ದುಬಾರಿಯಾದ ಜೋಗ ಜಲಪಾತ ದರ್ಶನ

| Published : Sep 02 2024, 02:03 AM IST

ಸಾರಾಂಶ

ಜೋಗ ಜಲಪಾತದ ಪ್ರದೇಶದಲ್ಲಿ ಕಳೆದ ಎರಡು ವರ್ಷದಿಂದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ. ಅಷ್ಟರಲ್ಲಿಯೇ ಪ್ರಾಧಿಕಾರ ಪ್ರವೇಶ ಶುಲ್ಕವನ್ನು ಅವೈಜ್ಞಾನಿಕವಾಗಿ ಮೂರು ಪಟ್ಟು ಹೆಚ್ಚಿಸಿರುವುದು ಪ್ರವಾಸಿಗರ ಕಣ್ಣು ಕೆಂಪಾಗಿಸಿದೆ.

ಕಲಗಾರು ಲಕ್ಷ್ಮೀನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ ತಾಳಗುಪ್ಪ

ಪ್ರಕೃತಿಯ ರಮ್ಯ ತಾಣ ಜೋಗ ಜಲಪಾತ ವೀಕ್ಷಣೆ ಈಗ ಮತ್ತಷ್ಟು ದುಬಾರಿಯಾಗಿದೆ. ಸುಮಾರು 183.7 ಕೋಟಿ ರು.ಗಳ ವೆಚ್ಚದಲ್ಲಿ ಜಲಪಾತದ ಆವರಣವನ್ನು ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವನ್ನಾಗಿ ರೂಪಿಸಲು ಹೊರಟಿರುವ ಜೋಗ ನಿರ್ವಹಣಾ ಪ್ರಾಧಿಕಾರವು, ಮೂಲ ಸೌಕರ್ಯ ಪೂರ್ಣ ರೂಪುಗೊಳ್ಳುವ ಮೊದಲೇ ಹಿಂದಿದ್ದ ಪ್ರವೇಶ ಶುಲ್ಕವನ್ನು ಹೆಚ್ಚಿಸಿದೆ. ಇದು ಈಗ ಪ್ರವಾಸಿಗರು ಹಾಗೂ ಸ್ಥಳೀಯರು ಆಕ್ಷೇಪಕ್ಕೆ ಕಾರಣವಾಗಿದೆ.

ಜೋಗ ಜಲಪಾತದ ಪ್ರದೇಶದಲ್ಲಿ ಕಳೆದ ಎರಡು ವರ್ಷದಿಂದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ. ಕಾಮಗಾರಿಗಳು ಪೂರ್ಣಗೊಳ್ಳಲು ವರ್ಷಕ್ಕೂ ಅಧಿಕ ಸಮಯ ತಗಲುತ್ತದೆ ಎಂದು ಅಂದಾಜಿಸಲಾಗಿದೆ. ಅಷ್ಟರಲ್ಲಿಯೇ ಪ್ರಾಧಿಕಾರ ಪ್ರವೇಶ ಶುಲ್ಕವನ್ನು ಅವೈಜ್ಞಾನಿಕವಾಗಿ ಮೂರು ಪಟ್ಟು ಹೆಚ್ಚಿಸಿರುವುದು ಪ್ರವಾಸಿಗರ ಕಣ್ಣು ಕೆಂಪಾಗಿಸಿದೆ.

ಪರಿಷ್ಕೃತ ಪ್ರವೇಶ ದರ ಎಷ್ಟಿದೆ?

