ಮಕ್ಕಳಿಗೆ ಸಾಹಿತ್ಯಾಭಿರುಚಿ ಬೆಳೆಸುವಲ್ಲಿ ಕೈಜೋಡಿಸಿ : ಗೋನಾಳ್

| Published : Oct 16 2023, 01:45 AM IST

ಮಕ್ಕಳಿಗೆ ಸಾಹಿತ್ಯಾಭಿರುಚಿ ಬೆಳೆಸುವಲ್ಲಿ ಕೈಜೋಡಿಸಿ : ಗೋನಾಳ್
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳಿಗೆ ಸಾಹಿತ್ಯಾಭಿರುಚಿ ಬೆಳೆಸುವಲ್ಲಿ ಕೈಜೋಡಿಸಿ : ಗೋನಾಳ್
- ರೋಟರಿ ಕ್ಲಬ್‌ನಲ್ಲಿ ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕದಿಂದ ಏರ್ಪಡಿಸಿದ್ದ ಸೇವಾದೀಕ್ಷೆ ಕಾರ್ಯಕ್ರಮ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ವಿದ್ಯಾರ್ಥಿಗಳಿಗೆ ಶಾಲಾ, ಕಾಲೇಜುಗಳಲ್ಲಿ ಸಾಹಿತ್ಯಾಭಿರುಚಿ ಬೆಳೆಸುವ ನಿಟ್ಟಿನಲ್ಲಿ ಕನ್ನಡಪರ ವೇದಿಕೆಗಳು ಮುಂದಾಗಿ ಭಾಷೆ ಬೆಳೆವಣಿಗೆಗೆ ಕೈಜೋಡಿಸಬೇಕು ಎಂದು ಸಿರಿಗನ್ನಡ ವೇದಿಕೆ ರಾಜ್ಯಾಧ್ಯಕ್ಷ ಜಿ.ಎಸ್.ಗೋನಾಳ್ ಹೇಳಿದರು. ನಗರದ ರೋಟರಿ ಕ್ಲಬ್‌ನಲ್ಲಿ ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕದಿಂದ ಭಾನುವಾರ ಏರ್ಪಡಿಸಿದ್ದ ಸೇವಾದೀಕ್ಷೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡ ಭಾಷೆ ಉಳಿಸಿ ಎಲ್ಲೆಡೆ ಪಸರಿಸುವ ನಿಟ್ಟಿನಲ್ಲಿ 2003 ರಲ್ಲಿ ಪ್ರಥಮ ಬಾರಿಗೆ ಎಂ.ಎಸ್.ವೆಂಕಟ ರಾಮಯ್ಯನವರು ಸಿರಿಗನ್ನಡ ವೇದಿಕೆ ಸ್ಥಾಪಿಸಿದರು. ಅಂದಿನಿಂದ ಇಂದಿನವರೆಗೂ ಹಲವಾರು ಕನ್ನಡ ಸಾಹಿತ್ಯಕ್ಕೆ ಪೂರಕ ಹಾಗೂ ಭಾಷೆ ಏಳಿಗೆಗೆ ಅನುಕೂಲ ಕಾರ್ಯಕ್ರಮ ರೂಪಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳಲ್ಲಿ ಕನ್ನಡ ಬಳಕೆ ತೀವ್ರ ಕಡಿಮೆಯಾಗುತ್ತಿದೆ. ಅಂತಹ ಶಾಲೆಗಳನ್ನು ಗುರುತಿಸಿ ಕನ್ನಡ ಅಂಕಿ ರಚನೆ ಹಾಗೂ ಸಾಹಿತ್ಯಾತ್ಮಕ ಪರೀಕ್ಷೆ ನಡೆಸಿ ಕನ್ನಡ ಭಾಷೆ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿರುವ ಹಿನ್ನೆಲೆಯಲ್ಲಿ ಕನ್ನಡಾಭಿಮಾನಿಗಳು ಈ ಕಾರ್ಯದಲ್ಲಿ ಒಗ್ಗಟ್ಟಾಗಬೇಕು ಎಂದು ಹೇಳಿದರು. ಸದ್ಯದಲ್ಲಿಯೇ ಸಿರಿಗನ್ನಡ ವೇದಿಕೆಯಿಂದ ಕೊಪ್ಪಳದಲ್ಲಿ ಬೃಹತ್ ಮಟ್ಟದ ಸಮ್ಮೇಳನ ನಡೆಸಲು ತೀರ್ಮಾನಿಸಿದ್ದು ರಾಜ್ಯದ ಎಲ್ಲಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮ್ಮೇಳನಕ್ಕೆ ಮೆರಗು ತರಬೇಕು ಎಂದು ಮನವಿ ಮಾಡಿದರು. ಸಿರಿಗನ್ನಡ ವೇದಿಕೆ ರಾಜ್ಯ ಕಾರ್ಯಾಧ್ಯಕ್ಷೆ ಡಾ. ಸೌಗಂಧಿಕಾ ವಿ.