ಜೀತ ಪದ್ಧತಿ ನಿರ್ಮೂಲನೆಗೆ ಕೈ ಜೋಡಿಸಿ: ಡೀಸಿ ಡಾ.ಕುಮಾರ್

| Published : Feb 10 2024, 01:49 AM IST

ಜೀತ ಪದ್ಧತಿ ನಿರ್ಮೂಲನೆಗೆ ಕೈ ಜೋಡಿಸಿ: ಡೀಸಿ ಡಾ.ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

1976 ರಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸುರವರ ನೇತೃತ್ವದಲ್ಲಿ 1976ರ ಜೀತ ಪದ್ಧತಿ ನಿರ್ಮೂಲನೆ ಕಾಯ್ದೆಯನ್ನು ಅನುಷ್ಠಾನಗೊಳಿಸಿ 75 ವರ್ಷಗಳಾಗಿದ್ದರೂ ಕೆಲವು ಕಡೆ ಜೀತ ಪದ್ಧತಿ ಜೀವಂತವಾಗಿದೆ ಎಂಬುದು ಆಘಾತಕಾರಿ ವಿಷಯವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸಂವಿಧಾನದ ಆಶಯದಂತೆ ಜೀತಪದ್ಧತಿ ನಿರ್ಮೂಲನೆಯಾಗಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ. ಜಿಲ್ಲೆಯ ಜನರು ಜೀತ ಪದ್ಧತಿ ನಿರ್ಮೂಲನೆಗೆ ಕೈಜೋಡಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜೀತ ಪದ್ಧತಿಯನ್ನು ತೊಲಗಿಸುವುದಕ್ಕೆ ಮುಖ್ಯ ಔಷಧವೇ ಶಿಕ್ಷಣವಾಗಿದೆ. ಶಿಕ್ಷಣ ಎಲ್ಲರಿಗೂ ಉಚಿತವಾಗಿ ದೊರೆಯುತ್ತಿದೆ. ಶಿಕ್ಷಣ ಪಡೆದು ನಾಡಿನ ಸುಶಿಕ್ಷಿತ ಪ್ರಜೆಗಳಾಗಿ ದೇಶವನ್ನು ಕಟ್ಟೋಣ. ಪ್ರತಿಯೊಬ್ಬ ಪ್ರಜ್ಞಾವಂತ ವ್ಯಕ್ತಿಯೂ ಕೂಡ ಜೀತ ಪದ್ಧತಿ ನಿರ್ಮೂಲನೆಗೆ ಶ್ರಮಿಸಬೇಕು. ಪ್ರತಿಯೊಬ್ಬ ನಾಗರಿಕನೂ ಘನತೆಯಿಂದ ಜೀವನ ನಡೆಸಬೇಕು ಎಂಬುದು ಇದರ ಉದ್ದೇಶವಾಗಿದೆ ಎಂದರು.

ಆರ್ಥಿಕ ಮತ್ತು ಅನಕ್ಷರತೆಯ ಕಾರಣದಿಂದ ಜೀತ ಪದ್ಧತಿಯು ಇನ್ನೂ ಅಸ್ತಿತ್ವದಲ್ಲಿದೆ. ಮೂಲಭೂತ ಹಕ್ಕುಗಳಲ್ಲಿ ಒಂದಾದ ಶಿಕ್ಷಣವನ್ನು ಪ್ರತಿಯೊಬ್ಬರೂ ಪಡೆದುಕೊಂಡು ಜೀತ ಪದ್ಧತಿಯನ್ನು ನಿರ್ಮೂಲನೆಗೊಳಿಸಬೇಕು. ಎಲ್ಲಾ ಇಲಾಖೆಯ ಅಧಿಕಾರಿಗಳು ಜೀತ ಪದ್ಧತಿ ನಿರ್ಮೂಲನೆಗಾಗಿ ಜನಜಾಗೃತಿ ಮೂಡಿಸಬೇಕು. ಜೊತೆಗೆ ಜಿಲ್ಲೆಯನ್ನು ಜೀತ ಮುಕ್ತ ಜಿಲ್ಲೆಯನ್ನಾಗಿಸಬೇಕು ಎಂಬ ಆಶಯ ವ್ಯಕ್ತಪಡಿಸಿದರು.

