ವರ್ಷದೊಳಗೆ ಕಸಮುಕ್ತ ದಾವಣಗೆರೆಗೆ ಕೈ ಜೋಡಿಸಿ: ಡಾ.ಪ್ರಭಾ

| Published : Jan 10 2025, 12:45 AM IST

ವರ್ಷದೊಳಗೆ ಕಸಮುಕ್ತ ದಾವಣಗೆರೆಗೆ ಕೈ ಜೋಡಿಸಿ: ಡಾ.ಪ್ರಭಾ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲೇ 3ನೇ ಸ್ವಚ್ಛಗೃಹ ಕಲಿಕಾ ಕೇಂದ್ರ ಆರಂಭಿಸಿರುವ ದಾವಣಗೆರೆ ನಗರವನ್ನು 2026 ರೊಳಗೆ ಕಸಮುಕ್ತ ದಾವಣಗೆರೆ ಮಹಾನಗರವಾಗಿ ರೂಪಿಸಲು ಅಧಿಕಾರಿಗಳು ಅಗತ್ಯ ಕ್ರಿಯಾ ಯೋಜನೆ ತಯಾರಿಸಿ, ಅನುಷ್ಠಾನಗೊಳಿಸಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ದಾವಣಗೆರೆಯಲ್ಲಿ ಸೂಚಿಸಿದ್ದಾರೆ.

- ಜೆ.ಎಚ್. ಪಟೇಲ್ ಬಡಾವಣೆಯಲ್ಲಿ ಸ್ವಚ್ಛಗೃಹ ಕಲಿಕಾ ಕೇಂದ್ರ ಉದ್ಘಾಟನೆ । ಅಗತ್ಯ ಕ್ರಿಯಾ ಯೋಜನೆ ತಯಾರಿಸಲು ಸಲಹೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ದೇಶದಲ್ಲೇ 3ನೇ ಸ್ವಚ್ಛಗೃಹ ಕಲಿಕಾ ಕೇಂದ್ರ ಆರಂಭಿಸಿರುವ ದಾವಣಗೆರೆ ನಗರವನ್ನು 2026 ರೊಳಗೆ ಕಸಮುಕ್ತ ದಾವಣಗೆರೆ ಮಹಾನಗರವಾಗಿ ರೂಪಿಸಲು ಅಧಿಕಾರಿಗಳು ಅಗತ್ಯ ಕ್ರಿಯಾ ಯೋಜನೆ ತಯಾರಿಸಿ, ಅನುಷ್ಠಾನಗೊಳಿಸಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸೂಚಿಸಿದರು.

ನಗರದ ಜೆ.ಎಚ್. ಪಟೇಲ್ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಸ್ವಚ್ಛಗೃಹ ಕಲಿಕಾ ಕೇಂದ್ರಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು. ಆಂಧ್ರಪ್ರದೇಶ ಹಾಗೂ ಬೆಂಗಳೂರಿನ ನಂತರ ಸ್ವಚ್ಛಗೃಹ ಕಲಿಕಾ ಕೇಂದ್ರ ಇರುವುದು ದಾವಣಗೆರೆಯಲ್ಲಿ ಮಾತ್ರ ಎಂದರು.

ಆವರಗೊಳ್ಳದ ಘಟಕದಲ್ಲಿ 200 ಟಿಪಿಡಿ ಸಾಮರ್ಥ್ಯದ ಕಸ ವಿಲೇವಾರಿ ಘಟಕ ನಿರ್ಮಿಸಲಾಗಿದೆ. ಅಲ್ಲಿ ಗೊಬ್ಬರ ತಯಾರಿಸಿ, ರೈತರಿಗೆ ನೀಡುವ ಸಿದ್ಧತೆಯೂ ನಡೆದಿದೆ. ಮನೆಗಳು, ಸಂಘ-ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಕಸ ವಿಲೇವಾರಿ ಮಾರ್ಗಸೂಚಿ ತಯಾರಿಸಬೇಕು. ಪ್ರತಿ ಮನೆಯಲ್ಲೂ ಗೊಬ್ಬರ ತಯಾರಿಸಬೇಕು. ಹೀಗೆ ತಯಾರಿಸಿದ ಗೊಬ್ಬರವನ್ನು ಕೈತೋಟಕ್ಕೆ ಬಳಸಬೇಕು. ಸ್ವಯಂ ಸೇವಕರು, ಹೋಟೆಲ್ ಮಾಲೀಕರು ಸೇರಿದಂತೆ ಎಲ್ಲರನ್ನೂ ಕರೆಸಿ, ತ್ಯಾಜ್ಯದಿಂದ ಗೊಬ್ಬರ ತಯಾರಿಸುವ ಕುರಿತಂತೆ ತರಬೇತಿ ನೀಡುವ ಕೆಲಸ ಸಹ ಇಲ್ಲಿ ಆಗಬೇಕು ಎಂದು ಹೇಳಿದರು.

