ಸಾರಾಂಶ
ಈ ಆ್ಯಪ್ ಮೂಲಕ ನೋಂದಾಯಿತ ಸದಸ್ಯರು ತಂತ್ರಜ್ಞಾನದ ಬಳಕೆ, ವಿಶೇಷವಾಗಿ ಮೊಬೈಲ್ ಅಪ್ಲಿಕೇಶನ್‌ಗಳು, ಸೈಬರ್ ಸುರಕ್ಷತೆ ಕುರಿತು ವಿಷಯಗಳನ್ನು ಇದರಲ್ಲಿ ಪಡೆಯಬಹುದು. ಇದು ಕಲ್ಯಾಣ ಇಲಾಖೆಗಳು ಮತ್ತು ಸಂಘಗಳು ತಮ್ಮ ಅಧಿಸೂಚನೆಗಳನ್ನು ಹಂಚಿಕೊಳ್ಳಲು ಕೂಡ ಸಹಾಯ ಮಾಡುತ್ತದೆ.
ಕನ್ನಡಪ್ರಭ ವಾರ್ತೆ ಉಡುಪಿ
ಮಾಹೆಯ ಸಂಶೋಧನಾ ತಂಡವು, ಹಿರಿಯ ನಾಗರಿಕರಿಗೆ ತಂತ್ರಜ್ಞಾನದ ಅರಿವು ಮೂಡಿಸಲು ವಿನ್ಯಾಸಗೊಳಿಸಲಾಗಿರುವ ಜ್ಞಾನ4ಸೀನಿಯರ್ಸ್ ಆ್ಯಪನ್ನು ಅಜ್ಜರಕಾಡಿನ ಹಿರಿಯ ನಾಗರಿಕರ ಸಂಸ್ಥೆಯಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನ ಬಿಡುಗಡೆಮಾಡಿದರು.ನಂತರ ಮಾತನಾಡಿದ ಅವರು, ಈ ಆ್ಯಪ್ ವಿಭಿನ್ನವಾಗಿದ್ದು, ಹಿರಿಯ ನಾಗರಿಕರಿಗೆ ಸಾಕಷ್ಟು ಅನುಕೂಲಕರವಾಗಿದೆ. ಇದು ಹಿರಿಯ ನಾಗರಿಕರ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುವ ಸರ್ಕಾರದ ಕಾಳಜಿಗೆ ಹೊಂದಿಕೆಯಾಗುತ್ತದೆ. ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಇಲಾಖೆಯಿಂದ ರಾಜ್ಯಾದ್ಯಂತ ಈ ಸೌಲಭ್ಯದ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ‘ಸ್ವತಂತ್ರ ಜೀವನಕ್ಕಾಗಿ ಮೊಬೈಲ್ ಅಪ್ಲಿಕೇಶನ್‌ಗಳು’ ಎಂಬ ಕೈಪಿಡಿಯನ್ನು ಕಲ್ಯಾಣ ಅಧಿಕಾರಿ ಬಿಡುಗಡೆ ಮಾಡಿದರು.ಮಾಹೆಯ ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್‌ನ ಪ್ರಾಧ್ಯಾಪಕ ಡಾ. ಶಶಿಧರ ವೈ.ಎನ್., ಅಪ್ಲಿಕೇಶನ್‌ನ ಉದ್ದೇಶವನ್ನು ವಿವರಿಸಿದರು. ಯೋಜನೆಯ ಪಿಎಚ್‌ಡಿ ಸಂಶೋಧನಾ ಅಭ್ಯರ್ಥಿ ರಾಘವೇಂದ್ರ ಜಿ, ಅಪ್ಲಿಕೇಶನ್‌ನ ವೈಶಿಷ್ಟ್ಯಗಳನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಸಂಘ ಅಧ್ಯಕ್ಷ ಸದಾನಂದ ಹೆಗಡೆ, ಗೌರವಾಧ್ಯಕ್ಷ ವಿಶ್ವನಾಥ ಹೆಗಡೆ ಉಪಸ್ಥಿತರಿದ್ದರು. ಕಾರ್ಯದರ್ಶಿ ಕೆ. ಮುರಳೀಧರ ಸ್ವಾಗತಿಸಿದರು, ಸಂಶೋಧನಾ ಯೋಜನೆಯ ಸಹಾಯಕ ಅಶ್ವಿನ್ ಕೆ. ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಕಾರ್ಯಕರ್ತೆ ಅರ್ಪಿತಾ ಸಹಕರಿಸಿದರು. ಸಂಘದ ೪೦ ಸದಸ್ಯರ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.* ಸೈಬರ್ ಸುರಕ್ಷೆಯ ಮಾಹಿತಿ
ನೋಂದಾಯಿತ ಸದಸ್ಯರು ತಂತ್ರಜ್ಞಾನದ ಬಳಕೆ, ವಿಶೇಷವಾಗಿ ಮೊಬೈಲ್ ಅಪ್ಲಿಕೇಶನ್‌ಗಳು, ಸೈಬರ್ ಸುರಕ್ಷತೆ ಕುರಿತು ವಿಷಯಗಳನ್ನು ಇದರಲ್ಲಿ ಪಡೆಯಬಹುದು. ಇದು ಕಲ್ಯಾಣ ಇಲಾಖೆಗಳು ಮತ್ತು ಸಂಘಗಳು ತಮ್ಮ ಅಧಿಸೂಚನೆಗಳನ್ನು ಹಂಚಿಕೊಳ್ಳಲು ಕೂಡ ಸಹಾಯ ಮಾಡುತ್ತದೆ. ಇದು ನೋಂದಾಯಿತ ಬಳಕೆದಾರರಿಗೆ ಜೆರೊಟೆಕ್ನಾಲಜಿ ಎಂಪವರ್ಮೆಂಟ್ ಪ್ರೋಗ್ರಾಂನಲ್ಲಿ ನೋಂದಾಯಿಸಲು ಅನುಮತಿಸುತ್ತದೆ, ಆದರೆ ಇದು ಐಚ್ಛಿಕವಾಗಿರುತ್ತದೆ.