ರೋಣ:
ಕನ್ನಡ ಸಾಹಿತ್ಯ ಸಂವರ್ಧನೆಗೆ ಕನ್ನಡದ ಮನಸ್ಸುಗಳ ಕೈಜೋಡಿಸಿ, ಸಾಹಿತ್ಯ ಕ್ಷೇತ್ರವನ್ನು ಇನ್ನಷ್ಟು ಉತ್ತುಂಗಕ್ಕೆರಿಸುವಲ್ಲಿ ಮುಂದಾಗಬೇಕು ಎಂದು ಬಿಇಒ ಅರ್ಜುನ ಕಾಂಬೋಗಿ ಕರೆ ನೀಡಿದರು.ಪಟ್ಟಣ ಕನ್ನಡ ಸಾಹಿತ್ಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ 112ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.2500 ವರ್ಷಗಳ ಇತಿಹಾಸ ಹೊಂದಿರುವ ಕನ್ನಡವನ್ನು ರಾಜಮಹಾರಾಜರು ಪೋಷಿಸಿದ್ದು, ಕವಿಗಳು ಅದನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿ ಅತ್ಯಂತ ಸಮೃದ್ಧವಾಗಿದ್ದು, ಅದರ ಸಂವರ್ಧನೆಗೆ ಪ್ರತಿಯೊಬ್ಬರು ಕೈಜೋಡಿಸಬೇಕು. “ಕವಿವಾಣಿ ಹೂ, ಜನವಾಣಿ ಬೇರು” ಎಂಬ ಮಾತಿನಂತೆ ಕನ್ನಡ ಬೆಳೆಯಬೇಕು. ನಾಡಿನ ಇತಿಹಾಸದಲ್ಲಿ ಜೈನ್ ಧರ್ಮದ ಕೊಡುಗೆ ಅಪಾರವಾಗಿದ್ದು, ಶ್ರವಣಬೆಳಗೊಳದ ಶಾಸನಗಳು ಮತ್ತು ಶಿಲ್ಪಕಲೆಗಳು ಕನ್ನಡದ ವೈಭವದ ಸಾಕ್ಷಿಗಳಾಗಿವೆ. ಅವುಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದರು.
ಹಿರಿಯ ಸಾಹಿತಿ ವಿ.ಕೆ. ಪಾಟೀಲ ಮಾತನಾಡಿ, ಕನ್ನಡಕ್ಕೆ ಲಭಿಸಿರುವ ಎಂಟು ಜ್ಞಾನಪೀಠ ಪ್ರಶಸ್ತಿಗಳು ಕನ್ನಡದ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.ಡಾ. ಶಿವಪ್ರಕಾಶ ಹಿರೇಮಠ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಭಾಷೆ ಕನ್ನಡದಲ್ಲಿ 125ಕ್ಕೆ 125 ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿದ್ದು ಹೆಮ್ಮೆಯ ಸಂಗತಿ. ಇಂತಹ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಕನ್ನಡ ಸೇರಿದಂತೆ ಇತರ ವಿಷಯಗಳಲ್ಲೂ ಸಾಧನೆಗೈದು ಪೋಷಕರು ಮತ್ತು ಶಿಕ್ಷಕರಿಗೆ ಕೀರ್ತಿ ತರುತ್ತಾರೆ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ರಮಾಕಾಂತ ಕಮತಗಿ, ನಾವು ಕನ್ನಡದ ಬಗ್ಗೆ ಎಷ್ಟು ಅಭಿಮಾನ ಇಟ್ಟುಕೊಳ್ಳುತ್ತೇವೋ, ಅದೇ ಅಭಿಮಾನ ಮಕ್ಕಳಲ್ಲೂ ಬೆಳೆಸಬೇಕು ಎಂದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ 125 ಅಂಕ ಪಡೆದ ತಾಲೂಕಿನ 10 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪತ್ರಿಕೋದ್ಯಮದ ಸಂಗಮೇಶ ಮೆಣಸಗಿ, ಭಜನಾ ಗಾಯಕ ಯಲ್ಲಪ್ಪ ಕೆಂಚನಗೌಡ್ರ, ಜನಪದ ಗಾಯಕ ಶಿವಯೋಗಿ ನೀಲಗುಂದ, ಸಾಹಿತಿ ಶಿವಾನಂದ ಹುನಗುಂಡಿ ಹಾಗೂ ಭಕ್ತಿ ಗಾಯಕ ವೀರಪ್ಪ ಪಲ್ಲೇದ ಅವರನ್ನು ಸೇರಿದಂತೆ ಅನೇಕರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಕಸಾಪ ಸಂಘಟನಾ ಕಾರ್ಯದರ್ಶಿ ಪಿ.ಬಿ. ಪಾಟೀಲ, ಎಂ.ಎಸ್. ಪಾಟೀಲ, ಮಹಾದೇವಿ ತಳವಾರ ಮುಂತಾದವರು ಉಪಸ್ಥಿತರಿದ್ದರು. ಎಸ್.ಟಿ. ವಾಲ್ಮೀಕಿ ಸ್ವಾಗತಿಸಿ, ನಿರೂಪಿಸಿದರು. ಸಾಹಿತಿ ಡಾ. ಪಂಚಯ್ಯ ಹಿರೇಮಠ ವಂದಿಸಿದರು.