ಮೇಯರ್ ಕೆ.ಚಮನ್ ಸಾಬ್ ಮಾತನಾಡಿ, ದಾವಣಗೆರೆ ಲ್ಯಾಂಡ್ ಮಾರ್ಕ್‌ಗಳ ಸಾಲಿಗೆ ಸ್ವಚ್ಛಗೃಹ ಕಲಿಕಾ ಕೇಂದ್ರವೂ ಸೇರ್ಪಡೆಯಾಗಿದೆ. ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಪ್ರೋತ್ಸಾಹದಿಂದ ಇದು ಸಾಧ್ಯವಾಗಿದೆ ಎಂದರು.

ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ, ಕಸ ವಿಲೇಗೆ ಒತ್ತು ನೀಡಿದ್ದು, ಸ್ವಚ್ಛತೆಯಲ್ಲಿ ದಾವಣಗೆರೆಗೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಈವರೆಗೆ ರ್ಯಾಂಕಿಂಗ್ ಇರಲಿಲ್ಲ. ಈಗ 4ನೇ ಸ್ಥಾನ ಪಡೆದಿದ್ದು, ಮೈಸೂರು, ತುಮಕೂರು, ಹುಬ್ಬಳ್ಳಿ-ಧಾರವಾಡ ನಂತರದಲ್ಲಿ ದಾವಣಗೆರೆ ಇದೆ. ಮನೆ ಮನೆ ಕಸ ಸಂಗ್ರಹ ವ್ಯವಸ್ಥೆ ಸುಧಾರಿಸಿದೆ. ಪಾಲಿಕೆ ವ್ಯಾಪ್ತಿಯಲ್ಲಿ 160 ಕಿಮೀ ರಸ್ತೆ ಇದ್ದು, ರಸ್ತೆ ಸ್ವಚ್ಛತೆಗೆ ಯಂತ್ರ ತರಿಸಲಾಗಿದೆ. ರಾತ್ರಿವೇಳೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತಿದೆ. ಕಸವನ್ನು ಮೂಲದಲ್ಲೇ ವಿಂಗಡಿಸಿದರೆ, ಮುಂದಿನ ಹಂತ ಸುಲಭ. ಕಸ ಬೇರ್ಪಡಿಸದೇ ನೀಡುವುದು, ಎಲ್ಲೆಂದಲ್ಲಿ ಎಸೆದಿದ್ದ 7 ಸಾವಿರ ಜನರಿಗೆ ದಂಡ ವಿಧಿಸಲಾಗಿದ್ದು, ₹21 ಲಕ್ಷ ಸಂಗ್ರಹವಾಗಿದೆ ಎಂದು ಹೇಳಿದರು.

ಉಪ ಮೇಯರ್ ಸೋಗಿ ಶಾಂತಕುಮಾರ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಗಣೇಶ ಹುಲ್ಮನಿ, ಆಶಾ ಉಮೇಶ, ಸುಧಾ ಮಂಜುನಾಥ ಇಟ್ಟಿಗುಡಿ, ಸದಸ್ಯರಾದ ಜಿ.ಎಸ್. ಮಂಜುನಾಥ ಗಡಿಗುಡಾಳ, ಎಲ್.ಎಂ.ಎಚ್. ಸಾಗರ್ ಇತರರು ಇದ್ದರು.

- - -

ಕೋಟ್‌

ದಾವಣಗೆರೆ ಆಜಾದ್ ನಗರ, ಬಾಷಾ ನಗರ ಸೇರಿ ಹಲವೆಡೆ ಕಸ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಅಂತಹ ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯ ಪಾಲಿಕೆ ಸದಸ್ಯರ ಸಹಕಾರದಿಂದ ಇಡೀ ನಗರವನ್ನು ಸಂಪೂರ್ಣ ಸ್ವಚ್ಛ ಮಾಡುವ ಚಿಂತನೆ ಹೊಂದಲಾಗಿದೆ. ಸಚಿವರು, ಶಾಸಕರು, ಸಂಸದರು ಹಾಗೂ ಪಾಲಿಕೆಯ ಎಲ್ಲ ಸದಸ್ಯರ ಸಹಕಾರವೂ ಈ ಕಾರ್ಯಕ್ಕೆ ಇದೆ

- ರೇಣುಕಾ, ಆಯುಕ್ತೆ, ಮಹಾನಗರ ಪಾಲಿಕೆ

- - - -9ಕೆಡಿವಿಜಿ12:

ದಾವಣಗೆರೆ ಜೆ.ಎಚ್.ಪಟೇಲ್ ಬಡಾವಣೆಯಲ್ಲಿ ಸ್ವಚ್ಛಗೃಹ ಕಲಿಕಾ ಕೇಂದ್ರ ಉದ್ಘಾಟಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಮೇಯರ್ ಚಮನ ಸಾಬ್, ಉಪ ಮೇಯರ್ ಸೋಗಿ ಶಾಂತಕುಮಾರ್‌ ಅವರಿಗೆ ಅಧಿಕಾರಿಗಳು ಕೇಂದ್ರದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.