ಜೋಗ ಜಲಪಾತ ವೀಕ್ಷಣೆಗೆ ಈ ಹಿಂದೆ ಬಸ್ಸೊಂದಕ್ಕೆ 150 ರು. ಪ್ರವೇಶ ಶುಲ್ಕ ಇತ್ತು. ಈಗ ಇದನ್ನು 200 ರು.ಗೆ ಹೆಚ್ಚಿಸಲಾಗಿದೆ. ಟಿಟಿ, ಮಿನಿ ಬಸ್‌ ದರ 100ರಿಂದ 150ಕ್ಕೆ ಹೆಚ್ಚಳವಾಗಿದೆ. ಅದೇ ರೀತಿ ಆಟೋರಿಕ್ಷಾ 30 ರಿಂದ 40 ರು.ಗೆ , ದ್ವಿಚಕ್ರ ವಾಹನಕ್ಕೆ 20ರಿಂದ 30 ರು.ಗೆ ಹೆಚ್ಚಿಸಲಾಗಿದೆ. ಇನ್ನು ಪ್ರವಾಸಿಗರಿಗೆ ಈ ಹಿಂದೆ ಒಬ್ಬರಿಗೆ 10 ರು. ಪ್ರವೇಶ ದರವಿತ್ತು. ಈಗ ಅದನ್ನು 20 ರು. ಹೆಚ್ಚಿಸಲಾಗಿದೆ. ವಿದೇಶ ಪ್ರವಾಸಿಗರಿಗೆ ಈ ಹಿಂದೆ ಇದ್ದ 50 ರು., ಪ್ರವೇಶ ದರವನ್ನು 100 ರು. ಹೆಚ್ಚಿಸಲಾಗಿದೆ. ಜೊತೆಗೆ ಹೊಸದಾಗಿ ಕೆಲ ಶುಲ್ಕವನ್ನು ವಿಧಿಸಿದ್ದು, ಇನ್ನು ಮುಂದೆ ಜೋಗ ವೀಕ್ಷಣೆಗೆ 6 ರಿಂದ 16 ವರ್ಷದೊಳಗಿನ ಮಕ್ಕಳಿಗೆ 10 ರು.ಶುಲ್ಕವನ್ನು ನಿಗದಿ ಮಾಡಲಾಗಿದೆ. ಜೊತೆಗೆ ಜೋಗ ವೀಕ್ಷಣೆ ವೇಳೆ ಕ್ಯಾಮೆರಾ ತೆಗೆದುಕೊಂಡು ಹೋದರೂ ಅದಕ್ಕೂ 100 ರು. ಶುಲ್ಕವನ್ನು ನಿಗದಿಪಡಿಸಲಾಗಿದೆ. ಡ್ರೋನ್‌ ಕ್ಯಾಮೆರಾ ತೆಗೆದುಕೊಂಡು ಹೋಗುವವರು 500 ರು. ಪ್ರದೇಶ ಶುಲ್ಕವನ್ನು ಪಾವತಿಸಬೇಕಿದೆ.

ಯಾರಿಗೆ ಉಚಿತ?

ವಿಕಲಚೇತನರು, ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ಸೈನಿಕರು, ಪತ್ರಿಕಾ ವರದಿಗಾರರು, ಟಿ.ವಿ.ಮಾಧ್ಯಮದವರಿಗೆ ಉಚಿತ ಪ್ರವೇಶವಿದೆ.

ವೀಕ್ಷಣೆಗೆ ಸಮಯ ನಿಗದಿ:

ಜೋಗ ನಿರ್ವಹಣಾ ಪ್ರಾಧಿಕಾರವು ಜಲಪಾತದ ಪರಿಸರದಲ್ಲಿ ಸುತ್ತಾಡಲು ಎರಡು ಗಂಟೆ ಅವಧಿಯನ್ನು ನಿಗದಿ ಪಡಿಸಿದೆ. ಜೋಗ ಜಲಪಾತದ ದೃಶ್ಯ ವೈಭವ ವರ್ಣಿಸಲಸದಳ. ಮತ್ತೆ ಮತ್ತೆ ಕಣ್ತುಂಬಿಸಿಕೊಳ್ಳುವ ಆಸೆ ಹುಟ್ಟಿಸುವ ಜಲಪಾತವನ್ನು ವೀಕ್ಷಿಸಲು ಬೆಳಗ್ಗಿನಿಂದ ಸಂಜೆಯವರೆಗೆ ಅಲ್ಲಿನ ಪರಿಸರದಲ್ಲಿ ವಿಹರಿಸುವುದು ಬಹುತೇಕ ಪ್ರವಾಸಿಗರ ವಾಡಿಕೆ ಆಗಿದೆ. ಎರಡು ಗಂಟೆಗೂ ಅಧಿಕ ಸಮಯ ಅಲ್ಲಿದ್ದರೆ ಪುನಹ ದುಬಾರಿ ಶುಲ್ಕ ತೆರಬೇಕಾಗುತ್ತದೆ.

