ್‌ ಪೂರೈಕೆಯಾಗಿದೆ. ನೀರಿಲ್ಲಂತ ಯಾವುದೇ ಚಿಕಿತ್ಸೆ ನಿಲ್ಲಿಸಿಲ್ಲ. ಪರ್ಯಾಯ ವ್ಯವಸ್ಥೆ ಮಾಡಿದ್ದೇವೆ. ಗಲೀಜು ನೀರು ಬಂದಾಗ ಫಿಲ್ಟರ್‌ ಯಂತ್ರೋಪಕರಣ ಕೆಲಸ ನಿಲ್ಲಿಸುತ್ತವೆ. ಹೀಗಾಗಿ ಇಲ್ಲಿ ಸಮಸ್ಯೆ ಕಾಡುತ್ತಿದೆ.

- ಡಾ. ಶಿವಕುಮಾರ್‌ ಸಿಎಚ್‌, ನಿರ್ದೇಶಕರು, ಜಿಮ್ಸ್‌ ಆಸ್ಪತ್ರೆ, ಕಲಬುರಗಿ

-------------

ಜಿಮ್ಸ್‌ ಆಸ್ತ್ರೆ ಹಾಗೂ ಜಯದೇವದಲ್ಲಿ ನೀರಿನ ಬರ ಕಾುತ್ತಿರೋದು ಗಮನಕ್ಕೆ ಬಂದ ತಕ್ಷಣ ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸಿದ್ದೇನೆ. ನೀರಿನ ಸಮಸ್ಯೆ ನಿವಾರಣೆಗೇ ಅಲ್ಲಿ 20 ಲಕ್ಷ ಲೀಟರ್‌ನ ಸಂಪ್‌ ಇದೆ. ಅದು ಸರಿಯಾಗಿ ಬಳಕೆಯಾಗುತ್ತಿದೆಯೋ ಇಲ್ಲವೋ ಗಮನಿಸಬೇಕಾಗಿದ. ಅಗತ್ಯ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿರುವೆ.

- ಡಾ. ಶರಣಪ್ರಕಾಶ ಪಾಟೀಲ್‌, ವೈದ್ಯಕೀಯ ಶಿಕ್ಷಣ ಸಚಿವರು.

------------

ಜಯದೇವಕ್ಕೆ ಅಲ್ಪ ನೀರಿನ ಸಮಸ್ಯೆ ಆಗಿದ್ದು ಸತ್ಯ, ಆದ್ರೆ ಅಗತ್ಯ ಇರುವ ಸರ್ಜರಿ ಯಾವುದನ್ನೂ ಮುಂದೂಡಲಾಗಿಲ್ಲ. ನೀರಿಲ್ಲವೆಂದು ಯಾವುದೇ ಚಿಕಿತ್ಸೆ ನಿರಾಕರಿಸಿಲ್ಲ. ಇಲ್ಲಿ ನೀರಿನ ಸರಿಯಾದ ನಿರ್ವಹಣೆಯಾಗುತ್ತಿಲ್ಲ. ಹೀಗಾಗಿಈ ತೊಂದರೆ ಕಾಡಿದೆ. ಈಗ ಎಲ್ಲವೂ ಬಗೆಹರಿಸಲು ಅಗತ್ಯ ಸೂಚನೆ ನೀಡಿದ್ದೇನೆ. ಇಲ್ಲಿರುವ ಸಂಪು ಬಳಕೆಯಾದಲ್ಲಿ ವಾರ್ಡ್‌ಗಳಲ್ಲೆಲ್ಲಾ ಬ್ಯಾರೆಲ್‌ ಇಡೋ ಪರಿಸ್ತಿತಿ ಬರೋದಿಲ್ಲ. ನೀರು ಪೂರೈಕೆಗೆ ಪಾಲಿಕೆಗೆ ಸೂಚಿಸಲಾಗಿದೆ. ಈಗಾಗಾಲೇ ನಿತ್ಯ 9 ಟ್ಯಾಂಕರ್ ಮೂಲಕ 2 ಲಕ್ಷ ಲೀಟರ್ ನೀರು ಪೂರೈಕೆ ಮಾಡಲಾಗುತ್ತಿದೆ. ಇನ್ನೂ ಅಗತ್ಯ ಅನ್ನಿಸಿದ್ರೆ ಹೆಚ್ಚುವರಿ ನೀರು ಪೂರೈಸಲು ಸೂಚಿಸಿದ್ದೇನೆ

