ಪತ್ರಕರ್ತ ಸಂಘಗಳು ಮತ್ತಷ್ಟು ಗಟ್ಟಿಗೊಳ್ಳಬೇಕಾಗಿದೆ

| Published : Jan 20 2025, 01:31 AM IST

ಸಾರಾಂಶ

ಪತ್ರಕರ್ತರ ಸಮಸ್ಯೆಗಳಿಗೆ ಪರಿಹಾರ ಸೂಕ್ತ ಸಂದರ್ಭದಲ್ಲಿ ಸಿಗಬೇಕಾದರೆ ಪತ್ರಕರ್ತರ ಸಂಘಗಳು ಮತ್ತಷ್ಟು ಗಟ್ಟಿಗೊಳ್ಳಬೇಕಿದೆ. ಆ ಮೂಲಕ ಪತ್ರಿಕಾ ಸ್ವಾತಂತ್ರ, ಮತ್ತು ಅಭಿವ್ಯಕ್ತಿ ಸ್ವಾತಂತ್ರವನ್ನು ರಕ್ಷಣೆ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಮ್ಯಾಗ್ಸಸೆ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಡಾ.ಪಿ.ಸಾಯಿನಾಥ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಪತ್ರಕರ್ತರ ಸಮಸ್ಯೆಗಳಿಗೆ ಪರಿಹಾರ ಸೂಕ್ತ ಸಂದರ್ಭದಲ್ಲಿ ಸಿಗಬೇಕಾದರೆ ಪತ್ರಕರ್ತರ ಸಂಘಗಳು ಮತ್ತಷ್ಟು ಗಟ್ಟಿಗೊಳ್ಳಬೇಕಿದೆ. ಆ ಮೂಲಕ ಪತ್ರಿಕಾ ಸ್ವಾತಂತ್ರ, ಮತ್ತು ಅಭಿವ್ಯಕ್ತಿ ಸ್ವಾತಂತ್ರವನ್ನು ರಕ್ಷಣೆ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಮ್ಯಾಗ್ಸಸೆ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಡಾ.ಪಿ.ಸಾಯಿನಾಥ್ ತಿಳಿಸಿದ್ದಾರೆ.ನಗರದ ಶ್ರೀ ಸಿದ್ದಾರ್ಥ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ 39ನೇ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.ಪತ್ರಿಕಾ ಒಕ್ಕೂಟಗಳು ಅವನತಿಯಾದರೆ ಸ್ವಾತಂತ್ರ ಪತ್ರಿಕೋದ್ಯಮ ಸತ್ತ ಹಾಗೆ.ಆದ್ದರಿಂದ ಪತ್ರಕರ್ತರು ಮತ್ತು ಸಂಘಟನೆಗಳು ಸಂಯುಕ್ತವಾಗಿ ಇಂತಹ ವೇದಿಕೆಗಳ ಹೋರಾಟ ನಡೆಸುವ ಅಗತ್ಯವಿದೆ ಎಂದರು.