ಉದ್ಯೋಗ ಮೇಳದಿಂದ ನಿರುದ್ಯೋಗ ನಿರ್ಮೂಲನೆ ಸಾಧ್ಯ

| Published : Jul 08 2024, 12:34 AM IST

ಸಾರಾಂಶ

ಉದ್ಯೋಗ ಮೇಳ ಆಯೋಜನೆ ಮಾಡುವುದರಿಂದ ತಾಲೂಕಿನ ವಿದ್ಯಾವಂತ ನಿರುದ್ಯೋಗಿ ಯುವಕರು, ನಾಡಿನ ವಿವಿಧ ಜಿಲ್ಲೆಗಳಿಂದ ಬಂದ ನಿರುದ್ಯೋಗಿ ಯುವಸಮೂಹಕ್ಕೆ ಉದ್ಯೋಗ ಹೊಂದಲು ಅವಕಾಶ ನೀಡಿದಂತಾಗುತ್ತಿದೆ. ಇದರಿಂದ ನಿರುದ್ಯೋಗ ನಿರ್ಮೂಲನೆಯಾಗಲಿದೆ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಚನ್ನಗಿರಿಯಲ್ಲಿ ಹೇಳಿದ್ದಾರೆ.

- ಸಂತೆಬೆನ್ನೂರಿನಲ್ಲಿ ಉದ್ಯೋಗ ಮೇಳ ಉದ್ಘಾಟಿಸಿ ಶಾಸಕ ಬಸವರಾಜು - - - ಕನ್ನಡಪ್ರಭವಾರ್ತೆ, ಚನ್ನಗಿರಿ

ಉದ್ಯೋಗ ಮೇಳ ಆಯೋಜನೆ ಮಾಡುವುದರಿಂದ ತಾಲೂಕಿನ ವಿದ್ಯಾವಂತ ನಿರುದ್ಯೋಗಿ ಯುವಕರು, ನಾಡಿನ ವಿವಿಧ ಜಿಲ್ಲೆಗಳಿಂದ ಬಂದ ನಿರುದ್ಯೋಗಿ ಯುವಸಮೂಹಕ್ಕೆ ಉದ್ಯೋಗ ಹೊಂದಲು ಅವಕಾಶ ನೀಡಿದಂತಾಗುತ್ತಿದೆ. ಇದರಿಂದ ನಿರುದ್ಯೋಗ ನಿರ್ಮೂಲನೆಯಾಗಲಿದೆ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದರು.

ತಾಲೂಕಿನ ಸಂತೆಬೆನ್ನೂರು ಗ್ರಾಮದ ಸರ್ಕಾರಿ ಪದವಿ ಕಾಲೇಜಿನಲ್ಲಿ ಶನಿವಾರ ಉದ್ಯೋಗ ಮೇಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ನಿರುದ್ಯೋಗಿ ಪದವೀಧರರಿಗೆ ₹3000 ಪ್ರೋತ್ಸಾಹಧನ ನೀಡಲಾಗುತ್ತಿದೆ. ಇದರಿಂದ ನಿರುದ್ಯೋಗಿ ಯುವಕರು ಯಾರನ್ನೂ ಅವಲಂಬಿಸದೇ ಇಂತಹ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಸಹಕಾರಿಯಾಗಿದೆ. ಜಿಲ್ಲೆಯಲ್ಲಿ 5450 ನಿರುದ್ಯೋಗಿ ಪದವೀಧರರಿಗೆ ಯುವನಿಧಿ ಸೌಲಭ್ಯವನ್ನು ನಮ್ಮ ಸರ್ಕಾರ ನೀಡಿದೆ ಎಂದರು.

ಉದ್ಯೋಗ ಕೋಶ ಸಂಚಾಲಕಿ ಎನ್.ಆರ್. ಮಮತ ಮಾತನಾಡಿ, ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಉದ್ಯೋಗ ಕೌಶಲ್ಯ ತರಬೇತಿ ನೀಡಿದ್ದೇವೆ. ಗ್ರಾಮೀಣ ವಿದ್ಯಾರ್ಥಿಗಳ ಪದವಿಯ ಕೊನೆಯ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಈ ಉದ್ಯೋಗ ಮೇಳದಲ್ಲಿ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಪಡೆಯಬೇಕು ಎಂಬುದು ಉದ್ದೇಶವಾಗಿದೆ ಎಂದರು.

ಮೇಳದಲ್ಲಿ 20 ಕಂಪನಿಗಳು ಭಾಗವಹಿಸಿದ್ದು, ಮೇಳಕ್ಕೆ ಎಸ್.ಎಸ್.ಎಲ್.ಸಿ, ಐಟಿಐ, ಪದವಿ, ಸ್ನಾತಕೋತ್ತರ ಪದವಿ, ಹಾಗೂ ಡಿ ಫಾರ್ಮ ಪಡೆದ 355 ಉದ್ಯೋಕಾಂಕ್ಷಿಗಳು ಭಾಗವಹಿಸಿದ್ದಾರೆ. ಇವರಲ್ಲಿ 188 ಯುವತಿಯರು, 167 ಯುವಕರು ಭಾಗವಹಿಸಿದ್ದು, ಇದರಲ್ಲಿ 48 ಅಭ್ಯರ್ಥಿಗಳು ಸ್ಥಳದಲ್ಲಿಯೇ ಉದ್ಯೋಗದ ಅದೇಶ ಪತ್ರ ಪಡೆದಿದ್ದಾರೆ ಎಂದು ತಿಳಿಸಿದರು.

ಉದ್ಯೋಗ ಮೇಳದಲ್ಲಿ ಕಾರವಾರ, ಶಿರಸಿ, ಬಳ್ಳಾರಿ, ಮಂಡ್ಯ, ಶಿವಮೊಗ್ಗ, ಚಿತ್ರದುರ್ಗ, ಹಾವೇರಿ, ವಿಜಯನಗರ, ಚಿಕ್ಕಮಗಳೂರು ಜಿಲ್ಲೆಗಳಿಂದ ಉದ್ಯೋಗಕಾಂಕ್ಷಿತರು ಭಾಗವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಚಾರ್ಯ ಎಚ್.ಗಿರಿಸ್ವಾಮಿ, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಎಂ.ಸಿದ್ದಪ್ಪ, ಗ್ರಾಪಂ ಅಧ್ಯಕ್ಷೆ ಭಾಗ್ಯ ಗುಜ್ಜರ್, ಜಿಲ್ಲಾ ಉದ್ಯೋಗಾಧಿಕಾರಿ ರವೀಂದ್ರ, ಭರತ್, ಡಾ.ರಾಜಶೇಖರ್, ಡಾ.ಪುನೀತ್, ನಾಗರತ್ನ, ಕೃಷ್ಣಮೂರ್ತಿ, ಬಸವರಾಜಪ್ಪ, ರುದ್ರಪ್ಪ, ಬಾಲು, ರಹಮತ್ ವುಲ್ಲಾ, ಕೆ.ಪಿ.ಗಿರೀಶ್, ಮಾರುತಿ ಉಪಸ್ಥಿತರಿದ್ದರು.

- - - -7ಕೆಸಿಎನ್‌ಜಿ2:

ಚನ್ನಗಿರಿ ತಾಲೂಕಿನ ಸಂತೆಬೆನ್ನೂರಲ್ಲಿ ನಡೆದ ಉದ್ಯೋಗ ಮೇಳ ಕಾರ್ಯಕ್ರಮ ಶಾಸಕ ಬಸವರಾಜು ವಿ.ಶಿವಗಂಗಾ ಉದ್ಘಾಟಿಸಿದರು.