ಅದು ಅಲ್ಲದೆ ಮಳೆಗಾಲದ ದಿನಗಳಲ್ಲಿ ಕಣಿವೆ ಮಂಜಿನಿಂದ ಆವೃತವಾಗಿರುವುದರಿಂದ ಜಲಪಾತ ಕಾಣಲು ಪ್ರವಾಸಿಗರು ಚಾತಕಪಕ್ಷಿಯಂತೆ ಕಾಯುವ ದೃಶ್ಯ ಸಾಮಾನ್ಯವಾಗಿದೆ.

ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಮುಗಿದ ನಂತರ ಜಲಪಾತದ ಗುಂಡಿಗೆ ಇಳಿಯಲು ಅನುವು ಮಾಡಿಕೊಟ್ಟರೆ ಜಲಪಾತದ ಆಳಕ್ಕೆ ಹೋಗಿ ಬರಲು ಎರಡು ಗಂಟೆಗೂ ಅಧಿಕ ಸಮಯಬೇಕಾಗುತ್ತದೆ. ಸಮಯ ನಿಗದಿಯಿಂದ ಬಹುತೇಕ ಪ್ರವಾಸಿಗರು ಮಳೆಗಾಲದ ದಿನಗಳಲ್ಲಿ ಜಲಪಾತದ ದೃಶ್ಯ ವೈಭವ ಕಣ್ತುಂಬಿಕೊಳ್ಳುವುದರಿಂದ ವಂಚಿತರಾಗುತ್ತಾರೆ ಎಂಬುದು ಪ್ರವಾಸಿಗರ ಅಳಲು.

ಸ್ಥಳೀಯರೇ ಅಧಿಕ:

ಜಲಪಾತದ ವೀಕ್ಷಣೆಗೆ ಕೇವಲ ಪ್ರವಾಸಿಗರಷ್ಟೇ ಬರುತ್ತಿಲ್ಲ. ಜಲಪಾತ ಭೋರ್ಗರೆಯುವಾಗ ಸುತ್ತಮುತ್ತಲ ಗ್ರಾಮಾಂತರ ಪ್ರದೇಶದಿಂದ ನಿತ್ಯ ನೂರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹಿಂದೆ ಯಾವುದೇ ಪ್ರತಿಬಂಧಕವಿಲ್ಲದೆ ಮುಕ್ತವಾಗಿ ಓಡಾಡಿ ಕೊಂಡಿದ್ದ ತಮ್ಮೂರ ಪ್ರದೇಶಕ್ಕೆ ಹಣ ತೆರುವಂತಾಗಿದ್ದು, ಸ್ಥಳೀಯರಿಗೆ ಅಸಮಾಧಾನ ತಂದಿದೆ.

ದರ ಏರಿಕೆ ಅನಿವಾರ್ಯ: ಎಡಿ ಸ್ಪಷ್ಟನೆ

ಜಲಪಾತದ ಆವರಣದಲ್ಲಿ ಸ್ವಚ್ಛತೆ ಕುಡಿಯುವ ನೀರು, ಭದ್ರತೆ ಮುಂತಾದ ವ್ಯವಸ್ಥೆಗೆ 19 ಜನರನ್ನು ನೇಮಿಸಿಕೊಳ್ಳಲಾಗಿದೆ. ಅವರಿಗೆ ಸಂಬಳ ನೀಡಲು ಸರ್ಕಾರದಿಂದ ಯಾವುದೇ ಅನುದಾನವಿಲ್ಲ. ಸಂಗ್ರಹಿಸಿದ ಶುಲ್ಕದಿಂದಲೇ ನಿರ್ವಹಣೆ ಮಾಡಲು ಸೂಚನೆ ಇದೆ. ಈಗಿರುವ ಆದಾಯಕ್ಕಿಂತ ಹೆಚ್ಚಿನ ಖರ್ಚು ಆಗುತ್ತಿರುವುದರಿಂದ ದರ ಏರಿಕೆ ಅನಿವಾರ್ಯವಾಗಿದೆ ಎಂಬುದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರ ಸ್ಪಷ್ಟನೆ.