ಸಮ್ಮೇಳನಗಳು, ಕಾರ್ಯಾಗಾರಗಳಲ್ಲಿ, ಪತ್ರಕರ್ತರ ಸಮಸ್ಯೆಗಳ, ಹಕ್ಕು ಬಾಧ್ಯತೆಗಳನ್ನು ಚರ್ಚಿಸಲು ಇಂತಹ ವೇದಿಕೆಗಳು ನಿರಂತರವಾಗಿ ನಡೆಯಬೇಕು. ಪತ್ರಿಕೋದ್ಯಮ ಮತ್ತು ಪತ್ರಕರ್ತರ ನಡುವೆ ಸಾಕಷ್ಟು ವೈರುಧ್ಯವಿದೆ. ಉದ್ಯಮ ಬದಲಾವಣೆಗಳನ್ನು ಕಾಣುತ್ತಿದೆ. ವೃತ್ತಿಪರ ಪತ್ರಕರ್ತರ ಬದುಕು ಹಸನಾಗಲು ಸರಕಾರಗಳನ್ನು ಮನವೊಲಿಸುವ ತೀವ್ರ ಹೋರಾಟಗಳನ್ನು ಸಮ್ಮೇಳನಗಳಲ್ಲಿ ರೂಪಿಸಬೇಕೆಂದು ಪಿ.ಸಾಯಿನಾಥ್ ಸಲಹೆ ನೀಡಿದರು.ಬಂಡವಾಳ ಶಾಹಿ ಮಾಧ್ಯಮ ದೊರೆಗಳು ಪತ್ರಿಕಾ ಕ್ಷೇತ್ರದ ಹಿಡಿತವನ್ನು ಸಾಧಿಸುತ್ತಿದ್ದಾರೆ. ಇದು ವಾಕ್ ಸ್ವಾತಂತ್ರವನ್ನು ಹತ್ತಿಕ್ಕುವ ಕೆಲಸವಾಗಿದೆ. ಎಲ್ಲಾ ಮಾಧ್ಯಮ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಕೆಲಸಗಳನ್ನು ಮಾಡಿಸುವುದರ ಮೂಲಕ ಯುವ ಪತ್ರಕರ್ತ ಸಮೂಹದ ಭವಿಷ್ಯವನ್ನು ಹಾಳು ಮಾಡುವ ಕೆಲಸ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದು ಸಾಯಿನಾಥ್ ತಿಳಿಸಿದರು.ಸ್ವಾತಂತ್ರ ಪತ್ರಕೋದ್ಯಮವನ್ನು ಮುಕ್ತವಾಗಿ ಆಸ್ವಾದಿಸುವ ಅವಕಾಶಕ್ಕೆ ಸರಕಾರಗಳು ಕೊಡಲಿ ಪೆಟ್ಟು ನೀಡುತ್ತಿವೆ. ಇದು ಅಭಿವೃದ್ಧಿ ಪತ್ರಿಕೋದ್ಯಮದ ಕತ್ತು ಹಿಸುಕುವ ಕೆಲಸವಾಗಿದೆ ಎಂದು ದೂಷಿಸಿದ ಅವರು, ದೇಶದ ಪತ್ರಿಕೋದ್ಯಮ ಪರಿಸ್ಥಿತಿ ಅವನತ್ತಿಯತ್ತ ಸಾಗಿದೆ. ಇದಕ್ಕೆ ನಮ್ಮನಾಳುವ ಸರಕಾರಗಳು ಜಾರಿಗೆ ತರುತ್ತಿರುವ ಕಾರ್ಪೋರೇಟ್ ಸಂಸ್ಕೃತಿ ಮತ್ತು ಬಂಡವಾಳ ಶಾಹಿ ಹಾಗೂ ವ್ಯಾಣಿಜ್ಯೀಕರಣದ ಪರಿಣಾಮಗಳು ಕಾರಣವಾಗಿವೆ. ಭಾರತದಲ್ಲಿ ನೈಜ ಪತ್ರಿಕೋದ್ಯಮ ಕುಸಿಯುತ್ತಿದೆ. ಇದಕ್ಕೆ ಮೇಲಿನ ಎಲ್ಲವೂ ಕಾರಣವಾಗಿದೆ ಎಂದು ಸರಕಾರದ ಧೋರಣೆಗಳನ್ನು ಖಂಡಿಸಿದರು.