ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಆರಂಭದ ಕಾಲ. ಶ್ರಾವಣ ಮಾಸದ ಈ ಶುಕ್ರವಾರ ಎಲ್ಲೆಡೆ ಶ್ರೀ ವರಮಹಾಲಕ್ಷ್ಮೀ ಹಬ್ಬದ ಕಳೆಗಟ್ಟಿತ್ತು.

- ಮನೆಮನೆಗಳಲ್ಲಿ ಹೂಗಳಿಂದ ಅಲಂಕರಿಸಿ ಪೂಜೆ । ಮುತ್ತೈದೆಯರಿಗೆ ಫಲ-ತಾಂಬೂಲ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಆರಂಭದ ಕಾಲ. ಶ್ರಾವಣ ಮಾಸದ ಈ ಶುಕ್ರವಾರ ಎಲ್ಲೆಡೆ ಶ್ರೀ ವರಮಹಾಲಕ್ಷ್ಮೀ ಹಬ್ಬದ ಕಳೆಗಟ್ಟಿತ್ತು.

ಶ್ರಾವಣ ಮಾಸದಲ್ಲಿ ಹೆಣ್ಣುಮಕ್ಕಳ ಅಚ್ಚುಮೆಚ್ಚಿನ ಆಚರಣೆ ವರಮಹಾಲಕ್ಷ್ಮೀ ಹಬ್ಬ. ಪ್ರತಿ ವರ್ಷದಂತೆ ಈ ವರ್ಷವೂ ಜಿಲ್ಲೆ ಎಲ್ಲೆಡೆ ಸಂಭ್ರಮ, ಸಡಗರದಿಂದ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಯಿತು. ಮನೆಗಳ ಮುಂಭಾಗ ಬಣ್ಣಬಣ್ಣದ ರಂಗೋಲಿ ಕಾಣುತ್ತಿದ್ದವು. ಹಬ್ಬದ ಹಿನ್ನೆಲೆಯಲ್ಲಿ ಮಹಿಳೆಯರು ದೇವರ ಮನೆಯನ್ನು ಶುದ್ಧೀಕರಿಸಿ, ಮುಂಜಾನೆಯೇ ಬೆಳ್ಳಿ ಇತರೇ ಲೋಹದಲ್ಲಿ ತಯಾರಿಸಿದ ಮಹಾಲಕ್ಷ್ಮೀಯ ಮೂರ್ತಿ ಇಟ್ಟು, ಸೀರೆ ಉಡಿಸಿ ವಿವಿಧ ಹೂವುಗಳು, ಆಭರಣಗಳಿಂದ ಅಲಂಕರಿಸಿದ್ದರು. ಕೆಲವರು ಮಹಾಲಕ್ಷ್ಮೀಯ ಫೋಟೋವನ್ನು ಇಟ್ಟು ಪೂಜೆ ಸಲ್ಲಿಸಿ, ತಮ್ಮ ಇಷ್ಟಾರ್ಥಗಳು ನೆರವೇರುವಂತೆ ಪ್ರಾರ್ಥನೆ ಸಲ್ಲಿಸಿದರು.

ಮಹಿಳೆಯರು, ಯುವತಿಯರು ಸೀರೆ ಉಟ್ಟು, ಮಕ್ಕಳು ಹೊಸ ಹೊಸ ಬಟ್ಟೆಗಳನ್ನು ಧರಿಸಿ ಬಂಧುಗಳ, ಗೆಳೆಯರ ಮನೆಗಳಿಗೆ ತೆರಳಿ ಅರಿಶಿಣ ಕುಂಕುಮ ಪಡೆದು ಫಲ ತಾಂಬೂಲ, ಉಡಿ ತುಂಬಿಸಿಕೊಂಡು ಬರುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂದಿತು. ಕೆಲವರು ಮುತ್ತೈದೆಯರಿಗೆ, ಬಂಧು-ಮಿತ್ರರಿಗೆ ಫಲ-ತಾಂಬೂಲ ನೀಡಿ ಹೋಳಿಗೆ, ಸಿಹಿಯೂಟ ಉಣಬಡಿಸಿದರು.

ಹಬ್ಬದ ಹಿನ್ನೆಲೆ ಜನತೆ ಹಬ್ಬದ ಮುನ್ನಾ ದಿನವಾದ ಗುರುವಾರವೇ ಪೂಜಾ ಸಾಮಗ್ರಿಗಳನ್ನು ಖರೀದಿಸಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಶುಕ್ರವಾರ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನ, ಯಲ್ಲಮ್ಮ ನಗರದ ಯಲ್ಲಮ್ಮ ದೇವಸ್ಥಾನ, ದೇವರಾಜ ಅರಸು ಬಡಾವಣೆಯಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ, ನಿಟ್ಟುವಳ್ಳಿ ಚಾಮುಂಡೇಶ್ವರಿ ದೇವಸ್ಥಾನ, ಕಾಳಿಕಾ ದೇವಿ ದೇವಸ್ಥಾನ, ವಿನೋಬ ನಗರದ ಶ್ರೀ ಚೌಡೇಶ್ವರಿ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಅಮ್ಮನವರಿಗೆ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು. ಭಕ್ತಾದಿಗಳು ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಭಕ್ತಿ ಸಮರ್ಪಿಸಿದರು.

- - -

-21ಕೆಡಿವಿಜಿ39: ದಾವಣಗೆರೆಯಲ್ಲಿ ಶ್ರೀ ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆ ನೆರವೇರಿತು.-21ಕೆಡಿವಿಜಿ40: ದಾವಣಗೆರೆಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ರಾಜನಹಳ್ಳಿ ಮನೆತನದವರ ಮನೆಯಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮುತ್ತೈದೆಯರು ಆರತಿ ಬೆಳಗಿ ಪ್ರಾರ್ಥನೆ ಸಲ್ಲಿಸಿದರು.