ಯುವನಿಧಿ ಯೋಜನೆಯಡಿ ನೋಂದಾಯಿಸಿರುವ ನಿರುದ್ಯೋಗಿ ಯುವಕರಿಗೆ ಯುವನಿಧಿ ಪ್ಲಸ್ ಕಾರ್ಯಕ್ರಮದಡಿ ಉದ್ಯೋಗ ಒದಗಿಸುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ಹಗರಿಬೊಮ್ಮನಹಳ್ಳಿ: ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ತಾಲೂಕಿನ ನಿರುದ್ಯೋಗಿ ಯುವಕರ ಉದ್ಯೋಗ ಭರವಸೆಯ ಸಮಾವೇಶವನ್ನು ತಡೆ ಹಿಡಿಯುವ ಮೂಲಕ ಶಾಸಕ ನೇಮರಾಜ ನಾಯ್ಕ ಯುವಕರ ಭವಿಷ್ಯವನ್ನು ಅತಂತ್ರಗೊಳಿಸುತ್ತಿದ್ದಾರೆ ಎಂದು ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಸೊನ್ನದ ಗುರುಬಸವರಾಜ್ ಆರೋಪಿಸಿದರು.
ಪಟ್ಟಣದ ತಾಪಂ ಮಹಾತ್ಮಗಾಂಧಿ ಸಭಾಂಗಣದಲ್ಲಿ ಮಂಗಳವಾರ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಯುವನಿಧಿ ಯೋಜನೆಯಡಿ ನೋಂದಾಯಿಸಿರುವ ನಿರುದ್ಯೋಗಿ ಯುವಕರಿಗೆ ಯುವನಿಧಿ ಪ್ಲಸ್ ಕಾರ್ಯಕ್ರಮದಡಿ ಉದ್ಯೋಗ ಒದಗಿಸುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ನಿರುದ್ಯೋಗಿಗಳಿಗೆ ವಿಶೇಷ ಕೌಶಲ್ಯ ತರಬೇತಿ ನೀಡಿ ನಾನಾ ಕಂಪನಿ, ಕಾರ್ಖಾನೆ, ಸಂಸ್ಥೆಗಳಲ್ಲಿ ಉದ್ಯೋಗ ಒದಗಿಸುವ ಸಮಾವೇಶ ಆಯೋಜಿಸಲಾಗುತ್ತಿದೆ ಎಂದರು.ತಾಲೂಕು ಗ್ಯಾರಂಟಿ ಸಮಿತಿಯ ಪದಾಧಿಕಾರಿಗಳು ಉದ್ಯೋಗದಾತರ ಸಹಯೋಗದಲ್ಲಿ ಪ್ರಥಮ ಬಾರಿಗೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಮಾವೇಶ ನಡೆಸಲುದ್ದೇಶಿಸಿದಾಗ, ಶಾಸಕರು ಕಾಲೇಜಿನ ಸಿಬ್ಬಂದಿ ಮತ್ತು ಅಭಿವೃದ್ಧಿ ಸಮಿತಿ ಮೇಲೆ ಒತ್ತಡ ತಂದು ಸಮಾವೇಶ ನಡೆಸದಂತೆ ತಡೆ ಹಿಡಿದಿದ್ದಾರೆ. ಪರಿಣಾಮವಾಗಿ ತಾಲೂಕಿನ ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಘೋರ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ, ಜಿಪಂ ಸಿಇಒ ಮುಖಾಂತರ ಅನುಮತಿ ಪಡೆದು ಸಮಾವೇಶ ನಡೆಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ, ಸಾರಿಗೆ ಇಲಾಖೆ, ಗೆಸ್ಕಾಂ ಇಲಾಖೆ, ಉದ್ಯೋಗ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿಯ ವರದಿಗಳನ್ನು ಸಭೆಯಲ್ಲಿ ಮಂಡಿಸಿದರು.
ಜಿಲ್ಲಾ ಗ್ಯಾರಂಟಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಜಂದೀಸಾಬ್, ಸದಸ್ಯ ಹೆಗ್ಡಾಳ್ ಪರಶುರಾಮ್, ತಾಲೂಕು ಸಮಿತಿಯ ಸದಸ್ಯರಾದ ಉಲವತ್ತಿ ರಾಘು, ಮೇಟಿ ಮಂಜುನಾಥ್, ಗಿರೀಶ್ ತಂಬ್ರಹಳ್ಳಿ, ವೆಂಕಟೇಶ್ ನಾಯ್ಕ, ಸಂತೋಷ್, ಸರ್ದಾರ್ ರಾಮಣ್ಣ, ಉಪ್ಪಾರ್ ಪ್ರಕಾಶ್, ಸದ್ದಾಂ, ದೊಡ್ಡಬಸಪ್ಪ, ನಾಗಮ್ಮ, ತಾಪಂ ಇಒ ಪಿ.ವಿಶ್ವನಾಥ್, ಯೋಜನಾಧಿಕಾರಿ ನಾಗರಾಜನಾಯ್ಕ, ತಾಪಂ ಲಕ್ಷ್ಮೀ ಸಭೆಯಲ್ಲಿ ಉಪಸ್ಥಿತರಿದ್ದರು.ಹಗರಿಬೊಮ್ಮನಹಳ್ಳಿಯ ತಾಪಂ ಮಹಾತ್ಮಗಾಂಧಿ ಸಭಾಂಗಣದಲ್ಲಿ ಮಂಗಳವಾರ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೊನ್ನದ ಗುರುಬಸವರಾಜ್ ಮಾತನಾಡಿದರು.