1976 ರಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸುರವರ ನೇತೃತ್ವದಲ್ಲಿ 1976ರ ಜೀತ ಪದ್ಧತಿ ನಿರ್ಮೂಲನೆ ಕಾಯ್ದೆಯನ್ನು ಅನುಷ್ಠಾನಗೊಳಿಸಿ 75 ವರ್ಷಗಳಾಗಿದ್ದರೂ ಕೆಲವು ಕಡೆ ಜೀತ ಪದ್ಧತಿ ಜೀವಂತವಾಗಿದೆ ಎಂಬುದು ಆಘಾತಕಾರಿ ವಿಷಯವಾಗಿದೆ ಎಂದು ನುಡಿದರು.

ಜೀತ ಪದ್ಧತಿಯ ಕೆಲವೇ ಸಣ್ಣ ಪ್ರಮಾಣದ ಪ್ರಕರಣಗಳು ಬೆಳಕಿಗೆ ಬಂದಿವೆ. ದೊಡ್ಡ ಪ್ರಮಾಣದ ಪ್ರಕರಣಗಳು ಯಾರ ಕಣ್ಣಿಗೂ ಕಾಣದೆ ಹಾಗೆ ಉಳಿಯುತ್ತಿವೆ. ಇದರ ಬಗ್ಗೆ ಜನಸಾಮಾನ್ಯರು ಎಚ್ಚೆತ್ತು ಕೊಂಡು ಜೀತ ಪದ್ದತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಪಣತೊಡಬೇಕಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವಿರ್ , ಜೀತ ಪದ್ಧತಿ ನಿರ್ಮೂಲನೆಗೆ ಪ್ರಮಾಣ ವಚನ ಭೋದಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ವಾಣಿ ಎ.ಶೆಟ್ಟಿ ಮಾತನಾಡಿ, ಜೀತಕ್ಕಾಗಿ ಯಾವುದೇ ವ್ಯಕ್ತಿಯನ್ನು ದುಡಿಸಿಕೊಳ್ಳುವುದು ಅಮಾನವೀಯ ಕೃತ್ಯ. ಒತ್ತಾಯಪೂರ್ವಕವಾಗಿ ಜೀತಕ್ಕಾಗಿ ವ್ಯಕ್ತಿಯನ್ನು ಬಳಸಿಕೊಳ್ಳುವುದು ಕಾನೂನಿನಡಿ ಅಪರಾಧವಾಗಿದೆ. ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯ ಪ್ರವೃತ್ತರಾಗಬೇಕು ಎಂದು ಹೇಳಿದರು.

ಜೀತ ಪದ್ದತಿ ನಿರ್ಮೂಲನೆ ಜಾಥಾಕ್ಕೆ ಚಾಲನೆ

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾಡಳಿತದ ವತಿಯಿಂದ ಜೀತ ಪದ್ಧತಿ ನಿರ್ಮೂಲನೆ ಬಗ್ಗೆ ಜನಜಾಗೃತಿ ಮೂಡಿಸುವ ಜಾಥಾಗೆ ಚಾಲನೆ ನೀಡಲಾಯಿತು. ಜಾಥವು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಚೇರಿಯಿಂದ ಹೊರಟು ಡಿ.ಸಿ ಕಚೇರಿ, ಕಾರ್ಮೆಲ್ ಕಾನ್ವೆಂಟ್ ಮೂಲಕ ಅಂಬೇಡ್ಕರ್ ಭವನದಲ್ಲಿ ಸಮಾವೇಶಗೊಂಡಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರು ಸಂಜೀವಪ್ಪ, ಉಪ ಕಾರ್ಯದರ್ಶಿ ಆನಂದ್, ಸಮಾಜ ಕಲ್ಯಾಣ ಅಧಿಕಾರಿ ಸಿದ್ದಲಿಂಗೇಶ್ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.