- ಬಿ. ಫೌಜಿಯಾ ತರನ್ನುಮ್‌, ಜಿಲ್ಲಾಧಿಕಾರಿ, ಕಲಬುರಗಿ

-----------

ನೀರ ಸಿಲ್ಲಾಗ್ಯಾವ ಇಲ್ಲಿ, 30 ರುಪಾಯಿಗೆ 1 ಬಾಟಲ್‌ನಂತೆ ಕೆಳಗೆ ಹೋಗಿ ಖರೀದಿ ತರ್ಲಕತ್ತೀವ್ರಿ, 4 ದಿನವಾಯ್ತು. ಈ ಸಮಸ್ಯೆ ನಮ್ಮನ್ನು ಕಾಡುತ್ತಿದೆ. ದಮ್ಮ ಬರ್ಲಕತ್ತದಂತ ನಮ್ಮ ರೋಗಿಗಳು ದವಾಖಾನ್ಯಾಗ ಅಡ್ಮಿಟ್‌ ಇದ್ದಾರ್ರಿ. ಕುಡಿಲಿಕ್ಕ, ಟಾಯ್ಲೆಟ್ಟಿಗ ಎಲ್ಲಾ ಖರೀದಿತಂದೇ ನೀರು ಬಳಸೋದು ಆಗಿದೆ. ಟ್ಯಾಂಕರ್‌ ನೀರು ಗಲೀಜು ಅದಾವ್ರಿ. ಸಮಸ್ಯೆ ಹಂಗೇ ಮುಂದುವರಿದಿದ್ದು ನಮಗ ಬಕ್ಳ ತೊಂದರೆ ಕಾಡ್ಲಿಕತ್ತದರಿ.

- ಸಂಗಣ್ಣ, ಜಯದೇವ ಆಸ್ಪತ್ರೆ ಒಳ ರೋಗಿಯ ಸಹಾಯಕ

---------

ಪಾಲಿಕೆ ನೀರು ಪೂರೈಕೆಯಲ್ಲಿ ಸಮಸ್ಯೆಯಾಗಿದ್ದರಿಂದ ಪೂರೈಕೆಯೇ ಬಂದ್‌ ಆಗಿದೆ. ಗಲೀಜು ನೀರು ಬಂದಾಗ ಫಿಲ್ಟರ್‌ಗೂ ಆಗಲಿಲ್ಲ. ತುಂಬ ಗಲೀಜು ನೀರು ಬರ್ತಾ ಇದ್ದಾಗ ನಾವು ಆಪರೇಷನ್‌ ಸ್ಟಾಪ್‌ ಮಾಡಿದ್ದೀವಿ, ಓಪನ್‌ ಹಾರ್ಟ್‌ ಸರ್ಜರಿ ಮಾಡಿದಾಗ ರೋಗಿಗೆ ಸೋಂಕು ಆಗಬಾರದು. ನಾವು ಅಲ್ಲಿ ಕಾಳಜಿ ತಗೆಬೇಕಾಗುತ್ತದೆ. ನಮ್ಮನಿರ್ದೇಶಕರಿಗೂ ನಾವು ಮಾತನಾಡಿದ್ದೇವೆ. ನಾಲ್ಕಾರು ದಿನ ಸಮಸ್ಯೆ ಬಗೆ ಹರೀಲಿ, ರೋಗಿಗೆ ಸೋಂಕು ಆಗೋದು ಬೇಡ ಅಂತ ಓಟಿ ನಿಲ್ಲಿಸಲಾಗಿದೆ. ಜೂ. 20 ರಿಂದ ಪುನಃ ಆರಂಭಕ್ಕೆ ಚಿಂತನೆ ಮಾಡಿದ್ದೇವೆ.

- ಡಾ. ವಿರೇಶ ಪಾಟೀಲ್‌, ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆ ಕಲಬುರಗಿ