ಜೋಯಿಸ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಕನ್ನಡ ಭಾಷೆ ಉಳಿವಿಗಾಗಿ ಅಭಿಯಾನ ನಡೆಸುವ ಪರಿಸ್ಥಿತಿ ನಾಡಿನಲ್ಲಿ ನಿರ್ಮಾಣವಾಗಿದೆ. ನೆರೆ ರಾಜ್ಯದಂತೆ ಕನ್ನಡಿಗರು ಮಾತೃ ಭಾಷೆಯಲ್ಲಿ ಪ್ರತಿಕ್ರಿಯೆ ನೀಡಿದರೆ ಹೊರ ರಾಜ್ಯದಿಂದ ಬಂದಿರುವವರಿಗೆ ಕನ್ನಡ ಕಲಿಕೆಗೆ ಪ್ರೇರಣೆ ನೀಡಿದಂತಾಗುತ್ತದೆ ಎಂದರು. ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಜಿಲ್ಲೆ ಇಂದಿಗೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಬೇಕಿದೆ. ಆ ನಿಟ್ಟಿನಲ್ಲಿ ಸಿರಿಗನ್ನಡ ವೇದಿಕೆ ಹುಟ್ಟಿಕೊಂಡಿರುವುದು ಹೆಮ್ಮೆಯ ವಿಷಯ. ತಾವು ಕೂಡಾ ಒಂದು ಅವಧಿಯಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಮಟ್ಟದಲ್ಲಿ ಸಾಹಿತ್ಯಕ್ಕೆ ಪೂರಕವಾಗಿ ವೇದಿಕೆ ಕೆಲಸ ಮಾಡುವಂತಾಗಲಿ ಎಂದು ಶುಭ ಹಾರೈಸಿದರು. ಸಿರಿಗನ್ನಡ ವೇದಿಕೆ ಗೌರವ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ನಾಡು, ನುಡಿ ಕಾಪಾಡುವ ಹಾಗೂ ಬೆಳೆಸುವಲ್ಲಿ ಹಲವಾರು ಕನ್ನಡಪರ ಸಂಘಟನೆಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರೊಂದಿಗೆ ವೇದಿಕೆ ಒಗ್ಗಟ್ಟಾಗಿ ಕೆಲಸ ಮಾಡಿ ಸಾಹಿತ್ಯ ಚಟುವಟಿಕೆಗಳನ್ನು ನಡೆಸಿ ಅಭಿಮಾನಿಗಳಿಗೆಉಣಬಡಿಸಲು ಸದಾಸಿದ್ಧ ಎಂದು ಹೇಳಿದರು. ಇದೇ ವೇಳೆ ಜಿಲ್ಲಾ ಸಿರಿಗನ್ನಡ ವೇದಿಕೆ ಅಧ್ಯಕ್ಷ ಎಂ.ಆರ್.ಪ್ರಕಾಶ್ ಗೆ ಕಸಾಪ ಜಿಲ್ಲಾಧ್ಯಕ್ಷರು ಸೇವಾದೀಕ್ಷೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ರವೀಶ್ ಬಸಪ್ಪ, ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಎಂ.ಆರ್.ಪ್ರಕಾಶ್, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್, ಕಡೂರು ಮಾಜಿ ಅಧ್ಯಕ್ಷ ಕೆ.ಜಿ.ಶ್ರೀನಿವಾಸಮೂರ್ತಿ, ನಿವೃತ್ತ ಉಪನ್ಯಾಸಕ ಬಿ.ತಿಪ್ಪೇರುದ್ರಪ್ಪ, ಶ.ಸಾ.ಪ. ಸಂಚಾಲಕ ರಮೇಶ್ ನಾರಿನಿಂಗಜ್ಜಿ, ಪ್ರಧಾನ ಕಾರ್ಯದರ್ಶಿ ಡಿ.ಮಂಜುನಾಥಸ್ವಾಮಿ, ಮುಖಂಡರಾದ ಸಂತೋಷ್‌ ಕುಮಾರ್, ಶೀಲಾ ನಂಜುಂಡಪ್ಪ, ಮಲ್ಲಿಗೆ ಸುಧೀರ್, ಸಿರಿಗನ್ನಡ ವೇದಿಕೆ ಸಂಚಾಲಕ ಕೆ.ನಾಗರಾಜ್, ಹೆಚ್.ಡಿ.ಮಹೇಂದ್ರ ಕುಮಾರ್, ಸಂಚಾಲಕ ಎಸ್.ಬಿ.ರಾಜಣ್ಣ ಇದ್ದರು. 15 ಕೆಸಿಕೆಎಂ 3 ಚಿಕ್ಕಮಗಳೂರಿನ ರೋಟರಿ ಕ್ಲಬ್‌ನಲ್ಲಿ ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕದಿಂದ ಭಾನುವಾರ ಏರ್ಪಡಿಸಿದ್ದ ಸೇವಾದೀಕ್ಷೆ ಕಾರ್ಯಕ್ರಮವನ್ನು ಸಿರಿಗನ್ನಡ ವೇದಿಕೆ ರಾಜ್ಯಾಧ್ಯಕ್ಷ ಜಿ.ಎಸ್.ಗೋನಾಳ್ ಉದ್ಘಾಟಿಸಿದರು. ಡಾ. ಸೌಗಂಧಿಕಾ ವಿ.ಜೋಯಿಸ್, ಸೂರಿ ಶ್ರೀನಿವಾಸ್‌, ಶಿವಾನಂದಸ್ವಾಮಿ ಹಾಗೂ ಮುಖಂಡರು ಇದ್ದರು.