ಇಲ್ಲಿನ ಜ್ಞಾನಸುಧಾ ಎಜುಕೇಶನ್ ಸೊಸೈಟಿಯ, ಜ್ಞಾನಸುಧಾ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರತಿಭೆ, ಸೃಜನಶೀಲತೆ ಹಾಗೂ ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಅನಾವರಣಗೊಳಿಸುವ ಉದ್ದೇಶದಿಂದ ಶನಿವಾರ ಅದ್ಧೂರಿಯಾಗಿ ಎಥ್ನಿಕ್ ಡೇ ಕಾರ್ಯಕ್ರಮವನ್ನು ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್

ಇಲ್ಲಿನ ಜ್ಞಾನಸುಧಾ ಎಜುಕೇಶನ್ ಸೊಸೈಟಿಯ, ಜ್ಞಾನಸುಧಾ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರತಿಭೆ, ಸೃಜನಶೀಲತೆ ಹಾಗೂ ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಅನಾವರಣಗೊಳಿಸುವ ಉದ್ದೇಶದಿಂದ ಶನಿವಾರ ಅದ್ಧೂರಿಯಾಗಿ ಎಥ್ನಿಕ್ ಡೇ ಕಾರ್ಯಕ್ರಮವನ್ನು ಆಚರಿಸಲಾಯಿತು.

ಭಾರತದ ವಿವಿಧ ರಾಜ್ಯಗಳ ವಿಶಿಷ್ಟ ಸಂಸ್ಕೃತಿ, ಉಡುಗೆ-ತೊಡುಗೆ, ಸಂಪ್ರದಾಯ, ಕಲೆ ಹಾಗೂ ಜೀವನಶೈಲಿಯನ್ನು ಪರಿಚಯಿಸುವ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ವಿಶೇಷ ಉಡುಪುಗಳು ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಪ್ರದರ್ಶಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದರು.

ಕಾರ್ಯಕ್ರಮದಲ್ಲಿ ಬಿಸಿಎ ವಿಭಾಗದ ಮುಖಸ್ಥೆ ನಾಗಿಣಿ ಪಾಟೀಲ್ ನೇತೃತ್ವದಲ್ಲಿ ರಾಜಸ್ಥಾನ, ಬಿಎ ವಿಭಾಗದ ಮುಖಸ್ಥೆ ದೀಪಿಕಾ ನೇತೃತ್ವದಲ್ಲಿ ಕೇರಳ, ಬಿಕಾಂ ವಿಭಾಗದ ಮುಖಸ್ಥ ಉಮೇಶ್ ನೇತೃತ್ವದಲ್ಲಿ ಕರ್ನಾಟಕ ಹಾಗೂ ಬಿಎಸ್‌ಸಿ ವಿಭಾಗದ ಮುಖಸ್ಥೆ ಶೃತಿ ನೇತೃತ್ವದಲ್ಲಿ ಮಹಾರಾಷ್ಟ್ರ ರಾಜ್ಯಗಳ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ವಿಭಿನ್ನ ಥೀಮ್‌ಗಳನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.

ಪ್ರತಿಯೊಂದು ರಾಜ್ಯದ ಸಾಂಪ್ರದಾಯಿಕ ಉಡುಪು, ಆಭರಣ, ಶೈಲಿ ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ವಿದ್ಯಾರ್ಥಿಗಳು ಅತ್ಯಂತ ಆಕರ್ಷಕವಾಗಿ ಪ್ರದರ್ಶಿಸಿದರು. ಇದರಿಂದ ಕಾಲೇಜು ಆವರಣವೇ ಭಾರತದ ವಿವಿಧ ಸಂಸ್ಕೃತಿಗಳ ಸಂಗಮದಂತೆ ಕಂಗೊಳಿಸಿತು.

ಕಾರ್ಯಕ್ರಮಕ್ಕೆ ಸಂಗೀತಾ ಲಖಾ ಹಾಗೂ ಪ್ರಿಯಾ ಚಿದ್ರಿ ಅವರು ತಿರ್ಪುಗಾರರಾಗಿ ಆಗಮಿಸಿ, ವಿದ್ಯಾರ್ಥಿಗಳ ವೈವಿಧ್ಯಮಯ ಪ್ರದರ್ಶನಗಳನ್ನು ವೀಕ್ಷಿಸಿದರು. ವಿದ್ಯಾರ್ಥಿಗಳ ಆತ್ಮವಿಶ್ವಾಸ, ಸೃಜನಶೀಲತೆ, ಸಾಂಪ್ರದಾಯಿಕ ಉಡುಪುಗಳ ಆಯ್ಕೆ, ಪ್ರಸ್ತುತಪಡಿಸುವ ಶೈಲಿ ಹಾಗೂ ಥೀಮ್‌ಗೆ ನೀಡಿದ ಮಹತ್ವವನ್ನು ಅವರು ಮೆಚ್ಚಿ ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ಜ್ಞಾನಸುಧಾ ಎಜುಕೇಶನ್ ಸೊಸೈಟಿಯ ಅಧ್ಯಕ್ಷೆ ಡಾ. ಪೂರ್ಣಿಮಾ ಜಿ. ಅವರು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯ ಪರಿಶ್ರಮ ಶ್ಲಾಘಿಸಿದರು. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ, ಅವರಲ್ಲಿರುವ ಪ್ರತಿಭೆ ಹಾಗೂ ಸೃಜನಶೀಲತೆಯನ್ನು ಹೊರತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ಜ್ಞಾನಸುಧಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್‌ನ ನಿರ್ದೇಶಕರಾದ ಡಾ. ಮುನೇಶ್ವರ ಲಾಖಾ ಸಹ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ವಿದ್ಯಾರ್ಥಿಗಳು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿಯನ್ನು ಅಭಿನಂದಿಸಿ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ಸಾಂಸ್ಕೃತಿಕ ಅರಿವು ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವಂತಹ ಚಟುವಟಿಕೆಗಳಿಗೆ ಸಂಸ್ಥೆ ಸದಾ ಪ್ರೋತ್ಸಾಹ ನೀಡುತ್ತದೆ ಎಂದು ತಿಳಿಸಿದರು.

ಜ್ಞಾನಸುಧಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಚನ್ನವೀರ ಪಾಟೀಲ ಸ್ವಾಗತಿಸಿದರು.