ಜಲಪಾತದ ತಾಣದಲ್ಲಿ ಇನ್ನೂ ಪಾರ್ಕಿಂಗ್‌ ವ್ಯವಸ್ಥೆ ಆಗಿಲ್ಲ. ಸದ್ಯ ಗೇಟ್ ಒಳಗೆ 60 ವಾಹನಗಳ ನಿಲುಗಡೆಗೆ ಅವಕಾಶವಿದೆ. ಆದರೆ ಯಾವುದೇ ರೀತಿಯ ವ್ಯಾಪಾರ ವಹಿವಾಟುಗಳು ನಡೆಯುವುದಿಲ್ಲ. ಜಲಪಾತ ವೀಕ್ಷಣೆ ಮಾತ್ರವಾಗಿದ್ದರೂ, ಕೆಲ ಪ್ರವಾಸಿಗರು ವಾಹನ ಅಲ್ಲಿಯೇ ನಿಲ್ಲಿಸಿ ಓಡಾಡಿಕೊಂಡಿರುತ್ತಾರೆ. ಇದನ್ನು ಭದ್ರತಾ ಸಿಬ್ಬಂದಿ ಪ್ರಶ್ನಿಸಿದರೆ ನಾವು ಟಿಕೆಟ್‍ ತೆಗೆದುಕೊಂಡಿದ್ದೇವೆ ಎಂದು ಪ್ರತಿಕ್ರಿಯಿಸುತ್ತಾರೆ. ಇದರಿಂದ ಕುಟುಂಬ ಸಮೇತ ಬರುವ ಪ್ರವಾಸಿಗರ ವಾಹನ ಒಳಬರಲಾಗು ವುದಿಲ್ಲ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸಮಯ ನಿಗದಿ ಮಾಡಲಾಗಿದೆ. ಆದರೆ ಯಾರಿಂದಲೂ ಸಮಯಕ್ಕೆ ಸಂಬಂಧಿಸಿ ದಂತೆ ಶುಲ್ಕ ವಸೂಲಿ ಮಾಡಲಾಗಿಲ್ಲ. ಮಳೆಗಾಲದ ನಂತರ ಪ್ರವಾಸಿಗಳ ಸಂಖ್ಯೆ ಇಳಿಮುಖವಾಗುವುದರಿಂದ ಸಹಜ ವಾಗಿಯೇ ಈ ಪದ್ಧತಿ ಕೊನೆಗೊಳ್ಳುತ್ತದೆ. ಅಂಗವಿಕಲರಿಗೆ, ಮಾಧ್ಯಮದವರಿಗೆ ಶುಲ್ಕ ಮಕ್ತ ಪ್ರವೇಶ, ಶಾಲಾ ಮಕ್ಕಳಿಗೆ ರಿಯಾಯಿತಿಯನ್ನು ನೀಡಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರ ಧರ್ಮಪ್ಪ ತಿಳಿಸಿದ್ದಾರೆ.

ಜಲಪಾತ ವೀಕ್ಷಿಸಲು ಶುಲ್ಕ ವಿವರ

ವಾಹನ-ಹಳೆಯ ಶುಲ್ಕ-ಹೊಸ ದರ

ಬಸ್‌- 150 - 200

ಟಿಟಿ, ಮಿನಿ ಬಸ್‌-100-150

ಆಟೋರಿಕ್ಷಾ -30-40

ಧ್ವಿಚಕ್ರ ವಾಹನ-20-30

ಪ್ರವಾಸಿಗರಿಗೆ -10-20

ವಿದೇಶಿ ಪ್ರವಾಸಿಗರಿಗೆ-50-100

6ರಿಂದ 16 ವರ್ಷದ ಮಕ್ಕಳಿಗೆ-0-10

ಕ್ಯಾಮೆರಾ ಒಂದಕ್ಕೆ-0-100

ಡ್ರೋನ್‌ ಕ್ಯಾಮೆರಾ-0-500