ಕೋರೋನ ಸಂದರ್ಭದಲ್ಲಿ ಆದ ಲಾಕ್‌ಡೌನ್‌ನಿಂದ ಸುಮಾರು 90ರಷ್ಟು ಪತ್ರಕರ್ತರು ತಮ್ಮ ಕೆಲಸ ಕೊಳೆದುಕೊಂಡರು, ಉದ್ಯೋಗ ಭದ್ರತೆಯೇ ಇಲ್ಲದಂತಾಯಿತು. ರೈತರು ಸುಮಾರು 1000 ಕ್ಕೂ ಹೆಚ್ಚು ದಿನ ಪ್ರತಿಭಟನೆ ನಡೆಸಿ, 750ಕ್ಕೂ ಹೆಚ್ಚು ಜನ ಸಾವನ್ನಪ್ಪಿದರು. ಆದರೆ ಶೇ60ರಷ್ಟು ಭಾರತದ ಮಾಧ್ಯಮಗಳು ಮೋದಿ, ಅಂಬಾನಿ, ಅದಾನಿಯ ಜಪ ಮಾಡುತ್ತಿದ್ದವು. ಮಾನವೀಯ ವರದಿಗಳನ್ನು ನಿರ್ಲಕ್ಷಿಸಲಾಯಿತು. ಜಗತ್ತಿನ ಮಾಧ್ಯಮದ ದಿಕ್ಕಿಗೂ ಭಾರತದ ಮಾಧ್ಯಮ ದೃಷ್ಟಿಕೋನಕ್ಕೂ ಅಜಗಜಾಂತರ ವ್ಯತ್ಯಾಸವನ್ನು ಕಾಣುತ್ತಿದ್ದೇವೆ ಎಂದರು. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಮಾತನಾಡಿ, ಸಮ್ಮೇಳನದ ಪತ್ರಕರ್ತರ ವೃತ್ತಿ ಬದುಕಿನ ಗುಣಮಟ್ಟ ಹೆಚ್ಚಿಸಲು ಪೂರಕವಾಗಿವೆ. 200 ವರ್ಷಗಳ ಹಿಂದಿನಿಂದಲೂ ಪತ್ರಿಕೋದ್ಯಮ ನಡೆದುಕೊಂಡು ಬಂದಿದೆ. ಹಲವಾರು ಬದಲಾವಣೆಗಳಾಗಿವೆ. ಅಚ್ಚುಮೊಳೆಯಿಂದ ಕಂಪ್ಯೂಟರ್, ಅರ್ಟಿಪಿಷಿಯಲ್ ಇಂಟಲಿಜೆನ್ಸ್ ಬಂದಿದೆ. ಆದರೆ ಪತ್ರಕರ್ತರ ಸ್ಥಿತಿಗತಿ ಬದಲಾಗಿಲ್ಲ. ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದ ಪತ್ರಕರ್ತರಲ್ಲಿ ಹಲವಾರು ವೈರುಧ್ಯಗಳಿವೆ. ಬರವಣಿಗೆಯಲ್ಲಿ ಆಸಕ್ತಿ ಇರುವವರೆ ಈ ಕ್ಷೇತ್ರಕ್ಕೆ ಬರುತ್ತಾರೆ. ಪತ್ರಕರ್ತರ ಸ್ಥಿತಿಗತಿಗಳ ಬದಲಾವಣೆಗೆ ಗಂಭೀರ ಚಿಂತನೆ ಅಗತ್ಯವಿದೆ ಎಂದರು.ಸಮಾಜದ ಆಗುಹೋಗುಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಪತ್ರಕರ್ತರಿಗೆ, ತಮ್ಮ ಕುಟುಂಬದ ಬಗ್ಗೆ ಯೋಚಿಸಬೇಕಿದೆ. ಟೀಕೆಗಳು ಸಹಜ, ಆದರೆ ಪತ್ರಕರ್ತರು ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದು ಸಮ್ಮೇಳನದಲ್ಲಿ ಚರ್ಚೆಯಾಗಬೇಕಿದೆ. ಅಭಿವೃದ್ಧಿ, ತನಿಖಾ ಪತ್ರಿಕೋದ್ಯಮ ಮರೆಯಾಗಿದೆ. ಬಳಿ ಹೇಳಿಕೆಗಳು ಹಾಗೂ ಪ್ರತಿ ಹೇಳಿಕೆಗಳಿಗೆ ಸೀಮಿತವಾಗಿದೆ. ಮಾಧ್ಯಮಗಳಿಗೆ ನಿಜವಾದ ಸವಾಲಾಗಿರುವುದು ಸೋಷಿಯಲ್ ಮೀಡಿಯಾ. ಪತ್ರಿಕೆಗಳು ಇಂದಿಗೂ ವಿಶ್ವಾಸಾರ್ಹತೆ ಉಳಿಸಿ ಕೊಂಡಿವೆ. ಅದನ್ನು ಕಾಪಾಡಿಕೊಂಡು ಹೋಗಬೇಕಾಗಿದೆ. ಗ್ರಾಮೀಣ ಪತ್ರಕರ್ತರಿಗೆ ಬಸ್‌ಪಾಸ್ ಪ್ರಕ್ರಿಯೆ ಚಾಲನೆಯಾಗಲಿದೆ. ಮುಂದಿನ 15 ದಿನದಲ್ಲಿ ಜಾರಿಗೆ ಬರಲಿದೆ. ಆರೋಗ್ಯ ವಿಮೆ ಎಷ್ಟು ಮುಖ್ಯ ಎಂಬುದನ್ನು ಕರೋನ ತೋರಿಸಿಕೊಟ್ಟಿದೆ. ಈಗಾಗಲೇ ಮುಖ್ಯಮಂತ್ರಿಗಳು ಭರವಸೆ ನೀಡಿದಂತೆ ಆರೋಗ್ಯ ವಿಮೆಗೆ ಚಾಲನೆ ಸಹ ನೀಡಿದೆ. ಎಪಿಎಲ್, ಬಿಪಿಎಲ್ ಇಲ್ಲದೆ ಅರೋಗ್ಯಭಾಗ್ಯ 2 ತಿಂಗಳಲ್ಲಿ ಕೈಗೂಡಲಿದೆ. ಸೂರು ನೀಡುವ ವಿಚಾರದಲ್ಲಿ ಜಿಲ್ಲಾಡಳಿತಗಳು ಜಾಗ ಗುರುತಿಸಿ ಕೊಟ್ಟರೆ ಅದನ್ನು ಪತ್ರಕರ್ತರಿಗೆ ನೀಡಲು ಸಿದ್ದವಿದೆ ಎಂದು ಕೆ.ವಿ.ಪ್ರಭಾಕರ್ ನುಡಿದರು. ಶಾಸಕ ಸಿ.ಬಿ.ಸುರೇಶಬಾಬು ಮಾತನಾಡಿ, ಖಡ್ಗಕ್ಕಿಂತ ಲೇಖನಿ ಹರಿತ ಎಂಬುದನ್ನು ಪದೇ ಪದೇ ಪತ್ರಕರ್ತರು ಸಾಬೀತು ಪಡಿಸುತ್ತಿದ್ದಾರೆ. ಸಮಾಜದ ದೃಷ್ಟಿಕೋನ ಸರಿಯಾಗಬೇಕಾದರೆ ಇದು ಮತ್ತಷ್ಟು ಹರಿತವಾಗಬೇಕು ಎಂದರು.ಶಾಸಕ ಬಿ.ಸುರೇಶಗೌಡ ಮಾತನಾಡಿ, ಪ್ರಜಾಪ್ರಭುತ್ವ ವಿವಿಧ ಅಂಗಗಳ ಜೊತೆಗೆ ಕೆಲಸ ಮಾಡುವ ಮಹತ್ವದ ಅಂಗವಾಗಿದೆ. ಆಡಳಿತ ಪಕ್ಷದ ನಿಜವಾದ ವಿರೋಧಪಕ್ಷ ಎಂದರೆ ಅದು ಮಾಧ್ಯಮ.10 ವರ್ಷಗಳಿಂದಲೂ ಟಿ.ವಿ ನ್ಯೂಸ್ ನೋಡುತ್ತಿಲ್ಲ. ಆದರೆ ಪತ್ರಿಕೆಗಳನ್ನು ಓದುತ್ತೇನೆ. ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಕೊಡಿಸಬೇಕಾದ ಧರ್ಮ ಪತ್ರಿಕಾಧರ್ಮ.ಆ ದರೆ ಕೆಲವ ಪತ್ರಿಕೆಗಳು ಆಡಳಿತ ಪಕ್ಷದ ಜೊತೆಗೆ ಕೈಜೋಡಿಸಿರುವುದು ವಿಪರ್ಯಾಸ.ಇದು ಬದಲಾಗಬೇಕು. ವೈಯಕ್ತಿಕವಾಗಿ ಹೇಳಿದ ಮಾತುಗಳನ್ನು ಸಾರ್ವಜನಿಕಗೊಳಿಸಿ, ನನ್ನ ಸೋಲಿಗೆ ಕಾರಣವಾಯಿತು. ರಾಜಕಾರಣಿಗಳಿಗೆ ಇದು ಸಹಜ. ಆದರೆ ಜನರ ನಂಬಿಕೆ ಕಳೆದುಕೊಳ್ಳಬಾರದು. ಸಮಾಜ ರೂಪಿಸುವ ಕೆಲಸ ಮಾಧ್ಯಮಗಳಿಂದ ಆಗಬೇಕು. ಸೂಕ್ಷ ಕಣ್ಣಿನಿಂದ ಪ್ರತಿ ಸುದ್ದಿಗಳನ್ನು ಪರಾಮರ್ಶಿಸುವ ಕೆಲಸ ಆಗಬೇಕಿದೆ. ಹಿಂಸೆಯ, ವ್ಯಕ್ತಿಯ ವೈಭವೀಕರಣದಿಂದ ಮಾಧ್ಯಮಗಳ ಘನತೆಗೆ ಕುಂದುಂಟಾಗುತ್ತಿದೆ.ತಾಜಾ ಸುದ್ದಿಗಳ ಹುಡುಕುವುದೇ ಓದುಗನಿಗೆ ದೊಡ್ಡ ಸವಾಲಾಗಿದೆ ಎಂದರು.ಜಿಲ್ಲಾಧಿಕಾರಿ ಶುಭ ಕಲ್ಯಾಣ ಮಾತನಾಡಿ, ಕಾರ್ಯಾಂಗದ ಕಣ್ಣು ಮತ್ತು ಕಿವಿ ತೆರೆಸುವ ಕೆಲಸವನ್ನು ಸದಾ ಕಾಲ ಮಾಧ್ಯಮಗಳು ಮಾಡುತ್ತಲೇ ಬಂದಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಈ ಕೆಲಸವನ್ನು ಮುದುವರೆಸಿ ಕೊಂಡು ಹೋಗುವ ಸವಾಲು ಎಲ್ಲಾ ಪತ್ರಿಕೆಗಳ ಮೇಲಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ ತಿಳಿಸಿದರು.ವೇದಿಕೆಯಲ್ಲಿ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು,ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್, ಪ್ರಧಾನ ಕಾರ್ಯದರ್ಶಿ ಟಿ.ಇ.ರಘುರಾಮ್, ಡಾ.ನಾಗಣ್ಣ, ಕಾಯರ್ ಬೋರ್ಡ್ನ ನಟರಾಜು, ಬಾಲಭವನದ ಅಧ್ಯಕ್ಷ ನಾಯ್ಡು, ರಾಷ್ಟ್ರೀಯ ಮಂಡಳಿ ಸದಸ್ಯರಾದ ಟಿ.ಎನ್.ಮಧುಕರ್, ಡಿ.ಎಂ.ಸತೀಶ್, ಅನುಶಾಂತರಾಜು ಉಪಸ್ಥಿತರಿದ್ದರು.